ಹಾಸನ

'ಬಿಎಸ್‌ಪಿಯಿಂದ ಮಾತ್ರ ಸಮಾನತೆ'

Published On :

ಅರಕಲಗೂಡು: ಸ್ವಾತಂತ್ರ್ಯಾ ನಂತರ 65 ವರ್ಷಗಳಲ್ಲಿ ಕಾಂಗ್ರೆಸ್ ಸುದೀರ್ಘ ಅವಧಿಯಲ್ಲಿ ಅಧಿಕಾರ ಅನುಭವಿಸಿ ಬಂದಿದ್ದರೂ ದೇಶದಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗಿಲ್ಲ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಬಿ.ಸಿ. ರಾಜೇಶ್ ಆರೋಪಿಸಿದ್ದಾರೆ.
ಶುಕ್ರವಾರ ನಡೆದ ಬಹುಜನ ಸಮಾಜ ಪಾರ್ಟಿಯ ಕಾಯಂಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಕೇವಲ ಅನ್ನ ಭಾಗ್ಯ, ತಾಳಿ ಭಾಗ್ಯದಂಥ ಯೋಜನೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ನೀಡಿಲ್ಲ. ಆ ಪಕ್ಷಕ್ಕೆ ಆ ಇಚ್ಛಾಶಕ್ತಿ ಇಲ್ಲ ಎಂದ ಅವರು, ಜನರನ್ನು ಬಡತನದಲ್ಲಿರಿಸಿ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಾ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ ಬಂದಿದೆ ಎಂದು ಟೀಕಿಸಿದರು.
ಶೋಭೆ ತರುವಂಥದ್ದಲ್ಲ: ದೇಶದಲ್ಲಿ ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ ಸ್ವಶಕ್ತಿಯಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಹುಜನ ಸಮಾಜ ಪಕ್ಷದ ಮಾಯಾವತಿ ಅವರ ಬೆಂಬಲದಿಂದ ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ ಎಂದ ಅವರು, ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖಂಡ ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದು ದಲಿತರಿಗೆ ಶೋಭೆ ತರುವಂತಹುದಲ್ಲ. ಆ ಪಕ್ಷಟ್ಟು ಹೊರಬನ್ನಿ ಎಂದು ಕರೆ ಇತ್ತ ಅವರು ಬಿಎಸ್‌ಪಿಯಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಮಂಜು ವಿರುದ್ಧ ಟೀಕೆ: ಲೋಕಸಭಾ ಅಭ್ಯರ್ಥಿ ಎ. ಮಂಜು ವಿರುದ್ಧ ಟೀಕಾ ಪ್ರಹಾರ ಮಾಡಿದ ರಾಜೇಶ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಲಿತರ ಕೇರಿಗೆ ತೆರಳಿ, ದಲಿತರನ್ನು ಮುಖ್ಯಮಂತ್ರಿ ಮಾಡಲು ಎಂದರೆ ಕುರುಬರ ಬೀದಿಯಲ್ಲಿ ಕುರುಬರನ್ನು ಮುಖ್ಯಮಂತ್ರಿ ಮಾಡಲು ತಮ್ಮನ್ನು ಬೆಂಬಲಿಸುವಂತೆ ಕೋರಿ ಮತಗಳಿಸಿದರು. ಎಸ್‌ಸಿ, ಎಸ್‌ಟಿ ಹಣದಿಂದಲೇ ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ ದಲಿತರ ಬಂಧು ಎನಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಟೀಕಿಸಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದರು. ತಾಲೂಕು ಬಿಎಸ್ಪಿ ಅಧ್ಯಕ್ಷ ಡಿ.ಎಸ್. ಮಹೇಶ್, ಬಿ.ಎಸ್ಪಿ ಮುಖಂಡ ಎ.ಪಿ. ಅಹಮದ್, ಎ.ಪಿ. ಹರೀಶ್, ಶಿವಮ್ಮ, ಚಿನ್ನಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.