ಕಮರುತ್ತಿರುವ ಹೆಣ್ಣು ಮಕ್ಕಳ ಪ್ರತಿಭೆ: ಗೀತಾ
ಅರಸೀಕೆರೆ: ಸಾಮಾನ್ಯವಾಗಿ ಬ್ರಾಹ್ಮಣ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಅಸಾಮಾನ್ಯ ಪ್ರತಿಭೆಯನ್ನು ಹೊಂದಿರುತ್ತಾರೆ. ಆದರೆ ಅವರು ತಮ್ಮ ಪ್ರತಿಭೆಯನ್ನು ಹೊರತರದ ಕಾರಣ ಅವರಲ್ಲೇ ಕಮರಿ ಹೋಗುತ್ತಿದೆ ಎಂದು ಹಾಸನದ ಹಿರಿಯ ಲೆಕ್ಕ ಪರಿಶೋಧಕಿ ಗೀತಾ ವಿಷಾದಿಸಿದರು.
ಪಟ್ಟಣದ ಆರ್.ಆರ್.ರಸ್ತೆಯಲ್ಲಿರುವ ಸೀತಾರಾಮಮಂದಿರದಲ್ಲಿ ಇತ್ತೀಚೆಗೆ ನಡೆದ ಸೀತಾ ಮಹಿಳಾ ಸಂಘದ 29ನೇ ವಾರ್ಷಿಕೋತ್ಸವ ಮತ್ತು ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಸಂಬಂಧಿಸಿದ ಹಿರಿಯರು ಮತ್ತು ಪೋಷಕರು ತಮ್ಮ ಕುಟುಂಬಗಳ ಹೆಣ್ಣುಮಕ್ಕಳ ಪ್ರತಿಭೆಗಳಿಗೆ ಹೆಚ್ಚು ಆಸರೆ ನೀಡಿದಲ್ಲಿ ಉತ್ತಮ ಪ್ರತಿಭೆಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಇಂದು ಐಟಿ ಬಿಟಿ ವಲಯಗಳನ್ನು ಹೊರತುಪಡಿಸಿ ಅನೇಕ ಪ್ರತಿಭಾ ಕ್ಷೇತ್ರಗಳು ನಮ್ಮನ್ನು ಕೈ ಬೀಸಿ ಕರೆಯುತ್ತಿವೆ. ಸೂಕ್ತ ಕ್ಷೇತ್ರಗಳನ್ನು ಹೆಣ್ಣುಮಕ್ಕಳು ಆಯ್ಕೆ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ತಾಯಂದಿರು ತಮ್ಮ ಜ್ಞಾನ ಮತ್ತು ಸಮಯವನ್ನು ಧಾರೆ ಎರೆಯಬೇಕು ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಮಕ್ಕಳು ಬದುಕನ್ನು ಕಟ್ಟಿಕೊಳ್ಳಲು ಆಯಾ ಕುಟುಂಬಗಳಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯವಾಗಿದ್ದು, ಧಾರ್ಮಿಕತೆಯೊಂದಿಗೆ ನಮ್ಮ ಸಂಸ್ಕಾರ, ಆಚಾರ ವಿಚಾರಗಳನ್ನು ಮರೆಮಾಚದಂತೆ ಇತಿಹಾಸವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಬ್ರಾಹ್ಮಣ ಸಮಾಜದ ಮಹಿಳೆಯರು ಮಡಿವಂತಿಕೆಯನ್ನು ಬದಿಗಿಟ್ಟು ಸಂಸಾರವನ್ನು ಸಾಗಿಸುವುದರೊಂದಿಗೆ ಸಮಾಜದ ಆಗು ಹೋಗುಗಳಿಗೆ ಸ್ವಯಂಪ್ರೇರಿತವಾಗಿ ಸ್ಪಂದಿಸಬೇಕು ಎಂದು ಕರೆ ನೀಡಿದರು.
ಉಪಾಧ್ಯಕ್ಷೆ ಗಿರಿಜಮ್ಮ ನಾರಾಯಣಸ್ವಾಮಿ, ಕಾರ್ಯದರ್ಶಿ ಪದ್ಮಮೂರ್ತಿ, ಖಜಾಂಚಿ ವೀಣಾ ರಾಮಸ್ವಾಮಿ, ರೇಖಾ ಪ್ರಕಾಶ್, ಹೇಮಾದತ್ತಾತ್ರಿ, ಸೀತಾಲಕ್ಷ್ಮಿ ಸೂರಣ್ಣ, ಮಂಜುಳನಾಗರಾಜ್, ಇಂದಿರಾರಾಮಚಂದ್ರ ಸೇರಿದಂತೆ ನೂರಾರು ವಿಪ್ರ ಮಹಿಳೆಯರು ಭಾಗವಹಿಸಿದ್ದರು. ಸಂಘದ ಸದಸ್ಯರು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನಸೂರೆಗೊಂಡವು.
ಸುಪ್ರಜಾ ಶಾಲಾ ವಾರ್ಷಿಕೋತ್ಸವ
ಹಾಸನ: ಕೊಡಗು ಜಿಲ್ಲೆಯ ಶನಿವಾರಸಂತೆಯ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಿತು.
ಉದ್ಘಾಟನೆಯನ್ನು ಹಾಸನದ ಯುನೈಟೆಡ್ ಅಕಾಡೆಮಿ ವಿದ್ಯಾಸಂಸ್ಥೆ ಸಂಸ್ಥಾಪಕ ಮತ್ತು ಅಧ್ಯಕ್ಷ ಸಿ.ಎಂ. ಚಂದ್ರಶೇಖರ್ ನೆರವೇರಿಸಿದರು. ಇದೇ ವೇಳೆ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕೆ.ಆರ್.ಅನುಸೂಯ ಚಂದ್ರಶೇಖರ್, ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್, ಅಧ್ಯಕ್ಷೆ ಡಿ. ಸುಜಲಾದೇವಿ ಇದ್ದರು.
ಇಂದು ಪ್ರತಿಭಟನೆ
ಮೈಸೂರು: ಮಹರ್ಷಿ ವಾಲ್ಮೀಕಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಡಾ.ಕೆ.ಎಸ್. ನಾರಾಯಣಾಚಾರ್ಯ ಅವರ ವಿರುದ್ಧ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆಯಿಂದ ಮಾ.20ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕಾರಂತ ಉತ್ಸವ
ಕರ್ನಾಟಕ ಕಲಾದರ್ಶಿನಿಯು ಮಾ.21ರ ಸಂಜೆ 5.30ಕ್ಕೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶಿವರಾಮ ಕಾರಂತ ಉತ್ಸವ ಏರ್ಪಡಿಸಿದ್ದು, ಜಿ.ಎಸ್. ಭಟ್, ಎಸ್.ಐ. ಭಾವಿಕಟ್ಟಿ ಭಾಗವಹಿಸುವರು.
ಘಟಿಕೋತ್ಸವ
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್ಡಿಎಂ ಐಎಂಡಿಯ 19ನೇ ಘಟಿಕೋತ್ಸವವು ಮಾ.21 ರಂದು ನಡೆಯಲಿದೆ.
ಸಿಇಟಿ ತರಬೇತಿ
ಎಂ.ಎನ್. ಜೋಯಿಸ್ ರಸ್ತೆಯಲ್ಲಿರುವ ಜ್ಞಾನದೀಪ್ತಿ ಟ್ರಸ್ಟ್ನಲ್ಲಿ ಐಬಿಪಿಎಸ್, ಎಸ್ಬಿಐ, ಎಂಬಿಎ ಹಾಗೂ ಎಂಸಿಎ ಪರೀಕ್ಷೆಗೆ ಮಾ. 21 ರಿಂದ ತರಬೇತಿ ನೀಡಲಿದ್ದು, ಮೊ. 98440 99674.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

