ಹಾಸನ

ರೈತರಿಗೆ ರಸಗೊಬ್ಬರ ಕೊರತೆ

Published On :

 ಎ. ರಾಘವೇಂದ್ರ ಹೊಳ್ಳ
ಬೇಲೂರು: ಯುಗಾದಿ ನಂತರ ಮುಂಗಾರು ಆರಂಭವಾಗುವ ಸಾಧ್ಯತೆ ಇರುವುದರಿಂದ ಬಿತ್ತನೆ ಕಾರ್ಯದ ಸಿದ್ಧತೆಯಲ್ಲಿ ತೊಡಗಿರುವ ಅನ್ನದಾತರಿಗೆ ರಸಗೊಬ್ಬರಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. ರಸಗೊಬ್ಬರದ ಕೊರತೆಯಿಂದ ಕಾಳಸಂತೆಯಲ್ಲಿ ಖರೀದಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದ್ದು, ಎಲ್ಲೆಲ್ಲೂ ರಸಗೊಬ್ಬರದ ಕೊರತೆ ಉಂಟಾಗಿದೆ. ಇದರ ಪರಿಣಾಮ ರೈತರು ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆ ನೀಡಿ ರಸಗೊಬ್ಬರ ಖರೀದಿ ಮಾಡುವ ಪರಿಸ್ಥಿತಿ ಎದುರಾಗಿದೆ.
ಸದ್ಯಕ್ಕೆ ರಸಗೊಬ್ಬರ ಇಲ್ಲ: ಬೇಲೂರು ತಾಲೂಕಿನಲ್ಲಿ ಹೇರಳವಾಗಿ ಶುಂಠಿ ಬೇಳೆ ನಾಟಿ ಮಾಡಿದ್ದು, ಈಗ ರಸಗೊಬ್ಬರಕ್ಕೆ ಭಾರಿ ಬೇಡಿಕೆ ಇದೆ. ರೈತರು ಅಗತ್ಯವಾದ ಕೆಲವು ರಸಗೊಬ್ಬರವನ್ನು ಸಂಗ್ರಹ ಮಾಡಿಕೊಳ್ಳುವ ಅವಸರದಲ್ಲಿ ದುಬಾರಿ ಬೆಲೆ ನೀಡಿ, ಅಂಗಡಿ ಮಾಲಿಕ ಹೇಳಿದ ಬೆಲೆಗೆ ಖರೀದಿ ಮಾಡುತ್ತಿದ್ದಾರೆ.
ಕೆಲ ರಸಗೊಬ್ಬರ ಅಂಗಡಿ ಮಾಲೀಕರು, ಮುಂಗಾರು ಆರಂಭವಾದರೆ ರಸಗೊಬ್ಬರ ಲಭ್ಯವಾಗುವ ಸಾಧ್ಯತೆ ಇಲ್ಲ ಎಂದು ರೈತರಲ್ಲಿ ಭೀತಿ ಸೃಷ್ಟಿ ಮಾಡಿ ಕೃತಕ ಅಭಾವ ಉಂಟು ಮಾಡುತ್ತಿದ್ದಾರೆ.
ಶಂಕೆ:ಕಾಳ ಸಂತೆಯಲ್ಲಿ ಯಾರ ಅಂಕೆ ಶಂಕೆ ಇಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ ಈ ದಂದೆಗೆ ಕೆಲ ರಾಜಕೀಯ ಮುಖಂಡರು ಮತ್ತು ಜಿಲ್ಲಾ ಮಟ್ಟದ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರು ಬಗ್ಗೆ ರೈತರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಹಳೇಬೀಡು, ಬಿಕ್ಕೂಡು, ಅರೇಹಳ್ಳಿ, ಮಾದೀಹಳ್ಳಿ ಹಾಗೂ ಕಸಬಾ ಹೋಬಳಿ ಸೇರಿದಂತೆ ಬಹುತೇಕ ಭಾಗದಲ್ಲಿ ಶುಂಠಿ ಬೆಳೆಯ ನಾಟಿ ಜೋರಾಗಿದೆ. ಕಳೆದ ಬಾರಿಗೆ  ಶುಂಠಿಗೆ ಇರುವ ಬೇಡಿಕೆ ಹಾಗೂ ಬೆಲೆ ಹೆಚ್ಚಳ ಕಂಡು ಸಾವಿರಾರು ಹೆಕ್ಟೇರ್‌ಗಳಲ್ಲಿ ಶುಂಠಿ ಬೆಳೆಯುತ್ತಿದ್ದಾರೆ. ಶುಂಠಿಗೆ ಪ್ರಮುಖವಾಗಿ ಔಷಧಿ ಮತ್ತು ಗೊಬ್ಬರದ ಅಗತ್ಯವಿರುವ ಹಿನ್ನಲೆಯಲ್ಲಿ ರಸಗೊಬ್ಬರವನ್ನು ಹೆಚ್ಚಾಗಿ ಖರೀದಿಸಿ ಶೇಖರಿಸಿಡಲು ಮುಂದಾಗಿದ್ದಾರೆ. ಶುಂಠಿ ಬೆಳೆಗೆ ಪ್ರಮುಖವಾಗಿ ಡಿಎಪಿ, ಸುಫಲಾ ಮಾರಾಟ ಮಾಡುವ ರಸಗೊಬ್ಬರಗಳನ್ನು ಅಂಗಡಿ ಮಾಲಿಕರು ಗೋದಾಮಿನಲ್ಲಿ ಸಂಗ್ರಹಿಸಿಟ್ಟು ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ ಎಂದು ರೈತಸಂಘದ ಮುಖಂಡರು ದೂರುತ್ತಿದ್ದಾರೆ.
ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿ ಮುಂಗಾರು ಆರಂಭಕ್ಕೆ ಮುನ್ನ ಈ ರೀತಿಯ ಕೃತಕ ಅಭಾವ ಸೃಷ್ಟಿಯಾಗುತ್ತಿದ್ದು ರೈತರು ದುಪ್ಪಟ್ಟು ಹಣ ಕೊಟ್ಟು ಗೊಬ್ಬರ ಪಡೆಯುವುದು ಮಾಮೂಲಾಗಿದೆ.
ದೇಶದ ಬೆನ್ನೆಲಬು ಅನ್ನದಾತನ ಮೇಲೆ ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಮನ ನೀಡದಿರುವುದು ವಿಪರ್ಯಾಸ.
ರೈತ ಸಮುದಾಯ ರೊಚ್ಚಿಗೇಳುವ ಮೊದಲು ಅಧಿಕಾರಿಗಳು ಎಚ್ಚೆತ್ತು ಕಾಳಸಂತೆ ನಿಲ್ಲಿಸಿ, ರೈತರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ.


ಗೊತ್ತಿದ್ದೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಖಾಸಗಿ ಅಂಗಡಿಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಇವರು ಸರ್ಕಾರ ಮತ್ತು ಜಿಲ್ಲಾ ಹಾಗೂ ತಾಲ್ಲೂಕಿನ ಸಂಬಂಧಪಟ್ಟ ಇಲಾಖೆಯಲ್ಲಿ ಪರವಾನಿಗೆ ಪಡೆದಿರುವುತ್ತಾರೆ.
ಆದರೆ, ಕ್ರಿಮಿ, ಕೀಟ ನಾಶಕದ ಅಂಗಡಿಗೆ ಮಾತ್ರ ಪರವಾನಿಗೆ ಪಡೆದಿರುವ ಕೆಲವು ಅಂಗಡಿ ಮಾಲೀಕರೂ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.  ರೈತರಿಗೆ ದುಪ್ಪಟ್ಟು ಬೆಲೆಯಲ್ಲಿ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.
ಪರವಾನಿಗಿ ಪಡೆದ ರಸಗೊಬ್ಬರದ ಖಾಸಗಿ ಅಂಗಡಿ ಮಾಲಿಕರು ರಸಗೊಬ್ಬರ ಲೋಡು ಗೋದಾಮಿಗೆ ಬರುವ ಮೊದಲೇ ರೈತರಿಂದ ಮುಂಗಡ ಹಣ ಪಡೆಯುತ್ತಿರುವ ಬಗ್ಗೆ ದೂರು ಕೇಳಿಬರುತ್ತಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ಕೇಳಿದರೆ ನಮಗೆ ಯಾವ ದೂರುಗಳೂ ಬಂದಿಲ್ಲ ಎಂದು ಹೇಳುತ್ತಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.