ಮೈಸೂರಲ್ಲಿ ಷರೀಫ್ ಜೆಡಿಎಸ್ ಅಭ್ಯರ್ಥಿ
ಹಾಸನ: ಮೆಕ್ಕಾದಿಂದ ಆಗಮಿಸಿದ ಕೂಡಲೇ ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫರ್ ಷರೀಫ್ ಅವರು ಮೈಸೂರು- ಕೊಡಗು ಲೋಕಸಭೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಆ ಬಗ್ಗೆ ಯಾವುದೇ ಅನುಮಾನಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಖಚಿತವಾಗಿ ಹೇಳಿದ್ದಾರೆ.
ಶುಕ್ರವಾರ ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನ್ನ ಒಡನಾಡಿಗಳಾಗಿದ್ದ ಆನೇಕ ಮುಖಂಡರು ಜೆಡಿಎಸ್ಗೆ ಬರಲಿದ್ದಾರೆ ಎಂದು ಹೇಳಿದ ಗೌಡರು, ಬರುವವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಬೇಕು ಎಂಬುದು ಆ ಕ್ಷೇತ್ರದ ಜನರ ಒತ್ತಾಸೆ. ಮತ್ತೊಂದು ಕಡೆ ಅವರು ರಾಜ್ಯಾದ್ಯಂತ ಪ್ರವಾಸ ಮಾಡಬೇಕಾಗಿದ್ದು, ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ರಾಮನಗರ ಜಿಲ್ಲೆಯ ಜನರ ಅಪ್ಪಣೆಯನ್ನು ಪಡೆದುಕೊಳ್ಳಬೇಕಾಗಿದೆ. ಹೀಗೆಲ್ಲಾ ಇರುವುದರಿಂದ ಅವರು ಕೆಲ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಸಮರ್ಥರು ಮಾತ್ರ ಅಖಾಡಕ್ಕೆ: ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಸಮರ್ಥರನ್ನು ಮಾತ್ರ ಕಣಕ್ಕೆ ಇಳಿಸಿದೆ. ಈ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಸೆಡ್ಡು ಹೊಡೆದು ನಿಲ್ಲಲಿದೆ. ಪಕ್ಷದ ಹಿರಿಯ ಮುಖಂಡ ಎಚ್.ಸಿ. ನೀರಾವರಿ, ಎಂ.ಸಿ. ನಾಣಯ್ಯ, ಅಬ್ಬುಲ್ ಅಜೀಂ ಮೊದಲಾದವರು ಪ್ರಚಾರದ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ. ಈ ಚುನಾವಣೆ ಮೂಲಕ ಪಕ್ಷ ಸಂಘಟನೆ ಕಾರ್ಯವೂ ನಡೆಯುತ್ತದೆ ಎಂದರು ಗೌಡರು.
ಅಪ್ರಸ್ತುತ: ನಟಿ ರಕ್ಷಿತಾ ಅವರು ಬಿಜೆಪಿ ಸೇರಿದ್ದ ಬಗ್ಗೆ ಮಾತನಾಡಿದ ಅವರು, ನಟಿ ರಕ್ಷಿತರವರು ನಮ್ಮ ಪಕ್ಷವನ್ನೇ ಸೇರಿರಲಿಲ್ಲ. ಹಾಗಾಗಿ, ಆ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ ಎಂದು ಹೇಳಿದರು.
ಹಾಸನದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಸಿ.ಎಚ್. ವಿಜಯಶಂಕರ್ ಏನೆಂಬುದು ನನಗೆ ಗೊತ್ತಿದೆ. ಅವರು ಸ್ವಾಭಿಮಾನಿ ರಾಜಕಾರಣಿ. ಹಾಗೆಂದ ಮಾತ್ರಕ್ಕೆ ಜಿಲ್ಲೆಯಲ್ಲಿ ಬಿಜೆಪಿ- ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎಂದು ಹೇಳುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಕೂಡ ಜೆಡಿಎಸ್- ಬಿಜೆಪಿ ಕೆಲವಡೆ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಿರುವುದು ಸರಿ ಎಂದು ಒಪ್ಪಲಾಗದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

