ಯುವಕನ ಅನುಮಾನಾಸ್ಪದ ಸಾವು; ಆಕ್ರೋಶ
ಬೇಲೂರು: ಪಟ್ಟಣದ ಚನ್ನಕೇಶವ ಬಡಾವಣೆಯ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಬಂಧು- ಮಿತ್ರರು ಹಾಗೂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದ ಚನ್ನಕೇಶವ ಬಡಾವಣೆಯಲ್ಲಿ ಬುಧವಾರ ನಡೆದಿದೆ.
ಬಡಾವಣೆಯ ಸುದೀಪ (18) ಎಂಬ ಯುವಕ ಆಂಧ್ರದ ಕರ್ನೂಲ್ ಜಿಲ್ಲೆಯ ಮೆಹಬೂಬ್ ನಗರದ ಬೇಕರಿಯಲ್ಲಿ 3 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಕೆಲ ದಿನಗಳ ಹಿಂದೆ ತನಗೆ ಹುಷಾರಿಲ್ಲವೆಂದು ಆತ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದ. ಆದರೆ ಇಂದು ಬೆಳಿಗ್ಗೆ ನಿಮ್ಮ ಮಗ ಸಾವನ್ನಪ್ಪಿದ್ದು, ಶವವನ್ನು ಬೇಲೂರಿಗೆ ತರಲಾಗುತ್ತಿದೆ ಎಂದು ಬೇಕರಿ ಮಾಲೀಕ ಮೋಹನ್ ದೂರವಾಣಿ ಕರೆ ಮಾಡಿ ತಿಳಿಸಿದಾಗ ಸುದ್ದಿ ಕೇಳಿದ ಪೋಷಕರಿಗೆ ಆಘಾತವಾಗಿತ್ತು.
ಅನುಮಾನಕ್ಕೆ ಕಾರಣವಾದ ನಡೆ: ಬುಧವಾರ ಬೆಳಗಿನಿಂದಲೇ ಪೋಷಕರು ಹಾಗೂ ಬಡಾವಣೆಯ ನೂರಾರು ನಿವಾಸಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. 11 ಗಂಟೆಗೆ ಆಂಧ್ರ ನೋಂದಾವಣೆ ಸಂಖ್ಯೆ ಹೊಂದಿರುವ ವಾಹನದಲ್ಲಿ ಶವವನ್ನು ತರಲಾಯಿತು. ಆದರೆ, ಜೊತೆಗೆ ಬೇಕರಿ ಮಾಲೀಕರಾಗಲೀ, ಸಂಬಂಧಿಕರಾಗಲಿ ಬಂದಿರಲಿಲ್ಲ. ಇದು ಜನರ ಅನುಮಾನಕ್ಕೆ ಕಾರಣವಾಯಿತು. ಸುದೀಪ್ನದು ಅಸಹಜ ಸಾವು ಎಂದು ಆಕ್ರೋಶ ವ್ಯಕ್ತಪಡಿಸಿದ ಆತನ ಸಂಬಂಧಿಗಳು ಹಾಗೂ ಬಡಾವಣೆಯ ಇತರ ನಿವಾಸಿಗಳು ಶವವನ್ನು ತಂದಿದ್ದ ಟಾಟಾ ಏಸ್ನ ಚಾಲಕ ಬಾಷಾನನ್ನು ತರಾಟೆ ತೆಗೆದುಕೊಂಡರು.
ಡ್ರೈವರ್ ಹೇಳಿದ್ದು: ಈ ಸಂದರ್ಭದಲ್ಲಿ ಮಾತನಾಡಿದ ಚಾಲಕ ಭಾಷಾ, ಕರ್ನೂಲು ಜಿಲ್ಲೆಯ ದ್ರೋಣಾಚಲಂ ಎಂಬ ಊರಿನ ಬಸ್ನಿಲ್ದಾಣದ ಬಸ್ ಸೀಟ್ನಲ್ಲಿ ಮಲಗಿದ ಸ್ಥಿತಿಯಲ್ಲಿ ಶವವಿತ್ತು. ಬೇಕರಿ ಮಾಲೀಕ ಮೋಹನ್ ಕೂಡ ಅಲ್ಲಿದ್ದು, ಅಲ್ಲಿನ ಪೊಲೀಸರು ಮಹಜರು ಮಾಡಿ, ನಂತರ ಶವ ಸಾಗಿಸಲು ಅನುಮತಿ ನೀಡಿದರು. ಬೇಕರಿ ಮಾಲೀಕ ತನ್ನ ಟಾಟಾ ಎಸಿ ಗಾಡಿಯಲ್ಲಿ ಸುದೀಪ್ನ ಶವ ಸಾಗಿಸಿಕೊಂಡು ಬರಲಾಯಿತು. ಬೇಕರಿ ಮಾಲೀಕ ಮೋಹನ್, ಹಾಸನದವರೆಗೂ ತಮ್ಮ ಜೊತೆ ಬಂದಿದ್ದು ನಂತರ ಇಲ್ಲಿನ ವಿಳಾಸ ಕೊಟ್ಟು ಕಳಿಸಿದ್ದಾರೆ. ಇಷ್ಟು ಬಿಟ್ಟರೆ ತಮಗೆ ಬೇರೇನೂ ಗೊತ್ತಿಲ್ಲ ಎಂದರು.
ಈ ಸಂದರ್ಭ ಛಲವಾದಿ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬೇಕರಿ ಮಾಲೀಕ ಹಾಸನದವರೆಗೂ ಬಂದು, ಅಲ್ಲಿಂದ ಚಾಲಕನ ಜೊತೆ ಶವ ಕಳಿಸಿರುವುದು ಅನುಮಾನ ಮೂಡಿಸಿದೆ. ಅಲ್ಲದೇ ಸೋಮವಾರ ಸುದೀಪ್ ಮರಣ ಹೊಂದಿದ್ದು ಬುಧವಾರ ಇಲ್ಲಿಗೆ ತರಲಾಗಿದೆ. ಸಾವಿಗೆ ಸ್ಪಷ್ಟ ಕಾರಣವನ್ನೂ ಹೇಳದಿರುವುದೂ ಅನುಮಾನಕ್ಕೆ ಮತ್ತೊಂದು ಕಾರಣ ಎಂದರು.
ಪುರಸಭೆ ಸದಸ್ಯ ಎಂ.ಆರ್. ವೆಂಕಟೇಶ್ ಮಾತನಾಡಿ, ಸುದೀಪ್ ಕೆಲಸ ಮಾಡುತ್ತಿದ್ದ ಬೇಕರಿ ಮಾಲೀಕನನ್ನು ಸ್ಥಳಕ್ಕೆ ಕರೆಸಲೇಬೇಕು ಎಂದು ಪಟ್ಟು ಹಿಡಿದರು.
ಕೊನೆಗೂ ಬಂದ ಬೇಕರಿ ಮಾಲೀಕ: ಮಧ್ಯಾಹ್ನದ ನಂತರ ಬೇಕರಿ ಮಾಲೀಕ ಪೊಲೀಸ್ ಠಾಣೆಗೆ ಬಂದು ಸ್ಪಷ್ಟೀಕರಣ ನೀಡಿದರು. ತಾವು ಕಳೆದ 5 ತಿಂಗಳ ಹಿಂದೆ ಬೇಕರಿ ಆರಂಭಿಸಿದ್ದು ಪರಿಚಯದ ಮೇಲೆ ಕೆಲಸಕ್ಕೆ ಕರೆದುಕೊಂಡು ಹೋಗಿದ್ದೆ. ಕೆಲ ದಿನಗಳ ಹಿಂದೆ ಸುದೀಪ್ಗೆ ಜಾಂಡೀಸ್ ಕಾಯಿಲೆ ಬಂದಿದ್ದು ಆಸ್ಪತ್ರೆಗೆ ತೋರಿಸಲಾಗಿತ್ತು. ಆದರೆ, 3 ದಿನದ ಹಿಂದೆ ಕಾಯಿಲೆ ಹೆಚ್ಚಾಗಿದ್ದರಿಂದ ಹೈದರಾಬಾದ್ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಆತನೇ ಊರಿಗೆ ತೆರಳುವುದಾಗಿ ಹೇಳಿದಾಗ ತಮ್ಮ ಪರಿಚಯದವರ ಜೊತೆಗೆ ಬಸ್ಸಿಗೆ ಕಳಸಿ ಕೊಡಲಾಗಿತ್ತು. ಆದರೆ ದ್ರೋಣಾಚಲಂ ಬಳಿ ಬಂದಾಗ ಆತ ಅಸು ನೀಗಿರುವುದು ಕಂಡುಬಂದಿದ್ದು ಅಲ್ಲಿನ ಪೊಲೀಸರಿಗೆ ವಿಷಯ ತಿಳಿಸಿ ಮಹಜರು ನಡೆಸಿ ನಂತರ ಶವವನ್ನು ಇಲ್ಲಿಗೆ ತಂದಿದ್ದಾಗಿ ತಿಳಿಸಿದರು.
ಮತ್ತೆ ಮಹಜರು: ಪಿಎಸ್ ಐ ಅಶ್ವಿನ್ ಕುಮಾರ್ ಮಾತನಾಡಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಸಿಕೊಡುವಂತೆ ಸೂಚಿಸಿದ್ದು, ಅದರ ವರದಿ ಬರುವವರೆಗೆ ಬೇಕರಿ ಮಾಲೀಕರನ್ನು ಪೊಲೀಸ್ ಕಸ್ಟಡಿಗೆ ಒಳಪಡಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

