ದಲಿತ- ಮುಸ್ಲಿಂ ಬೆಂಬಲಿತ ಅಭ್ಯರ್ಥಿ ಕಣಕ್ಕಿಳಿಸಿ
ಹಾಸನ: ಪ್ರತಿಷ್ಠಿತ ಹಾಸನ ಲೋಕಸಭಾ ಕ್ಷೇತ್ರದಿಂದ ದಲಿತ ಮತ್ತು ಮುಸ್ಲಿಂ ಸಮುದಾಯದ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ದಲಿತ ಮತ್ತು ಮುಸ್ಲಿಂ ಮುಖಂಡರು ತೀರ್ಮಾನಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಗರದ ಎಸ್ಡಿಪಿಐ ಕಚೇರಿಯಲ್ಲಿ ಸೋಮವಾರ ನಡೆದ ದಲಿತ ಮತ್ತು ಮುಸ್ಲಿಂ ಐಕ್ಯತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು ಆರ್ಪಿಐ, ಪಿಎಫ್ಐ, ಎಸ್ಡಿಪಿಐ, ಸಮತಾ ಸೈನಿಕ ದಳ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ವಿವಿಧ ದಲಿತ ಮತ್ತು ಪ್ರಗತಿಪರ ಮುಖಂಡರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಬದಲಾವಣೆ ತನ್ನಿ: ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಮುಖಂಡ ಹಾಗೂ ಸಮತಾ ಸೈನಿಕ ದಳದ ಹೆತ್ತೂರು ನಾಗರಾಜ್, ಜಿಲ್ಲೆಯಲ್ಲಿ ದಲಿತರು ಮತ್ತು ಮುಸ್ಲಿಂರನ್ನು ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಗಳು ಸಂಪೂರ್ಣ ನಿರ್ಲಕ್ಷಿಸಿದ್ದು ಕೇವಲ ವೋಟ್ ಬ್ಯಾಂಕ್ಗಳಂತೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಈ ನಿಟ್ಟಿನಲ್ಲಿ ದಲಿತರು ಮತ್ತು ಮುಸ್ಲಿಂರು ಪರ್ಯಾಯ ರಾಜಕಾರಣ ಮಾಡುವ ಮೂಲಕ ವಂಶಾಡಳಿತಕ್ಕೆ ಕೊನೆ ಹಾಡಬೇಕಿದೆ ಎಂದು ಅವರು ಕರೆ ನೀಡಿದರು.
ಈ ಜಿಲ್ಲೆಯಲ್ಲಿ ದಲಿತರು ಮತ್ತು ಮುಸ್ಲಿಮರು ಒಟ್ಟು 6 ಲಕ್ಷಕ್ಕೂ ಹೆಚ್ಚು ಓಟುಗಳಿದ್ದು ಈ ಬಾರಿ ಜಿಲ್ಲೆಯ ರಾಜಕಾರಣದಲ್ಲಿ ಬದಲಾವಣೆ ತರಬೇಕೆಂದು ಮನವಿ ಮಾಡಿದರು.
ಎಲ್ಲಾ ಪಕ್ಷಗಳಿಂದ ಅನ್ಯಾಯ: ಆರ್ಪಿಐ ಜಿಲ್ಲಾಧ್ಯಕ್ಷ ಸತೀಶ್ ಮಾತನಾಡಿ, ಕಳೆದ 10 ವರ್ಷಗಳಿಂದ ದಲಿತರನ್ನು ಕಡೆಗಣಿಸಿರುವ ಮಾಜಿ ಪ್ರಧಾನಿ ದೇವೇಗೌಡರು, ದಲಿತರಿಗೆ ಕೊಟ್ಟ ಕೊಡುಗೆ ಏನೆಂದು ಬಹಿರಂಗಪಡಿಸಲಿ ಎಂದು ಪ್ರಶ್ನಿಸಿದರು. ಇಡೀ ಜಿಲ್ಲೆಯಲ್ಲಿ ದಲಿತರ ಸಮುದಾಯ ಭವನಗಳಿಗೆ ದೇವೇಗೌಡರು ಅನುದಾನ ಬಿಡುಗಡೆ ಮಾಡಿದ ಉದಾಹರಣೆ ಇಲ್ಲ. ಕಾಂಗ್ರೆಸ್ ಕೂಡ ದಲಿತರಿಗೆ ರಾಜಕೀಯ ಅಧಿಕಾರ ನೀಡಲು ನಿರಾಸಕ್ತಿ ತೋರಿಸುವ ಮೂಲಕ ಜಾತಿ ರಾಜಕಾರಣ ಮಾಡುತ್ತಿದೆ ಎಂದರು.
ಎರಡೂ ಪಕ್ಷಗಳಿಗೆ ಪಾಠ ಕಲಿಸಬೇಕು: 10 ವರ್ಷಗಳಿಂದ ಮುಸ್ಲಿಂ ಮತ್ತು ದಲಿತ ಸಮುದಾಯ ರಾಜಕೀಯ ಬಲಿಪಶುಗಳಾಗುತ್ತಿದ್ದಾರೆ. ಕೋಮುವಾದಿ ಬಿಜೆಪಿ ಎಂದಿಗೂ ದಲಿತರಿಗೆ ಮತ್ತು ಮುಸ್ಲಿಂ ರಿಗೆ ಒಪ್ಪಿಗೆಯಾಗಲಾರದು. ಉಳಿದ ಜಿಲ್ಲೆಯ ಎರಡೂ ಪಕ್ಷಗಳಿಗೆ ಪಾಠ ಕಲಿಸಬೇಕು ಎಂದು ಹೇಳಿದರು.
ದೇವೇಗೌಡರಿಗೆ ಮತ ನೀಡಬೇಡಿ: ಅಧ್ಯಕ್ಷತೆ ವಹಿಸಿದ್ದ ಪಿಎಫ್ಐ ಜಿಲ್ಲಾಧ್ಯಕ್ಷ ಸೂಫಿ ಇಬ್ರಾಹಿಂ ಮಾತನಾಡಿ, ಹಿಂದೂ ಮುಸ್ಲಿಂ ಗಲಭೆ ನಡೆದಾಗ ಅಮಾಯಕ ಮುಸ್ಲಿಂರ ಮೇಲೆ ಸುಳ್ಳು ಕೇಸು ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಸೌಜನ್ಯಕ್ಕಾಗಿಯಾದರೂ ವಿಚಾರಿಸದ ದೇವೇಗೌಡರು ಇದೀಗ ಮೊಸಳೆ ಕಣ್ಣೀರು ಸುರಿಸಿಕೊಂಡು ಮುಸ್ಲಿಮರನ್ನು ಓಲೈಸಲು ಬಂದಿದ್ದಾರೆ. ಸ್ವಾಭಿಮಾನ ಇರುವ ಯಾವ ಮುಸ್ಲಿಮರೂ ಅವರಿಗೆ ಮತ ನೀಡಬಾರದು. ಇವರ ಪ್ರಭಾವ ಇರುವ ಹಾಸನ ಜಿಲ್ಲೆಯಲ್ಲಿ ಯಾವ ಮುಸ್ಲಿಂ ಮುಖಂಡನನ್ನು ರಾಜಕೀಯವಾಗಿ ಬೆಳೆಸಿದ್ದಾರೆ? ಇಡೀ ಜಿಲ್ಲೆಯಲ್ಲಿ ಇವರ ಇತಿಹಾಸದಲ್ಲಿ ಒಬ್ಬನೇ ಒಬ್ಬ ಮುಸ್ಲಿಂಗೆ ಎಂಎಲ್ಎ , ಎಂಎಲ್ಸಿ, ಎಂಪಿ ಚುನಾವಣೆಗೆ ಟಿಕೆಟ್ ಕೊಟ್ಟ ಉದಾಹರಣೆ ಇಲ್ಲ. ಇಂತಹವರಿಗೆ ಮತ ಕೊಟ್ಟು ಮತ್ತೆ ಮೋಸ ಹೋಗಬಾರದೆಂದು ಮನವಿ ಮಾಡಿದರು.
ಎಸ್ಡಿಪಿಐ ಮುಖಂಡ ಫರೀದ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಇರ್ಷಾದ್, ಯುವ ಮುಖಂಡ ನಿಟ್ಟೂರು ಸ್ವಾಮಿ, ನಿಟ್ಟೂರು ಹರೀಶ್ ಇತರೆ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

