ಒಂದೇ ದಿನ 2 ಕಾಡಾನೆಗಳ ಸೆರೆ
ಸಕಲೇಶಪುರ: ಸುಪ್ರೀಂ ಕೋರ್ಟ್ನ ಆದೇಶದಂತೆ ಕಾಡಾನೆ ಸೆರೆಗೆ ಮುಂದಾಗಿರುವ ಅರಣ್ಯ ಇಲಾಖೆ, ಇದೇ ಮೊದಲ ಬಾರಿಗೆ ಒಂದೇ ದಿನ ಎರಡು ಕಾಡಾನೆ ಸೆರೆ ಹಿಡಿದು ತನ್ನ ಕಾರ್ಯಾಚರಣೆಯಲ್ಲಿ ದೊಡ್ಡ ಯಶಸ್ಸು ಸಾಧಿಸಿದೆ. ತಾಲೂಕಿನ ಹೆತ್ತೂರು ಗ್ರಾಮ ಸಮೀಪದ ಕಾಫಿ ಎಸ್ಟೇಟ್ನಲ್ಲಿ ಬುಧವಾರ ಎರಡು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಫೆಬ್ರವರಿಯಿಂದ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ 8 ಕಾಡಾನೆಗಳನ್ನು ಆಲೂರು ಹಾಗೂ ಸಕಲೇಶಪುರ ತಾಲೂಕಿನ ನಾನಾ ಭಾಗಗಳಲ್ಲಿ ಸೆರೆಹಿಡಿಯಲಾಗಿತ್ತು. ಬುಧವಾರ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆಗೆ ಮೊದಲು ಜಯದೇವ್ ಎಂಬವವರ ಐಗೂರು ಕಾಫಿ ಎಸ್ಟೇಟ್ನಲ್ಲಿ ಸುಮಾರು 20 ಕಾಡಾನೆಗಳ ಗುಂಪು ಬೀಡು ಬಿಟ್ಟಿರುವುದು ಪತ್ತೆಯಾಗಿತ್ತು. ಈ ಗುಂಪಿನಲ್ಲಿದ್ದ ಸುಮಾರು 14 ವರ್ಷದ ಗಂಡಾನೆಯನ್ನು ಗುಂಪಿನಿಂದ ಬೇರ್ಪಡಿಸಿದ ಅರಣ್ಯ ಇಲಾಖೆ ನೌಕರರು, ಮದ್ಯಾಹ್ನ 1.30ರ ಸಮಯದಲ್ಲಿ ಅರವಳಿಕೆ ಮದ್ದು ನೀಡುವಲ್ಲಿ ಯಶಸ್ವಿಯಾದರು. ಬಳಿಕ ಆನೆಯನ್ನು ಸೆರೆ ಹಿಡಿದರು. ಮತ್ತೊಂದು ಕಾಡಾನೆ ಸೆರೆಗೆ ಅರಣ್ಯ ಇಲಾಖೆ ತಂಡ ಸಿದ್ಧತೆ ನಡೆಸಿತ್ತು. ಆ ವೇಳೆಗೆ ಹಾಡ್ಯ ಗ್ರಾಮ ಸಮೀಪದ ಅರಣ್ಯಕ್ಕೆ ತೆರಳಿದ್ದ ಕಾಡಾನೆ ಗುಂಪನ್ನು ಮತ್ತೆ ಪತ್ತೆ ಮಾಡಿ ಗುಂಪಿನಲ್ಲಿದ್ದ ಮತ್ತೊಂದು 14 ವರ್ಷದ ಆನೆಯನ್ನು ಗುಂಪಿನಿಂದ ಬೇರ್ಪಡಿಸಿದರು. ಸುಮಾರು 4.15ರ ವೇಳೆಗೆ ಈ ಆನೆಗೂ ಅರವಳಿಕೆ ಮದ್ದು ಹಾರಿಸಲಾಯಿತು. ಆದರೆ, ಅರವಳಿಕೆ ಚುಚ್ಚುಮದ್ದು ಚುಚ್ಚಿಕೊಂಡ ನಂತರವೂ ಆನೆ ತುಂಬಾ ದೂರ ಓಡಿ ನಿರ್ಮಾ ಕಾಫಿ ಎಸ್ಟೇಟ್ನಲ್ಲಿ ಪ್ರಜ್ಞಾಹೀನವಾಗಿ ಬಿದ್ದಿತ್ತು. ಬಳಿಕ ಈ ಆನೆಯನ್ನು ಸೆರೆ ಹಿಡಿದು ಐಗೂರು ಗ್ರಾಮದಲ್ಲಿ ಕಟ್ಟಿ ಹಾಕಲಾಗಿದೆ. ಈ ಆನೆಗಳನ್ನು ಗುರುವಾರ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರಿವೆ ಆನೆ ಕ್ಯಾಂಪ್ಗೆ ಸಾಗಿಸಲಾಗುವುದು ಎಂದು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಸರಿನಲ್ಲಿ ಸಿಲುಕಿ ಹೆಣ್ಣಾನೆ ಸಾವು
ಹನೂರು: ಮಲೆ ಮಹದೇಶ್ವರ ವನ್ಯಜೀವಿ ಅರಣ್ಯದ ಯಡಹಳ್ಳಿ ದೊಡ್ಡಿ ಸಮೀಪದ ಸೀಗಯ್ಯನಕೆರೆಯಲ್ಲಿ 40 ವರ್ಷದ ಹೆಣ್ಣಾನೆ ಗುರುವಾರ ಬೆಳಗಿನ ಜಾವ ಮೃತಪಟ್ಟಿದೆ. ಮಲೆ ಮಹದೇಶ್ವರ ವನ್ಯಜೀವಿ ವಲಯದ ಅಲಗುಮೂಲೆ ಅರಣ್ಯಪ್ರದೇಶದಿಂದ ಬಂದ ಕಾಡಾನೆಗಳ ಹಿಂಡು ನೀರು ಕುಡಿಯಲು ಸೀಗಯ್ಯನ ಕೆರೆಗೆ ಬಂದಿದ್ದು, ವಾಪಸ್ ಹೋಗುವ ಸಂದರ್ಭದಲ್ಲಿ ಈ ಹೆಣ್ಣಾನೆ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದೆ. ಕೆಸರಿನಲ್ಲಿ ಸಿಲುಕಿದ್ದ ಆನೆಗೆ ಕರುಳು ಬೇನೆ ತಗುಲಿದ್ದರಿಂದ ನಿತ್ರಾಣಗೊಂಡಿತ್ತು. ಸುದ್ದಿ ತಿಳಿದ ತಕ್ಷಣ ಉಪ ಸಂರಕ್ಷಣಾಧಿಕಾರಿ ವೆಂಕಟರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜು, ಆರ್ಎಫ್ಓ ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ವೈದ್ಯಾಧಿಕಾರಿ ನಾಗರಾಜು ಆನೆಯ ಶವ ಪರೀಕ್ಷೆ ನಡೆಸಿದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಬ್ಲೂಫಿಲಂ ಚಿತ್ರೀಕರಣ: 554ಪುಟ ಚಾರ್ಜ್ಶೀಟ್
ಮಂಗಳೂರು: ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ 8 ಆರೋಪಿಗಳ ವಿರುದ್ಧ 554 ಪುಟಗಳ ಆರೋಪ ಪಟ್ಟಿ ದಾಖಲಿಸಲಾಗಿದೆ. ಮೂರನೇ ಜೆಎಂಎಫ್ಸಿ ಕೋರ್ಟ್ಗೆ ತನಿಖಾಧಿಕಾರಿ ಇನ್ಸ್ಪೆಕ್ಟರ್ ಧರ್ಮೇಂದ್ರ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ವೈದ್ಯಕೀಯ ವಿದ್ಯಾರ್ಥಿನಿಯ ಗೆಳೆಯನನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿನಿ ಕಾಲೇಜ್ ಅರ್ಧಕ್ಕೆ ಮುಗಿಸಿ ತನ್ನೂರಿಗೆ ಹೋಗಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

