ಸಿದ್ಧಾಂತಗಳಿಲ್ಲದ ತೃತೀಯ ರಂಗ
ಅರಕಲಗೂಡು: ಭಾರತೀಯ ಜನತಾಪಕ್ಷ ತಮ್ಮನ್ನು ಪಕ್ಷದ ಒಳ್ಳೆಯ ಕಾರ್ಯಕರ್ತನನ್ನಾಗಿ ಬೆಳೆಸಿದೆ. ಅವಕಾಶ ಇದ್ದಾಗಲೆಲ್ಲಾ ಶಾಸಕನಾಗಿ,ಸಂಸದನಾಗಿ,ಮಂತ್ರಿಯಾಗಿ ಹಲವು ಅವಕಾಶಗಳನ್ನೂ ನೀಡಿದೆ. ಹೀಗಿರುವಾಗ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಆದೇಶವನ್ನು ಪಾಲನೆ ಮಾಡುವ ಸಲುವಾಗಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಇದರಲ್ಲಿ ತಮ್ಮ ಸ್ವಹಿತವೇನೂ ಇಲ್ಲ ಎಂದು ವಿಜಯಶಂಕರ್ ಸ್ಪಷ್ಟಪಡಿಸಿದ್ದಾರೆ.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎನೆಲ್ಲಾ ಅವಕಾಶಗಳನ್ನು ಕೊಟ್ಟಿರುವ ಪಕ್ಷ, ಪಕ್ಷದ ಅನುಕೂಲಕ್ಕಾಗಿ ಕಣಕ್ಕಿಳಿಯುವಂತೆ ಸೂಚಿಸಿದಾಗ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ ಎಂದು ತಿಳಿದು ಅದನ್ನು ಪಾಲಿಸಲು ಮುಂದಾಗಿದ್ದೇನೆ ಎಂದರು.
ಬೆಂಬಲಿಸಿ: ಎನ್.ಡಿ.ಎ ಅಥವಾ ಯು.ಪಿ.ಎ ಎಂಬುದರ ಬಗೆಗೆ ನಿರ್ಣಯಿಸುವ ಕಾಲಘಟ್ಟ ಇದಾಗಿದ್ದು, 60 ವರ್ಷಗಳಲ್ಲಿ ಕಾಂಗ್ರೆಸ್, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯವಲ್ಲಿ ವಿಫಲವಾಗಿದೆ. ಆದ್ದರಿಂದ, ದೇಶದ ಹಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ಬಿಜೆಪಿಯೊಂದಿಗೆ: ತೃತೀಯ ರಂಗದ ಬಗೆಗೆ ಮಾತನಾಡುವವರಿಗೆ ಯಾವ ಸಿದ್ಧಾಂತವೂ ಇಲ್ಲ ಮತ್ತು ಬದ್ಧತೆಯೂ ಇಲ್ಲ ಎಂದ ಅವರು, ಕಾಂಗ್ರೆಸ್ ಆಡಳಿತ ಬದಲಾಗಬೇಕು ಎಂಬ ಅಭಿಪ್ರಾಯದೊಂದಿಗೆ ಜನ ಇಂದು ಬಿಜೆಪಿಯೊಂದಿಗೆ ಇದ್ದಾರೆ ಎಂದರು.
ವೈಯಕ್ತಿಕ ಹಿತಾಸಕ್ತಿ ಇಲ್ಲ: ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿಂದೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ನನ್ನ ಅಜೆಂಡಾದಲ್ಲಿ ಅಂತಹ ಯಾವುದೇ ವಿಚಾರ ಇಲ್ಲ. ಈವರೆಗೆ ನನ್ನ ಕುಟುಂಬದ ಯಾರೂ ರಾಜಕಾರಣಕ್ಕೆ ಬಂದಿಲ್ಲ, ಬರುವುದೂ ಇಲ್ಲ. ನನ್ನ ತಲೆಗೇ ಇದು ಕೊನೆ ಎಂದ ಅವರು, ನನಗೆ ಆಸ್ತಿ ಮಾಡುವ ಇಲ್ಲವೇ ಹಣ ಮಾಡಬೇಕೆಂಬ ಹುಚ್ಚೂ ಇಲ್ಲ. ಪ್ರಜಾತಂತ್ರ ವ್ಯವಸ್ಥೆ ನಿರಂತರವಾಗಿರಬೇಕು ಎಂಬುದು ನನ್ನ ಆಶಯ ಎಂದು ಅವರು ತಿಳಿಸಿದರು.
ರಾಜನೀತಿಯಲ್ಲಿ ನಂಬಿಕೆ: ತಾವು ಲೋಕಸಭೆಗೆ ಆಯ್ಕೆಯಾದ ನಂತರ, ವಾರದಲ್ಲಿ ಒಂದು ದಿನ ಕಚೇರಿಯಲ್ಲಿ ಮತ್ತು ಒಂದು ದಿನ ಜಿಲ್ಲೆಯ ಪ್ರವಾಸಕ್ಕೆ ತಮ್ಮ ಸಮಯ ನೀಡುವುದಾಗಿ ಭರವಸೆ ನೀಡಿದ ಅವರು, ತಾವು ಜಾತಿ ರಾಜಕಾರಣದಲ್ಲಿ ನಂಬಿಕೆ ಇಟ್ಟವನಲ್ಲ. ರಾಜನೀತಿಯಲ್ಲಿ ನಂಬಿಕೆ ಇಟ್ಟವನು ಎಂದರು.
ಹೊಳೆನರಸೀಪುರ: ಜಾತಿ ರಾಜಕಾರಣದಲ್ಲಿ ನಾನು ನಂಬಿಕೆ ಇಟ್ಟವನಲ್ಲ, ನೀತಿ ರಾಜಕಾರಣದಲ್ಲಿ ನಂಬಿಕೆ ಇಟ್ಟು ಪಕ್ಷದ ಮುಖಂಡರ ಒಮ್ಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ತಿಳಿಸಿದರು.
ಕಾರ್ಯಕರ್ತರ ಸಭೆಗಾಗಿ ಮೈಸೂರಿನಿಂದ ಅರಕಲಗೂಡಿಗೆ ತೆರಳುವ ಮುನ್ನ ಶನಿವಾರ ಪಟ್ಟಣದಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ನನ್ನ ಸ್ಪರ್ಧೆ ಪಕ್ಷದ ನಾಯಕರ, ಸಂಘಟನೆಯ ಹಾಗೂ ಕಾರ್ಯಕರ್ತರ ಸತ್ವ ಪರೀಕ್ಷೆಯಾಗಿದ್ದು, ಎಲ್ಲರ ಆಶೋತ್ತರಗಳಿಗೆ ಮನ್ನಣೆ ನೀಡಿ ತಾವು ಸ್ಪರ್ಧಿಸುತ್ತಿರುವುದಾಗಿ ವಿಜಯಶಂಕರ್ ತಿಳಿಸಿದರು.
ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ: ಹಾಸನ ಜಿಲ್ಲೆಯ ಗಂಭೀರ ಸಮಸ್ಯೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತಂತೆ ಈಗಾಗಲೇ ತಮ್ಮ ಪಕ್ಷದ ಜಿಲ್ಲಾ ಮುಖಂಡರಿಗೆ ಜಿಲ್ಲೆಯ ಸಂಪೂರ್ಣ ಸಮಸ್ಯೆಗಳ ಪಟ್ಟಿ ಮಾಡಿಕೊಡಲು ತಿಳಿಸಿದ್ದು, ಪ್ರತಿ ಪಕ್ಷಗಳಿಗೂ ಚುನಾವಣಾ ಪ್ರಣಾಳಿಕೆಗಳಿರುವಂತೆ, ಜಿಲ್ಲೆಗೆ ಸಂಬಂಧಿಸಿದಂತೆಯೇ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ದಗೊಳಿಸುತ್ತಿರುವುದಾಗಿ ತಿಳಿಸಿದರು.
ದೇವಾಲಯದ ಭೇಟಿಯ ಬಳಿಕ ಬಿಜೆಪಿ ಅಭ್ಯರ್ಥಿ ವಿಜಯಶಂಕರ್, ತಾಲೂಕು ಕಾಂಗ್ರೆಸ್ನಲ್ಲಿನ ವೀರಶೈವ ಮುಖಂಡ ಎಸ್.ಎನ್. ನಂಜಪ್ಪನವರ ನಿವಾಸಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡ ನವಿಲೆ ಅಣ್ಣಪ್ಪ, ರಾಜ್ಯ ಉಪಾಧ್ಯಕ್ಷ ಹಾಗೂ ಹಾಸನ ಜಿಲ್ಲಾ ಲೋಕಸಭಾ ಉಸ್ತುವಾರಿ ಹೊತ್ತಿರುವ ಅಶ್ವಥ್ ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ರಾಜು ಇದ್ದರು.
ಸಂಘಟನೆಗೆ ಬಿಟ್ಟ ವಿಚಾರ
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರನ್ನು ಬಿಜೆಪಿ ಮರಳಿ ಪಕ್ಷಕ್ಕೆ ಸೇರಿಸಿಕೊಂಡಿರುವ ಕುರಿತಂತೆ ಕೇಳಲಾದ ಪ್ರಶ್ನೆಗೆ ನೇರವಾಗಿ ಉತ್ತರಿಸದ ವಿಜಯಶಂಕರ್, ನಾನು ನನ್ನ ವೈಯಕ್ತಿಕ ವಿಚಾರಗಳನ್ನಷ್ಟೇ ಮಾತನಾಡುತ್ತೇನೆ. ಅದೆಲ್ಲಾ ಪಕ್ಷದ ನಾಯಕರುಗಳು ಹಾಗೂ ಸಂಘಟನೆಗೆ ಬಿಟ್ಟ ವಿಚಾರ ಎಂದು ನುಣುಚಿಕೊಂಡರು. ಇಡೀ ದೇಶದಲ್ಲಿ ನರೇಂದ್ರಮೋದಿ ಅವರ ಪರವಾದ ಅಲೆ ಇದ್ದು, ಮೋದಿ ಅವರನ್ನು ಈ ದೇಶದ ಪ್ರಧಾನಿಯಾಗಿ ಕಾಣಬೇಕೆಂಬುದು ಈ ದೇಶದ ಜನರ ಬಯಕೆಯಾಗಿದೆ ಎಂದ ಅವರು, ಹಾಸನ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಎದುರು ನೋಡುತ್ತಿದ್ದು, ಮತದಾರರು ತಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
'ಬಲಿಪಶು ವಿಶ್ಲೇಷಣೆ ಸರಿಯಲ್ಲ'
ಅರಕಲಗೂಡು: ಪಕ್ಷ ಮತ್ತು ದೈವದ ಇಚ್ಛೆಯಂತೆ ನಾನು ಹಾಸನದಿಂದ ಕಣಕ್ಕಿಳಿಯುತ್ತಿದ್ದೇನೆ. ಇಲ್ಲಿ ಬಲಿಪಶು ಎಂಬ ವಿಶ್ಲೇಷಣೆ ಸರಿಯಲ್ಲ ಎಂದು ಹಾಸನ ಲೋಕಸಭಾ ಅಭ್ಯರ್ಥಿ ವಿಜಯಶಂಕರ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಹೇಳುವ ಮೂಲಕ ನಿಮ್ಮನ್ನು ಬಲಿಪಶು ಮಾಡಲಾಗುತ್ತಿದೇಯೇ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. ಬಿ.ಬಿ. ಶಿವಪ್ಪ ಅವರು ಅಸಮಾಧಾನಗೊಂಡಿರುವ ಬಗೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯಶಂಕರ್, ನಮ್ಮಿಬ್ಬರ ಸಂಬಂಧ ಉತ್ತಮವಾಗಿದೆ ಎಂದರು. ಚುನಾವಣೆಯಲ್ಲಿ, ದೇವೇಗೌಡರನ್ನು ಎದುರಿಸಲು ನಡೆಸಿರುವ ಸಿದ್ಧತೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವನು. ಜನಾದೇಶದಂತೆ ಇಲ್ಲಿ ಎಲ್ಲವೂ ನಡೆಯುತ್ತದೆ. ಜನರು ಉತ್ತಮವಾದುದನ್ನು ಆಯ್ಕೆ ಮಾಡುತ್ತಾರೆ ಎಂಬ ಭರವಸೆ ಇದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

