ಪ್ರಚಾರ ಸಾಮಗ್ರಿಗಳಮೇಲೆ ಕಣ್ಣಿಡಿ: ಡಿಸಿ
ಹಾಸನ: ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಹೇಳಿದ್ದಾರೆ.
ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹಿರಾತುಗಳು, ಸುದ್ದಿರೂಪದ ಜಾಹಿರಾತುಗಳು, ಚುನಾವಣಾ ಪ್ರಚಾರ ಸಾಮಗ್ರಿಗಳ ಬಗ್ಗೆ ನಿಗಾ ವಹಿಸಿ ಚುನಾವಣಾಧಿಕಾರಿಗಳಿಗೆ ಹಾಗೂ ವೆಚ್ಚ ವೀಕ್ಷಕರಿಗೆ ದಿನವಹಿ ವರದಿಯನ್ನು ಸಮಿತಿ ನೀಡಲಿದೆ. ದೂರದರ್ಶನ, ರೇಡಿಯೋ ಮುಂತಾದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಜಿಲ್ಲಾ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಬೇಕು. ಸಮಿತಿಯು ವಾರ್ತಾಭವನದಲ್ಲಿ ಕಾರ್ಯ ನಿರ್ವಹಿಸಲಿದ್ದು ನಿಗದಿತ ನಮೂನೆಗಳನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಒಂದು ವೇಳೆ ಅನುಮೋದನೆ ಪಡೆಯದೆ ಜಾಹಿರಾತು ಪ್ರಸಾರವಾದಲ್ಲಿ ಮಾಧ್ಯಮ ನಿಗಾ ಸಮಿತಿಯು ಈ ಬಗ್ಗೆ ಗಮನಹರಿಸುತ್ತದೆ ಹಾಗೂ ಅಗತ್ಯ ಕ್ರಮಕ್ಕಾಗಿ ಚುನಾವಣಾಧಿಕಾರಿಗಳಿಗೆ ಕಳುಹಿಸುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹಿರಾತುಗಳಿಗೆ ಅನುಮೋದನೆ ಅಗತ್ಯವಿರುವುದಿಲ್ಲ. ಆದರೆ ಪ್ರಕಟವಾಗುವ ಎಲ್ಲ ಜಾಹಿರಾತುಗಳನ್ನು ಸಮಿತಿಯು ಗಮನಿಸಿ ಅಭ್ಯರ್ಥಿಗಳ ವೆಚ್ಚದ ಲೆಕ್ಕಕ್ಕೆ ತೋರಿಸಲು ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡುವುದು, ಕರಪತ್ರ, ಭಿತ್ತಿಪತ್ರ ಹಾಗೂ ಈ ರೀತಿಯ ಇತರೆ ಚುನಾವಣಾ ಸಾಮಗ್ರಿಗಳಲ್ಲಿ ಪ್ರಕಾಶಕರ ಹಾಗೂ ಮುದ್ರಕರ ಹೆಸರು, ವಿಳಾಸ ಮುದ್ರಿಸುವುದು ಕಡ್ಡಾಯ. ಅಭ್ಯರ್ಥಿಯ ಗಮನಕ್ಕೆ ತಾರದೆ ಬೇರೆಯವರು ಅಭ್ಯರ್ಥಿಯ ಹೆಸರಿನಲ್ಲಿ ಜಾಹಿರಾತು ಹಾಗೂ ಚುನಾವಣಾ ಸಾಮಗ್ರಿ ಮುದ್ರಿಸುವಂತಿಲ್ಲ. ಇಂಥವು ಕಂಡುಬಂದಲ್ಲಿ ಈ ರೀತಿ ಪ್ರಕಟಿಸಿದವರ ವಿರುದ್ಧವೂ ಕ್ರಮ ವಹಿಸಲಾಗುತ್ತದೆ. ನಾಮಪತ್ರ ಸ್ವೀಕಾರ ಆರಂಭವಾಗುವ ವೇಳೆಗೆ ಸಮಿತಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

