ಈಗ ರೈತರ ಮೇಲೆ ಅಗ್ನಿ ದೇವನ ಮುನಿಸು?
ಹಾರನಹಳ್ಳಿ: ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ತೆಂಗಿನ ಮರಗಳು ಸುಳ್ಳು ಕರಕಲಾಗಿರುವ ಘಟನೆ ಇಲ್ಲಿ ನಡೆದಿದೆ.
ಎಚ್.ಆರ್. ರಂಗಸ್ವಾಮಿ, ಶಿವಶೇಖರ, ಈಶ್ವರಪ್ಪ ಎಂಬುವರಿಗೆ ಸೇರಿದ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಬೆಂಕಿ ಬಿದ್ದು ತೆಂಗಿನಮರ, ಅಡಿಕೆ ಮರಗಳು ಭಸ್ಮವಾಗಿ ಕರಕಲಾಗಿವೆ. ಎಚ್.ಆರ್. ರಂಗಸ್ವಾಮಿ ಅವರ ಜಮೀನಿನಲ್ಲಿ ಇದ್ದ 250 ಅಡಿಕೆಮರ, 15 ತೆಂಗಿನಮರ ಸುಮಾರು 15 ಸೀಬೆ ಗಿಡಗಳು ಸೇರಿದಂತೆ ತೋಟಗಳಲ್ಲಿದ್ದ ಹನಿ ನೀರಾವರಿ ಪೈಪುಗಳೂ ಸುಟ್ಟುಹೋಗಿವೆ. ಅವುಗಳ ಮೌಲ್ಯ 1 ಲಕ್ಷ ರು. ಗಳಾಗಿದ್ದು, ಎಚ್.ಎಸ್. ಶಿವಶೇಖರ ಅವರ ಜಮೀನಿನ 31 ತೆಂಗಿನಮರ, 300 ಅಡಿಕೆ ಮರ, 3 ಹಲಸಿನ ಮರ, 15 ನಿಂಬೆ ಗಿಡ ಹಾಗೂ 3 ಅಮ್ಮಟೆ ಮರ ಬೆಂಕಿಗೆ ಆಹುತಿಗೊಂಡಿವೆ. ಈಶ್ವರಪ್ಪನವರ ಜಮೀನಿನಲ್ಲಿ ಸುಮಾರು ತೆಂಗಿನಮರ, ಅಡಿಕೆ ಮರಗಳು ಸುಟ್ಟು ಹೋಗಿ, ಸುಮಾರು ರು. 15 ಲಕ್ಷದಷ್ಟು ನಷ್ಟವುಂಟಾಗಿದೆ.
ತಪ್ಪಿದ ಭಾರಿ ಅನಾಹುತ: ತೆಂಗು ಅಡಿಕೆ ತೋಟಕ್ಕೆ ಬೆಂಕಿ ಬಿದ್ದಿದನ್ನು ಗಮನಿಸಿದ ಸುತ್ತಲಿನ ರೈತರು ದೂರವಾಣಿ ಮೂಲಕ ಚೆಸ್ಕಾಂ ಅಧಿಕಾರಿಗಳಿಗೆ ಕರೇಂಟ್ ನೀಡುವಂತೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ. ತಕ್ಷಣ ಕರೆಗೆ ಸ್ಪಂದಿಸಿದ ಅಧಿಕಾರಿಗಳು, ಕರೆಂಟ್ ನೀಡಿದ್ದಾರೆ. ತಕ್ಷಣ ಸುತ್ತಲಿನ ತೋಟದ ಬೋರೆವಲ್ಗಳಿಂದ ನೀರೆತ್ತಿದ ಗ್ರಾಮಸ್ಥರು ಬೆಂಕಿ ನಂದಿಸಿ, ಅದು ಅಕ್ಕಪಕ್ಕ ಜಮೀನುಗಳಿಗೆ ವ್ಯಾಪಿಸುವುದನ್ನು ತಡೆದಿದ್ದಾರೆ.
ಪರಿಹಾರಕ್ಕೆ ಆಗ್ರಹ: ಸುದ್ದಿ ತಿಳಿದ ತಕ್ಷಣ ಗ್ರಾಮ ಲೆಕ್ಕಿಗ ಯದುಕುಮಾರ್ ಭೇಟಿ ನೀಡಿ, ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು. ಕೃಷಿಯನ್ನೇ ನಂಬಿದ ಎಚ್.ಆರ್. ರಂಗಸ್ವಾಮಿ, ಶಿವಶೇಖರ, ಈಶ್ವರಪ್ಪ ಫಸಲು ಕೊಡುತ್ತಿದ್ದ ತೆಂಗು, ಅಡಿಗೆ ಮರಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಸರ್ಕಾರ ಗರಿಷ್ಠ ಮಟ್ಟದಲ್ಲಿ ಪರಿಹಾರ ಕೊಡಬೇಕೆಂದು ರೈತ ಸಂಘದ ಮುಖಂಡ ಕನ್ನಕಂಚನಹಳ್ಳಿ ಪ್ರಸನ ಕುಮಾರ್, ಹಾರನಹಳ್ಳಿ ಗ್ರಾಪಂ ಸದಸ್ಯ ಶಿವಲಿಂಗಮೂರ್ತಿ ಒತ್ತಾಯಿಸಿದ್ದಾರೆ.
ಬೇಲೂರಿನಲ್ಲೂ ಬೆಂಕಿ ಅನಾಹುತ
ಬೇಲೂರು: ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ, ತಿರುಮಲನಹಳ್ಳಿ ಗ್ರಾಮದ ಹುಲಿಗೌಡ ಬಿನನ್ತಿಮ್ಮೇಗೌಡ ರವರ 5 ಎಕರೆ ತೋಟ ಬೆಂಕಿ ಆಕಸ್ಮಿಕವಾಗಿ ತೋಟಕ್ಕೆ ತಗುಲಿ ಅಪಾರ ನಷ್ಟ ಉಂಟಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಬೆಂಕಿ ತೋಟದ ಪೂರ್ತಿ ಆವರಿಸಿತ್ತು. ಬೆಂಕಿ ತೋಟಕ್ಕೆ ವ್ಯಾಪಿಸಿ ತೋಟದಲ್ಲಿ 30 ತೆಂಗಿನ ಮರಗಳು, ಮಾವು, ನೇರಳೆ, ಸೀತಾಫಲ, ಸಪೋಟ, ತೇಗ, ಸಿಲ್ವರಾ ಮತ್ತು ಹಲಸಿನ ಮರಗಳು ಸೇರಿದಂತೆ ತೋಟ ನಾಶವಾಗಿದೆ. ಅದ ಮೌಲ್ಯ, ಸುಮಾರು ರು. 10 ಲಕ್ಷ ಎಂದು ಅಂದಾಜು ಮಾಡಲಾಗಿದ್ದು, ಜೀವನಾಧಾರವಾಗಿದ್ದ ತೋಟ ನಾಶವಾಗಿದ್ದರಿಂದ ರೈತ ಕಂಗಲಾಗಿದ್ದು ಸರ್ಕಾರದ ಪರಿಹಾರದ ನೀರಿಕ್ಷೆಯಲ್ಲಿ ಇದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

