ಸ್ವಚ್ಛತೆ ಇಲ್ಲದ ಸಿಸ್ಟನ್ಗಳು
ಬೇಲೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಿಸ್ಟನ್ ಮುಖಾಂತರ ಕುಡಿಯುವ ನೀರು ಸರಾಬರಾಜಿಗೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಆದರೆ ಬಹುತೇಕ ಗ್ರಾಮಗಳಲ್ಲಿ ಸಿಸ್ಟನ್ಗಳಿಗೆ ನೀರು ತುಂಬದೆ ಸಿಸ್ಟನ್ಗಳ ಸುತ್ತಲೂ ಸ್ವಚ್ಛತೆ ಇಲ್ಲದೆ ಹುಲ್ಲು ಬೆಳೆದಿರುವುದು ಎದ್ದು ಕಾಣುತ್ತಿದೆ.
ಬೇಸಿಗೆ ಆರಂಭವಾಗಿದೆ. ಬಿಸಿಲಿನ ತಾಪ ಹೆಚ್ಚುತ್ತಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಕುಡಿಯುವ ನೀರಿನ ಸಣ್ಣ ಪ್ರಮಾಣದ ಸಿಸ್ಟನ್ ಟ್ಯಾಂಕ್ ಅಳವಡಿಕೆ ಮಾಡಿದ್ದು, ಇಲ್ಲಿಯ ತನಕ ಸಿಸ್ಟನ್ಗಳಿಗೆ ನೀರು ನೀಡುವ ಗೋಜಿಗೆ ಹೋಗದೆ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗುತ್ತಿಗೆದಾರ ಮಾತ್ರ ಕಳಪೆ ಸಿಸ್ಟನ್ ನಿರ್ಮಿಸಿ ಕೊಳವೆ ಬಾವಿಯಿಂದ ನೀರನ್ನು ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡದೆ ಕೇವಲ ಸಿಸ್ಟನ್ ಅಳವಡಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಗುತ್ತಿಗೆದಾರರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಜನರು ಕುಡಿಯುವ ನೀರಿಗಾಗಿ ಖಾಸಗಿ ಹೊಲ ಗದ್ದೆಯಿಂದ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ.ತಾಲೂಕು ಆಡಳಿತ ಇಲ್ಲಿಯ ತನಕ ಯಾವ ಕ್ರಮಕ್ಕೂ ಮುಂದಾಗಿಲ್ಲ. ಸಿಸ್ಟನ್ಗಳಿಗೆ ಪೈಪ್ಲೈನ್ ಮೂಲಕ ನೀರು ಹರಿಸಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಇನ್ನಾದರೂ ಅಧಿಕಾರಿಗಳು ಮುಂದಾಗಲಿ.
ಟಿ ಕರೀಗೌಡ, ಸಣ್ಣಸ್ವಾಮಿ, ರಂಗನಾಥ, ಕಮಲಮ್ಮ, ನಟೇಶ್, ಬೇಲೂರು ತಾ.
ಅನಧಿಕೃತ ವಿದ್ಯುತ್ ಸಂಪರ್ಕ: ಅಪಾಯಕ್ಕೆ ಆಹ್ವಾನ
ಹಾಸನ ಹೊರ ವಲಯದ ಸತ್ಯಮಂಗಲ ಪಂಚಾಯ್ತಿಗೆ ಸೇರಿದ ರಿಂಗ್ ರಸ್ತೆಯಿಂದ ಮಿನಿ ವಿಧಾನಸೌಧ ರಸ್ತೆಯಲ್ಲಿ ಎರಡು ಬೋರ್ವೆಲ್ಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಂಡಿದ್ದಾರೆ. ವಿದ್ಯುತ್ ಹರಿಯುತ್ತಿರುವ ತಂತಿಯನ್ನು ಅಡಕೆ ದಬ್ಬೆಗಳಿಗೆ ಕಟ್ಟಿ ಕೊಂಡು ನೆಲದ ಮೇಲೆಯೇ ಬಿಡಲಾಗಿದೆ. ಇದು ಲೈವ್ವೈರ್ ಆಗಿರುವುದರಿಂದ ಅಲ್ಲಿ ತಿರುಗಾಡುವ ಪಾದಚಾರಿಗಳು ಮತ್ತು ದನಕರುಗಳಿಗೆ ಅಪಾಯವಾಗುವ ಸಂಭವವಿದೆ.ಪಂಚಾಯಿತಿ ಸದಸ್ಯ ರಮೇಶ್, ಮಂಜೇಶ್ ಮತ್ತು ಸ್ವಾಮಿಗೌಡ ಇವರು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದಾಗ ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದಿಲ್ಲವೆಂದು ತಿಳಿದು ಬಂದಿದೆ. ಈ ಸಂಬಂಧ ಸೆಸ್ಕ್ ವಿಜಿಲೆನ್ಸ್ನಿಂದ ನೋಟಿಸ್ ಕೂಡ ಪಂಚಾಯಿತಿಗೆ ನೀಡಲಾಗಿದೆ. ಅಧಿಕೃತ ಸಂಪರ್ಕ ಪಡೆಯಲು ಒಪ್ಪಿಕೊಂಡಿದ್ದಾರೆ. ಆದರೆ ಪಂಚಾಯ್ತಿಯವರು ಇದನ್ನು ಕಾರ್ಯ ರೂಪಕ್ಕೆ ತರಲು ಹಿಂದು ಮುಂದು ನೋಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಟಿ ಹರೀಶ, ಅಕ್ಷಯ್, ರಾಕೇಶ್, ಸುಂದರಮ್ಮ, ಸೋಮೇಶ್, ಗಿರೀಶ್
ರಸ್ತೆ ಸ್ಥಿತಿ ಶೋಚನೀಯ
ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಾರುದ್ದದ ಗುಂಡಿಗಳು, ಕಿತ್ತು ಹಾಕಿರುವ ಡಾಂಬರ್ ಜಲ್ಲಿಕಲ್ಲುಗಳ ಹಾಸು. ಇದು ಗ್ರಾಮೀಣ ರಸ್ತೆಯ ಚಿತ್ರಣ ಎಂದು ಕೊಂಡರೆ ತಪ್ಪಾಗುತ್ತದೆ. ಇದು ಕೇರಳಾಪುರ-ಹಿರಿಯೂರು ರಸ್ತೆಯ ಶೋಚನೀಯ ಸ್ಥಿತಿ.
ಈ ರಸ್ತೆ ಡಾಂಬರೀಕರಣಕ್ಕೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅರಸೀಕೆರೆಯಿಂದ ಪಂಚನಹಳ್ಳಿ ಹ್ಯಾಂಡ್ಪೋಸ್ಟ್ ವರೆಗೆ 23 ಕೋಟಿ ರು. ವೆಚ್ಚದಲ್ಲಿ ಡಾಂಬರೀಕರಣಕ್ಕೆ ಹಣ ಸಹ ಬಿಡುಗಡೆಯಾಗಿ, ಟೆಂಡರ್ ಕರೆಯಲಾಗಿತ್ತು. ಆದರೆ ಕೆಲವು ಕಾಣದ ಕೈಗಳು ರಸ್ತೆ ಕಾಮಗಾರಿಗೆ ಅಡಚಣೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಪಂಚನಹಳ್ಳಿ ಹ್ಯಾಂಡ್ಫೋಸ್ಟ್ನಿಂದ ಬಿಳಿಕಲ್ ಗೇಟ್ವರೆಗೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಇದ್ದ ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ಈ ರಸ್ತೆ ಬದಿಯಲ್ಲಿ ಬರುವ ದೋಣನಕಟ್ಟೆ ಕತ್ತಿನಕೆರೆ, ಪಿ. ಹೊಸಹಳ್ಳಿ, ಮಾಡಾಳು, ನಿವಾಸಿಗಳ ನೆಮ್ಮದಿ ಕೆಡಿಸಿದೆ. ಅಲ್ಲದೆ ರಸ್ತೆ ಬದಿಯಿರುವ ಮನೆಗಳು, ತೆಂಗಿನಮರ ಹಾಗೂ ಬಾಳೆಗಿಡಗಳನ್ನು ಕೆಂಪಾಗಿಸಿದೆ. ಸುಮಾರು 6 ಕಿ.ಮೀ ಉದ್ದಕ್ಕೂ ದುರಸ್ತಿಗಾಗಿ ರಸ್ತೆಯನ್ನು ಅಗೆಯಲಾಗಿದೆ.
ಟಿ ಚಿಕ್ಕೇಗೌಡ, ಪದ್ಮರಾಜು, ಯತೀಶ, ವಿಜಯಕುಮಾರ್, ಸರಸ್ವತಿ ಮಾಡಾಳು ಗ್ರಾಮ
ಯುಜಿಡಿ ನೀರು ರಸ್ತೆ ಮೇಲೆ ಹರಿದು ಗಬ್ಬು ವಾಸನೆ
ಹಾಸನ ನಗರದ ಹೃದಯ ಭಾಗವಾಗಿರುವ ಹಳೆ ಬಸ್ನಿಲ್ದಾಣ ಬಳಿ ಹೇಮಾವತಿ ಪ್ರತಿಮೆ ಮುಂಭಾಗದಲ್ಲಿ ಕಳೆದ ರಾತ್ರಿಯಿಂದ ರಸ್ತೆ ಮೇಲೆ ಯುಜಿಡಿ ಕಟ್ಟಿಕೊಂಡು ಗಬ್ಬು ನೀರು ಹರಿಯುತ್ತಿದೆ. ಈ ಭಾಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದೆ ರೀತಿ ಪಾದಚಾರಿಗಳು ಕೂಡ ನಡೆದಾಡುತ್ತಾರೆ. ಅತಿ ವೇಗದಲ್ಲಿ ವಾಹನ ಸಂಚರಿಸಿದರೆ ನಡೆದಾಡುವವರಿಗೆ ಕೊಳಚೆ ನೀರಿನ ಸ್ನಾನ ಖಂಡಿತ. ನಂತರ ಮನೆಯಲ್ಲಿ ಮತ್ತೊಂದು ಸ್ನಾನ ಆಗಲೇಬೇಕು. ಒಂದು ದಿವಸ ಆದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡಿ ಸರಿಪಡಿಸದೆ ಬೇಜವಾಬ್ಧಾರಿತನದಿಂದ ಇದ್ದಾರೆ ಎಂದೆನಿಸುತ್ತಿದೆ.
ಟಿ ಅನ್ವರ್ಪಾಷಾ, ಯಶ್ವಂತ್, ಅನಿಲ್, ಜಗದೀಶ್, ಪಂಕಜ, ಮಂಜುಳ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

