ಅಧ್ಯಾತ್ಮ ಸಾಧನೆಯಿಂದ ನೆಮ್ಮದಿ
ಅರಕಲಗೂಡು: ಜೀವನದಲ್ಲಿ ಅಜ್ಞಾನ ನೀಗಿ, ಸುಜ್ಞಾನ ರೂಢಿಸಿಕೊಂಡು ಹೋಗುವುದು ಅತಿ ಅವಶ್ಯಕ. ತನ್ಮೂಲಕ ಬದುಕಿನ ಸಾರ್ಥಕತೆ ಪಡೆಯಲು ಪ್ರಯತ್ನಿಸಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀ ತಿಳಿಸಿದ್ದಾರೆ.
ಅವರು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ರಂಗನಾಥಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಆಧ್ಯಾತ್ಮ ಸಾಧನೆಯಿಂದ ಯಾವುದೇ ವ್ಯಕ್ತಿ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ.
ಸಮಾವೇಶದ ಆಶಯ: ಮನುಷ್ಯನಿಗೆ ನಿಷ್ಕಾಮ ಸೇವೆ, ತತ್ವ, ಸಿದ್ಧಾಂತಗಳು ಅಗತ್ಯ. ದ್ವೇಷಿಸುವವರನ್ನೂ ಪ್ರೀತಿಸುವುದನ್ನು ರೂಢಿಸಿಕೊಂಡಲ್ಲಿ ಜೀವನ ಸಾರ್ಥಕತೆ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 2015ರ ಜಾತ್ರಾ ಮಹೋತ್ಸವದ ವೇಳೆಗೆ ನೂತನ ದೇವಾಲಯದ ನಿರ್ಮಾಣದ ಉದ್ಘಾಟನೆಯೊಂದಿಗೆ ಜಾತ್ರಾ ಮಹೋತ್ಸವ ನಡೆಯುವಂತಾಗಬೇಕೆಂಬ ಆಶಯ ವ್ಯಕ್ತಪಡಿಸಿದರಲ್ಲದೇ ಈ ಜಾತ್ರಾ ಮಹೋತ್ಸವವನ್ನು ಸರ್ವಧರ್ಮಗಳ ಸಮಾವೇಶವನ್ನಾಗಿ ರೂಪಿಸುವ ಇಚ್ಚೆ ತಮ್ಮದೆಂದು ಹೇಳಿದರು.
ಪೂರಕ ಚಿಂತನೆ: ಕೆಸವತ್ತೂರು ಮಠದ ಬಸವಲಿಂಗಶಿವಾಚಾರ್ಯಸ್ವಾಮೀಜಿ ಮಾತನಾಡಿ, ಚಿಕ್ಕಬೊಮ್ಮನಹಳ್ಳಿಯಲ್ಲಿರುವ ಕುಂದೂರು ಮಠದ ಶಾಖಾ ಮಠಕ್ಕೆ ಅದರದೇ ಆದ ಐತಿಹ್ಯವಿದೆ. ಯಾವುದೇ ಜಾತಿ ಬೇಧವಿಲ್ಲದೇ ಅನ್ನದಾನ, ವಿದ್ಯಾದಾನ ಮಾಡುತ್ತಾ ಬಂದಿರುವ ಮಠದಲ್ಲಿ ಸದಾ ಧಾರ್ಮಿಕ ಚಟುವಟಿಕೆಗಳು ನಡೆಯಬೇಕೆಂಬುದು ಹಿರಿಯ ಶ್ರೀಗಳಾದ ರಾಮಯ್ಯ ಪರದೇಶಿ ಸ್ವಾಮಿಗಳದ್ದು. ಆದ್ದರಿಂದಲೇ ಶ್ರೀಗಳು ಸಮರ್ಥವಾದ ಆದಿಚುಂಚನಗಿರಿ ಮಠಕ್ಕೆ ವಹಿಸಿರುತ್ತಾರೆ. ಮಠದ ಅಭಿವೃದ್ಧಿಗೆ ಇದು ಪೂರಕ ಚಿಂತನೆ ಎಂದು ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ಮಠಕ್ಕೆ ಅಪಾರ ಭಕ್ತರಿದ್ದು, ಅವರಿಗೆ ಧಾರ್ಮಿಕ ವಿಚಾರಗಳನ್ನು ತಲುಪಿಸುವ ಮೂಲಕ ಬದುಕಿನಲ್ಲಿ ನೆಮ್ಮದಿ ದೊರಕಿಸುವ ಕೆಲಸ ಮಠಗಳದ್ದಾಗಿರುತ್ತದೆ ಎಂದರು. ಧಾರ್ಮಿಕ ಸಭೆಯಲ್ಲಿ ಚುಂಚನಕಟ್ಟೆ ಶಾಖಾ ಮಠದ ಶಿವಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಮಧ್ಯರಾತ್ರಿಯಾದರೂ ಕದಲದ ಭಕ್ತರು
ಪ್ರತಿ ವರ್ಷ ಸಂಜೆ ಸುಮಾರು 6 ಗಂಟೆ ವೇಳೆಗೆ ರಥೋತ್ಸವ ಮುಗಿದು ಅನ್ನದಾಸೋಹಕ್ಕೆ ಚಾಲನೆ ನೀಡುವುದು ಪದ್ಧತಿಯಾಗಿತ್ತು. ಆದರೆ, ಈ ಬಾರಿ ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸಿದ್ದರು.
ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದ ಜಾತ್ರಾ ಮಹೋತ್ಸವದ ರಥಕ್ಕೆ ಚಾಲನೆ ನೀಡಿದ್ದು ರಾತ್ರಿ 8.45ಕ್ಕೆ.ಧಾರ್ಮಿಕ ಸಭೆ ಆರಂಭವಾದದ್ದು ರಾತ್ರಿ 9.30ಕ್ಕೆ. ತಡರಾತ್ರಿಯವರೆಗೂ ಸಭೆ ನಡೆದರೂ, ಜಾತ್ರೆಯಲ್ಲಿ ಸೇರಿದ್ದ ಭಕ್ತ ಸಾಗರ ಮಾತ್ರ ಕದಲಲಿಲ್ಲ. ಸುತ್ತಲಿನ ಸುಮಾರು 40 ಹಳ್ಳಿಗಳಿಂದ ಭಕ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

