ಸೂಕ್ತ ದಾಖಲೆಯೊಂದಿಗೆ ಟೀಕಿಸಿ
ಚನ್ನರಾಯಪಟ್ಟಣ: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಯಾರ ಬಗ್ಗೆಯಾದರೂ ಆರೋಪಿಸುವ ಮುನ್ನ ಸೂಕ್ತ ದಾಖಲೆ ಇಟ್ಟುಕೊಂಡು ಮಾತನಾಡುವುದನ್ನು ರೂಡಿಸಿಕೊಳ್ಳಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎ. ಮಂಜು ಅವರು, ಸಾರ್ವಜನಿಕ ಸಭೆಯಲ್ಲಿ ತಾಲೂಕಿನ ಶ್ರೀನಿವಾಸಪುರ ಸಕ್ಕರೆ ಕಾರ್ಖಾನೆಗೆ ಸೇರಿದ 5ಎಕರೆ ಪ್ರದೇಶವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಶಿಕ್ಷಣ ಟ್ರಸ್ಟ್ ಮಾಡುವ ನೆಪದಲ್ಲಿ ಗುಳುಂ ಮಾಡಲು ಹೊರಟಿದ್ದರು. ಅದನ್ನು ತಾವು ಉಳಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ತಾವಾಗಲೀ ತಮ್ಮ ಕುಟುಂಬದವರಾಗಲೀ ಒಂದು ಗುಂಟೆ ಜಮೀನನ್ನು ಮಂಜೂರು ಮಾಡಿಸಿಕೊಂಡಿರುವುದನ್ನು ಸಾಬೀತು ಮಾಡಿದರೆ ತಾವು ಅವರಿಗೆ ಶರಣಾಗುತ್ತೇವೆ ಎಂದು ತಿಳಿಸಿದರು.
ಷೇರುದಾರರಿಗೆ ಸಕ್ಕರೆ: ಕಾರ್ಖಾನೆಯ ಸಾಮಾನ್ಯ ಸಭೆಯಲ್ಲಿ ಶೇರುದಾರರು ಕಳೆದ ಎರಡು ವರ್ಷಗಳ ಹಿಂದೆ ಶಿಕ್ಷಣ ಟ್ರಸ್ಟ್ ತೆರೆಯುವಂತೆ ಒಪ್ಪಿಗೆ ನೀಡಿದ್ದರು. ಆದರೆ, ಪ್ರಸಕ್ತ ಸಾಲಿನ ಸಾಮಾನ್ಯ ಸಭೆಯಲ್ಲಿ ಶಿಕ್ಷಣ ಟ್ರಸ್ಟ್ ತೆರೆಯುವುದು ಬೇಡ. ಕಾರ್ಖಾನೆಯ ಸಾಲ ತೀರುವಳಿ ಮಾಡುವಂತೆ ತೀರ್ಮಾನಿಸಿದ್ದರಿಂದ ಷೇರುದಾರರಿಗೆ ಸಾಲ ತೀರುವಳಿಯಾಗಿ ಉಳಿದ ಹಣದಲ್ಲಿ ಷೇರುದಾರರಿಗೆ ಸಕ್ಕರೆ ನೀಡುವಂತೆ ಸೂಚನೆ ನೀಡಿದ್ದರಿಂದ ಪ್ರತಿ ಶೇರುದಾರರಿಗೆ 25 ಕೆಜಿ ಸಕ್ಕರೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆಯ್ಕೆ ಮಾಡುತ್ತಿದ್ದಾರೆ: ಜಿಲ್ಲೆಯಲ್ಲಿ ಅಪ್ಪ ಮಕ್ಕಳ ರಾಜಕಾರಣವೆಂದು ದೂರುವ ಇವರು ಕಾಂಗ್ರೆಸ್ ಪಕ್ಷದಲ್ಲಿ ಮಾಡುತ್ತಿರುವ ಕುಟುಂಬ ರಾಜಕಾರಣವನ್ನೇಕೆ ವಿರೋಧಿಸುತ್ತಿಲ್ಲ. ದೇವೇಗೌಡರು ಕಳೆದ 50 ವರ್ಷಗಳಿಂದ ರಾಜಕಾರಣ ಮಾಡುತ್ತಾ ಬಂದಿದ್ದು, ಜಿಲ್ಲೆಯ ಜನತೆಗೆ ಮೋಸದ ರಾಜಕಾರಣ ಮಾಡಿದ್ದರೆ, ಜನ ಅವರನ್ನು ರಾಜಕೀಯದಲ್ಲಿರಲು ಬಿಡುತ್ತಿರಲಿಲ್ಲ. ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗಾಗಿ ಹಲವು ಕೆಲಸ ಮಾಡಿದ್ದರಿಂದ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ ಎಂದರು.
ಬಿ- ಫಾರಂ ನೀಡುತ್ತಿದ್ದಾರೆ: ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಅವರು ತಮ್ಮನ್ನು ವಿರೋಧಿಸಿ ಪಕ್ಷಾಂತರ ಮಾಡಿದ ಹಿನ್ನಲೆಯಲ್ಲಿ ಅವರಿಗೆ ಜನತೆ ತಕ್ಕ ಪಾಠ ಕಲಿಸಿದ್ದು, ಶಾಸಕ ಸ್ಥಾನ ಸಿಗಲಿಲ್ಲವೆಂಬ ಅಧಿಕಾರದ ದಾಹದಿಂದ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ದೇವೇಗೌಡ ಅವರು ಎಂದಿಗೂ ಕುಟುಂಬ ರಾಜಕಾರಣ ಮಾಡಿಲ್ಲ. ಅದೇನೇದರೂ ಮಾಡಿದ್ದರೆ, ಜೆಡಿಎಸ್ನಿಂದ ಐದು ಬಾರಿ ಪುಟ್ಟೇಗೌಡ ಅವರಿಗೆ ಬಿ. ಫಾರಂ ನೀಡುತ್ತಿರಲಿಲ್ಲ ಎಂದು ಆರೋಪಿಸಿದರು.
ಸವಾಲು: ತಾಲೂಕಿನ ಮೂರು ಹೋಬಳಿಗಳಲ್ಲಿ ಅಂತರ್ಜಲ ಕುಸಿದಿದೆ. ಅದನ್ನು ವೃದ್ಧಿಸಲು ಕಾಂಗ್ರೆಸ್ ಸರ್ಕಾರ ಯಾವ ಕಾರ್ಯಕ್ರಮ ರೂಪಿಸಿದೆ ತಿಳಿಸಲಿ ಎಂದು ಸವಾಲು ಹಾಕಿದರು.
ಯೋಜನೆಗೆ ಶ್ರಮಿಸುವೆ: ತಾವು ಶಾಸಕರಾದ ನಂತರ ಜುಟ್ಟನಹಳ್ಳಿ ಹಿರೀಸಾವೆ ಏತ ನೀರಾವರಿ ಮಂಜೂರಾತಿ ಸೇರಿದಂತೆ ಕಾರ್ಯಕ್ರಮ ರೂಪಿಸಲು 15 ಬಾರಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಯೋಜನೆ ರೂಪಿಸುವಲ್ಲಿ ಶೇ. 50ರಷ್ಟು ಕಾರ್ಯ ಮಾಡಿದ್ದು, ಚುನಾವಣೆಯ ನಂತರದಲ್ಲಿ ಯೋಜನೆಗೆ ರೂಪು ರೇಷೆ ಸಿಗಲು ಶ್ರಮಿಸುವುದಾಗಿ ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ಪುರಸಭಾಧ್ಯಕ್ಷ ಮಂಜಣ್ಣ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಜಯಶಿವಲಿಂಗಪ್ಪ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾಳೇಗೌಡ, ಮಾಜಿ ಅಧ್ಯಕ್ಷ ಶಿವಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

