ಹಾಸನ

ಧಾರ್ಮಿಕ ತಳಹದಿ ಮೋಕ್ಷಕ್ಕೆ ಸಹಕಾರಿ

Published On :

ಹೊಳೆನರಸೀಪುರ: ಮನುಷ್ಯ ಧಾರ್ಮಿಕ ತಳಹದಿಯ ಮೇಲೆ ಸುಭದ್ರವಾಗಿ ನಿಂತಾಗ ಮಾತ್ರವೇ ಮೋಕ್ಷ ಸಾಧನೆ ಸಾಧ್ಯವಾಗುತ್ತದೆ ಎಂದು ಅರಕಲಗೂಡು ತಾಲೂಕಿನ ಅರೆಮಾದನಹಳ್ಳಿ ಮಠದ ಶ್ರೀ ಗುರುಶಿವಸುಜ್ಞಾನಮೂರ್ತಿ ಮಹಾಸ್ವಾಮಿ ನುಡಿದರು.
ಪಟ್ಟಣದಲ್ಲಿನ ಭಕ್ತಿವರ್ಧನ ಪ್ರತಿಷ್ಠಾನ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ 5 ದಿನಗಳ ಕಾಲ ಹಮ್ಮಿಕೊಂಡಿರುವ 12ನೇ ವರ್ಷದ ನೃಸಿಂಹೋತ್ಸವ- ಭಕ್ತಿಮೇಳಕ್ಕೆ ಸೋಮವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿಷಾದನೀಯ: ಇಡೀ ವಿಶ್ವವೇ ಭಾರತೀಯ ಸಂಸ್ಕತಿ ಹಾಗೂ ಪರಂಪರೆ ಆಧರಿಸಿ ತಮ್ಮಲ್ಲಿ ಅಳವಡಿಸಿಕೊಳ್ಳಲು ಮುಂದಾಗಿರುವ ಸನ್ನಿವೇಶದಲ್ಲಿ ಕ್ಷಣಿಕ ಸುಖಕ್ಕಾಗಿ ಮಾರುಹೋದ ಯುವ ಜನತೆಯು ಇಂದಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕತಿಯೆಡೆಗೆ ಮಾರುಹೋಗುತ್ತಿರುವುದು ವಿಷಾದನೀಯ ಸಂಗತಿ ಎಂದರು.
ಅವಶ್ಯಕತೆಯಿದೆ: ತಾತ್ಕಾಲಿಕ ಸುಖವೇ ತನ್ನ ಪರಮ ಸುಖವೆಂದು ಭಾವಿಸಿ ಜೀವಿಸುತ್ತಿರುವ ಮನುಷ್ಯ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಮರೆತಿದ್ದಾನೆ. ಮನುಷ್ಯನ ಬಾಳು ಸಂಪನ್ನವಾಗಲು ಮನುಷ್ಯತ್ವ, ಮುಮುಕ್ಷತ್ವ ಹಾಗೂ ಮಹಾಪುರುಷ ಸಂಶ್ರಯಗಳ ಅವಶ್ಯಕತೆ ಇದೆ ಎಂದರು.
ಸಹಕಾರಕ್ಕೆ ಮನವಿ: ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಅರಕಲಗೂಡು ತಾಂಡವೇಶ್ವರ, ಸಾಂಸ್ಕೃತಿಕ ಚಟುವಟಿಕೆಗಳನ್ನು ಎಲ್ಲರ ಸಹಕಾರಗಳೊಂದಿಗೆ ಪ್ರತಿಷ್ಠಾನದಿಂದ ಟ್ರಸ್ಟ್ ಆಗಿ ಪರಿವರ್ತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಗೀತ- ನೃತ್ಯ ಪ್ರವಚನಗಳನ್ನೊಳಗೊಂಡ ಸದಭಿರುಚಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಭಕ್ತಿವರ್ಧನ ಪ್ರತಿಷ್ಠಾನದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿನ ಸಂಕ್ರಾಂತಿ ಮಂಟಪದಲ್ಲಿ ವಿ.ಎಚ್.ಎಸ್. ಸ್ವಾಮಿ ಮತ್ತು ರಾಮಚಂದ್ರ ಬಳಗದಿಂದ ಮಂಗಳವಾದ್ಯ ನಡೆಯಿತು. ನಂತರ ಬೆಂಗಳೂರಿನ ನಂದಿನಿ ಕೆ. ಮೆಹ್ತಾ ಮತ್ತು ಕೆ. ಮುರಳಿ ಮೋಹನ್ ನಿರ್ದೇಶನದಲ್ಲಿ ನಾದಂ ಬಳಗದಿಂದ ಭಾರತೀಯ ನಾನಾ ನೃತ್ಯ ಪ್ರಕಾರ ಒಳಗೊಂಡ ನೃತ್ಯ ವೈಭವ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಸ್ಥಳೀಯ ಯುವ ಪ್ರತಿಭೆ ಎಚ್.ಎಸ್.ಸುಬ್ರಹ್ಮಣ್ಯ ಅವರಿಂದ ಪ್ರಾರ್ಥನೆ ನೆರವೇರಿತು. ಜಯಸಿಂಹ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಬಿ.ವಿ. ಸುಂದರ್, ಖಜಾಂಚಿ ಭರತ್ ಕುಮಾರ್, ಟ್ರಸ್ಟಿಗಳಾದ ಯುವ ವಕೀಲ ಎ. ಶ್ರೀಧರ್, ಎಚ್.ವಿ. ಸುರೇಶ್ ಕುಮಾರ್, ಎಸ್. ಪ್ರಮೋದ್, ಮಹೇಶ್, ಕೃಷ್ಣ, ಕೆ.ಎಂ. ಹೊನ್ನಪ್ಪ. ಜಯಶಂಕರಪ್ಪ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.