ದೇಶದ ರಕ್ಷಣೆಗೆ ಬಿಜೆಪಿಗೆ ಮತ ನೀಡಿ
ಕ.ಪ್ರ. ವಾರ್ತೆ ಟಿ ಸಕಲೇಶಪುರ ಟಿ ಮಾ. 23: ದೇಶದ ರಕ್ಷಣೆಗಾಗಿ ಬಿಜೆಪಿಗೆ ಮತ ನೀಡಬೇಕೆಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯ್ ಶಂಕರ್ ತಿಳಿಸಿದರು.
ಪಟ್ಟಣದ ಅಶೋಕ ರಸ್ತೆಯಲ್ಲಿರುವ ಓಂ ಮಂದಿರದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷ ನನಗೆ ಅನೇಕ ಸ್ಥಾನಮಾನಗಳನ್ನು ನೀಡಿದ್ದು ಪಕ್ಷಕ್ಕಾಗಿ ನಾನು ನನ್ನ ಸರ್ವಸ್ವವನ್ನು ಮೀಸಲಿಟ್ಟಿದ್ದೇನೆ ಎಂದರು.
ಪಕ್ಷದ ಆದೇಶ ಪಾಲನೆಗಾಗಿ ನಾನು ಹಾಸನ ಲೋಕಸಭಾ ಚುನಾವಣೆ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಆದೇಶ ಪಾಲಿಸಬೇಕು ಎಂದರು. ಈ ಮೂಲಕ, ತಮ್ಮ ಉಮೇದುವಾರಿಕೆಯನ್ನು ಒಪ್ಪಿಕೊಂಡು ಪ್ರಚಾರದಲ್ಲಿ ತಮಗೆ ಸಹಕರಿಸಬೇಕು ಎಂದು ಕಾರ್ಯಕರ್ತರಿಗೆ ಅವರು ಪರೋಕ್ಷವಾಗಿ ಆಗ್ರಹಿಸಿದರು.
ರಾಷ್ಟ್ರೀಯತೆ ಪರಿಕಲ್ಪನೆ: ಕಾಂಗ್ರೆಸ್ನ ಭ್ರಷ್ಟಚಾರದಿಂದ ಜನ ಬೇಸತ್ತಿದೆ. ಇನ್ನು ತೃತೀಯ ರಂಗ ಕೇವಲ ಚುನಾವಣೆ ಸಂದರ್ಭದಲ್ಲಿ ಹುಟ್ಟುತ್ತದೆ, ಚುನಾವಣೆ ನಂತರ ಸಾಯುತ್ತದೆ. ಕೇವಲ ಅವಕಾಶವಾದಿ ರಾಜಕಾರಣಕ್ಕಾಗಿ ತೃತೀಯ ರಂಗ ಮೀಸಲಾಗಿರುತ್ತದೆ. ಆದ್ದರಿಂದ ಈ ಬಾರಿ ನರೇಂದ್ರ ಮೋದಿರವರ ನೇತೃತ್ವದ ಬಿಜೆಪಿಗೆ ಪ್ರತಿಯೊಬ್ಬರೂ ಮತ ನೀಡಬೇಕಾಗಿದೆ ಎಂದು ಹೇಳಿದರು. ದೇಶದ ಯುವ ಜನ ಬಿಜೆಪಿಯನ್ನು ಬೆಂಬಲಿಸುತ್ತಿದ್ದು, ಬಿಜೆಪಿಯಲ್ಲಿ ಮಾತ್ರ ನಾವು ರಾಷ್ಟ್ರೀಯತೆಯ ಪರಿಕಲ್ಪನೆ ಕಾಣಲು ಸಾಧ್ಯ ಎಂದರು.
ಶಂಕರ್ ಕೆಲಸ ಮಾಡಿದ್ದಾರೆ: ಜಿಲ್ಲಾ ಬಿಜೆಪಿ ಮುಖಂಡ ಬಿ.ಆರ್. ಗುರುದೇವ್ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರದಿಂದ ಕಳೆದ 2 ಬಾರಿ ಸತತವಾಗಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಜಿಲ್ಲೆಯ ಸಮಸ್ಯೆಗಳ ಕುರಿತು ಕನಿಷ್ಟ ಒಂದೇ ಒಂದು ಚರ್ಚೆ ಮಾಡಿಲ್ಲ ಹಾಗೂ ಸಂಸತ್ನಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಕಾಡಾನೆ ದಾಳಿಯಿಂದ ಸತ್ತವರಿಗೆ ಈ ಹಿಂದಿನ ಸರ್ಕಾರಗಳು ಕೇವಲ ಒಂದೇ ಒಂದು ಲಕ್ಷ ರು. ನೆರವನ್ನು ನೀಡುತ್ತಿದ್ದನ್ನು ಇದೇ ವಿಜಯ್ ಶಂಕರ್ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದಾಗ ರು. 5 ಲಕ್ಷಕ್ಕೆ ಏರಿಸಿದ್ದರು. ಇಂತಹ ಅಭ್ಯರ್ಥಿ ನಮ್ಮ ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಯಾದರೆ ಬಹುತೇಕ ಜಿಲ್ಲೆ ಹಾಗೂ ತಾಲೂಕಿನ ಸಮಸ್ಯೆಗಳು ಬಗೆಹರಿಯುತ್ತದೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮುಖಂಡರಾದ ನವಿಲೆ ಅಣ್ಣಪ್ಪ, ಬೆಣ್ಣೂರು ರೇಣುಕುಮಾರ್, ತಾಲೂಕು ಮುಖಂಡರಾದ ರಾಜ್ ಕುಮಾರ್, ಸಂದೇಶ್, ಮಂಜುನಾಥ್ ಸಾಂಘಿ, ಹುಲ್ಲಹಳ್ಳಿ ಜಯೇಂದ್ರ ಕುಮಾರ್, ಡಾ.ನಾರಾಯಣಣ್ಸ್ವಾಮಿ, ಜೈ ಮಾರುತಿ ದೇವರಾಜ್, ಮಾಸವಳ್ಳಿ ಚಂದ್ರು, ಕಬ್ಬಿನಗದ್ದೆ ಶೇಖರ್, ನಮೋ ಬ್ರಿಗೇಡ್ ನ ಸಂದೇಶ್ ಶೆಟ್ಟಿ, ದೀಪಕ್, ಹೆಬ್ಬಸಾಲೆ ಪ್ರಶಾಂತ್ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.
ಪ್ರತಾಪ್ರನ್ನು ಬೆಂಬಲಿಸುವೆ
ಚುನಾವಣೆಯಲ್ಲಿ ಗೆದ್ದ ನಂತರ ತಾವು ಮಾಡಬೇಕೆಂದಿರುವ ಕೆಲಸಗಳನ್ನು ಪಟ್ಟಿ ಮಾಡಿದ ವಿಜಯ ಶಂಕರ್, ಹಾಸನದಲ್ಲಿ ಕಚೇರಿ ತೆರೆದು ವಾರದಲ್ಲಿ ಒಂದು ದಿನ ಜನರ ಸಮಸ್ಯೆ ಆಲಿಸಲು ಮೀಸಲಿಡುತ್ತೇನೆ ಎಂದರು.ಅಲ್ಲದೇ, ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರತಾಪ ಸಿಂಹರವರನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆಂದು ಅವರು ಆಶ್ವಾಸನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

