ಅಬಕಾರಿ ಅಧಿಕಾರಿಗಳಿಗೆ ಘೇರಾವ್
ಬೇಲೂರು: ಮಸೀದಿ ಸಮೀಪದಲ್ಲಿ ವೈನ್ ಅಂಗಡಿಗೆ ಅನುಮತಿ ನೀಡಿರುವ ಕುರಿತಂತೆ ರೊಚ್ಚಿಗೆದ್ದಿರುವ ಜನತೆ, ಇತ್ತೀಚೆಗೆ ಅಬಕಾರಿ ಅಧಿಕಾರಿಗಳಿಗೆ ಘೇರಾವ್ ಮಾಡಿದ ಘಟನೆ ನಡೆಯಿತು.
ಮಸೀದಿ ಹತ್ತಿರ ವೈನ್ ಸ್ಟೋರ್ ತಲೆಎತ್ತುತ್ತಿರುವ ವಿಚಾರ ವಿವಾದವಾಗಿ ಬದಲಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆಜ್ಞಾನುಸಾರ ಅಬಕಾರಿ ಅಧಿಕಾರಿಗಳು ಪ್ರದೇಶದ ಸರ್ವೆ ಮಾಡಲು ಸ್ಥಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಘೇರಾವ್ ಮಾಡಿ, ವೈನ್ ಶಾಪ್ಗೆ ಪರವಾನಗಿ ನೀಡಿದ್ದರ ಬಗ್ಗೆ ತಮ್ಮ ಅಸಹನೆ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆ: ಪಟ್ಟಣದ ನೆಹರೂ ನಗರದ ಮುಖ್ಯರಸ್ತೆಯ ಪಕ್ಕದ ಕಟ್ಟಡದಲ್ಲಿ ರೇಣುಕಾಂಬಾ ವೈನ್ ಸ್ಟೋರ್ ನಡೆಸಲು ನೀಡಲಾಗಿತ್ತು. ಈ ಪ್ರದೇಶದಲ್ಲಿ ಮದೀನ ಮಸೀದಿ, ಶಾಲೆಗಳು ಇದ್ದು, ಇಲ್ಲಿ ವೈನ್ ಶಾಪ್ಗೆ ಅವಕಾಶ ನೀಡದಂತೆ ಮದೀನ ಮಸೀದಿಯ ಪ್ರಮುಖರು, ಸಾರ್ವಜನಿಕರು, ಸಂಘ- ಸಂಸ್ಥೆಗಳ ಮುಖಂಡರು ತಾಕೀತು ಮಾಡಿದ್ದರು. ಅಲ್ಲದೇ, ಈ ಬಗ್ಗೆ ಪ್ರತಿಭಟನೆಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಇತ್ಯಾದಿ ನಡೆದಿದ್ದವು. ಆದರೂ, ಅಬಕಾರಿ ಅಧಿಕಾರಿಗಳು ವೈನ್ ಸ್ಟೋರ್ ಪರವಾನಗಿ ರದ್ದುಗೊಳಿಸುವ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇದು ಆನಂತರ ಜಿಲ್ಲಾಧಿಕಾರಿವರೆಗೂ ಹೋಗಿತ್ತು. ಜಿಲ್ಲಾಧಿಕಾರಿಯವರು ಸ್ಥಳದ ಸರ್ವೇ ಮಾಡಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಸರ್ವೇ ಕಾರ್ಯ ಕೈಗೊಳ್ಳಲು ಅಬಕಾರಿ ಇಲಾಖೆಯ ಅಧಿಕಾರಿಗಳು ಬುಧವಾರ ಸ್ಥಳಕ್ಕಾಗಮಿಸಿದ್ದರು.
ಘೋಷಣೆ ಕೂಗಿದರು: ಸರ್ವೇ ಕಾರ್ಯ ಕೈಗೊಂಡಿದ್ದಾಗ, ಅಬಕಾರಿ ಜಿಲ್ಲಾಧಿಕಾರಿ ಹೂವಪ್ಪ ಗೌಡ ಹಾಗೂ ಇತರ ಅಧಿಕಾರಿಗಳ ವಿರುದ್ಧ ಸಂಘಟನೆಗಳ ಪ್ರಮುಖರು ಹಾಗೂ ಮಸೀದಿ ಸದಸ್ಯರು ಘೋಷಣೆ ಕೂಗಿದರು. ಸರ್ವೇ ಮುಗಿದ ನಂತರ, ವಾಹನ ಹತ್ತಿ ತೆರಳಲು ಮುಂದಾದ ಅಬಕಾರಿ ಅಧಿಕಾರಿಗೆ ವಾಹನ ತಡೆದು ಘೆರಾವ್ ಮಾಡಿ ವಾಹನ ಮುಂಭಾಗ ಧರಣಿ ನಡೆಸಿದರು.
ಪ್ರತಿಭಟನೆ: ಈ ಸಂದರ್ಭದಲ್ಲಿ, ಪುರಸಭಾ ಸದಸ್ಯ ಮಂಜುನಾಥ್, ರೈತ ಸಂಘದ ಸ್ವಾಮಿಗೌಡ, ಕರವೇ ಪ್ರಮುಖ ಚಂದ್ರಶೇಖರ್, ಕರ್ನಾಟಕ ಕಾವಲು ಪಡೆ ಪೈಂಟರ್ ರವಿ, ಮಸೀದಿಯ ಅಬ್ದುಲ್ ಅಲಿ, ಜಯಕರ್ನಾಟಕ ಅರುಣ್ ಕುಮಾರ್ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ರಸ್ತೆ ತಡೆ: ರೇಣುಕಾಂಬ ವೈನ್ಸ್ ಮಾಲೀಕರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಆರೋಪಗಳನ್ನು ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಂದಾಯ ಇಲಾಖೆ ಡಿ.ಸಿ. ಸ್ಥಳಕ್ಕೆ ಆಗಮಿಸುವವರೆಗೆ ವಾಹನ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆತಡೆ ಸಹ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಪಿಐ ಗಣೇಶ್, ಅಬಕಾರಿ ಕಚೇರಿಯಲ್ಲಿ ಕುಳಿತು ಮಾತನಾಡುವಂತೆ ಸಲಹೆ ನೀಡಿ, ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

