ಹಾಸನ

ಕಾಂಗ್ರೆಸ್ ಜಯ ಖಚಿತ

Published On :

ಕ.ಪ್ರ. ವಾರ್ತೆ ಟಿ ಚನ್ನರಾಯಪಟ್ಟಣ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಜಯಗಳಿಸುವುದು ಖಚಿತವಾಗಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆಯೆದ್ದಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕೈಗೊಂಡಿರುವ ಜನಪರ ಕಾರ್ಯಗಳನ್ನು ನೋಡಿ, ಜನತೆ ತಮ್ಮ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎ. ಮಂಜು ಅವರ ಗೆಲುವು ಖಚಿತ ಎಂದು ತಿಳಿಸಿದರು.
ದೇವೇಗೌಡರ ಕೊಡುಗೆಯೇನು?: ಜಿಲ್ಲೆಯ ಅಭಿವೃದ್ಧಿ ಎದುರು ನೋಡುತ್ತಿರುವ ಜನತೆ ರಾಜ್ಯದಲ್ಲಿನ ಆಡಳಿತ ಪಕ್ಷದ ಪರವಿರುವವರನ್ನು ಬೆಂಬಲಿಸಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ತಿಳಿದಿರುವ ಜತೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕಳೆದ 10 ವರ್ಷದಲ್ಲಿ ಯಾವ ಕೊಡುಗೆ ನೀಡಿದ್ದಾರೆಂಬುದನ್ನು ಜನತೆ ತಿಳಿದಿದ್ದಾರೆ ಎಂದು ತಿಳಿಸಿದರು.
ಪ್ರಚಾರ ಕಾರ್ಯ: ಲೋಕಸಭಾ ಚುನಾವಣೆಯ ಪ್ರಯುಕ್ತ ತಾಲೂಕಿನಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ಮಾ. 27 ಮತ್ತು 28ರಂದು ಪ್ರವಾಸ ಕೈಗೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಜನತೆಗೆ ಅರಿವು ಮೂಡಿಸುವ ಕಾರ್ಯ ಹಾಗೂ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಾ. 29ರಂದು ಹಾಸನದಲ್ಲಿ ನಡೆಯಲಿರುವ ಬೃಹತ್ ಪ್ರಚಾರ ಸಭೆಗೆ ತಾಲೂಕಿನಿಂದ ಹೆಚ್ಚು ಹೆಚ್ಚು ಕಾರ್ಯಕರ್ತರನ್ನು ಕೆರೆದೊಯ್ಯುವ ಜವಾಬ್ದಾರಿ ತಮ್ಮ ಮೇಲಿದ್ದು, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಸಂಘಟಿಸುವುದು ತಮ್ಮ ಜವಾಬ್ದಾರಿ ಎಂದು ತಿಳಿಸಿದರು.
ಖಾತೆ ನೀಡಿರಲಿಲ್ಲ: ಕಾಂಗ್ರೆಸ್ ಹಿರಿಯ ನಾಯಕ ಕಬ್ಬಳಿ ರಂಗೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ಪರಿಶಿಷ್ಟರಿಗೆ ಮೋಸ ಮಾಡಿದೆ ಅವರಿಗೆ ಯಾವ ಸ್ಥಾನವನ್ನು ನೀಡಿಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದನ್ನು ವಾಪಸ್ ಪಡೆಯಬೇಕು. ಸಿದ್ದರಾಮಯ್ಯ ಅವರು ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಯ ಪ್ರಮುಖ ಖಾತೆಗಳನ್ನು ಪರಿಶಿಷ್ಟರಿಗೆ ನೀಡಿದ್ದಾರೆ. ದೇವೇಗೌಡರಾಗಲೀ, ಅವರ ಪುತ್ರ ಕುಮಾರಸ್ವಾಮಿಯವರಾಗಲೀ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಇಂತಹ ಖಾತೆಯನ್ನು ಯಾರಿಗೂ ನೀಡಿರಲಿಲ್ಲ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿಯವರಿಗೆ ಪರಿಶಿಷ್ಟರ ಸಾಲ ಮಾಡಬೇಕೆಂಬ ಚಿಂತನೆ ಬರಲಿಲ್ಲ. ಅವರ ಸಾಲ ಮನ್ನಾ ಮಾಡಲು ಸಿದ್ದರಾಮಯ್ಯ ಅವರೇ ಬೇಕಿತ್ತು ಎಂದರು.
ಮೊಸಳೆ ಕಣ್ಣೀರು: ಇತ್ತೀಚೆಗೆ ಚನ್ನರಾಯಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ. ಅದೇ ದಾರಿಯನ್ನು ಅವರ ಮಗ ಕುಮಾರಸ್ವಾಮಿ ಹಿಡಿದಿದ್ದಾರೆ. ಯಾವ ಜನತೆಯೂ ದಡ್ಡರಿಲ್ಲ. ಅವರು ಇವರ ಮೊಸಳೆ ಕಣ್ಣೀರಿಗೆ ಬೆಲೆ ಕೊಡುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿ.ಜಿ. ಲಲಿತಮ್ಮ, ದಲಿತ ಮುಖಂಡ ಶಿವಯ್ಯ, ಚನ್ನರಾಯಪಟ್ಟಣ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಮಹೇಶ್, ಶಿವಪ್ರಸಾದ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.