ಹಾಸನ

ವಿಜಯಶಂಕರ್ ಉಮೇದುವಾರಿಕೆ

Published On :

ಕ.ಪ್ರ. ವಾರ್ತೆ    ಹಾಸನ    ಮಾ.24
ಪಕ್ಷದ ನಿರ್ದೇಶದಂತೆ ಅಂತಿಮವಾಗಿ ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿರುವ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ಸೋಮವಾರ ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದರು.
ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ಸಿ.ಟಿ. ರವಿ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಬಿ.ಆರ್. ಗುರುದೇವ್, ಪಕ್ಷದ ಮುಖಂಡರಾದ  ಎಂ.ಎಸ್. ಕೃಷ್ಣೇಗೌಡ, ನವಿಲೆ ಅಣ್ಣಪ್ಪ, ಬಿ.ಕೆ. ಮಂಜುನಾಥ್, ಎಂ.ಬಿ. ಗುರುಪ್ರಸಾದ್ ಸೇರಿದಂತೆ ನೂರಾರು  ಬೆಂಬಲಿಗರು ಇದ್ದರು.
ಅಭ್ಯರ್ಥಿ ವಿಜಯಶಂಕರ್ ಮಾತನಾಡಿ, ಅಭ್ಯರ್ಥಿಗಿಂತ ಪಕ್ಷ ಮುಖ್ಯ. ಪಕ್ಷದ ಗೌರವ, ಸಿದ್ಧಾಂತ ಉಳಿಯಲು ಮತ್ತು ಮೋದಿ ಪ್ರಧಾನಮಂತ್ರಿಯಾಗಲು ಬಿಜೆಪಿ ರಾಜ್ಯಾದ್ಯಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಕಾರ್ಯಕರ್ತರು, ಮುಖಂಡರು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕೋರಿದರು.
ಮೈಸೂರು- ಕೊಡಗು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿದ್ದ ವಿಜಯಶಂಕರ್ ಅವರು ಹಾಸನ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಲು ಆರಂಭದಲ್ಲಿ ಒಪ್ಪಿರಲಿಲ್ಲ. ಆದ್ದರಿಂದ ಪಕ್ಷದ ರಾಜ್ಯ ವರಿಷ್ಠರು ಚಿಕ್ಕಮಗಳೂರು ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡರನ್ನು ನಿಲ್ಲಿಸಲು ಒಪ್ಪಿತ್ತು. ಆದರೆ ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ವಿಜಯಶಂಕರ್ ಅವರನ್ನು ಕಣಕ್ಕೆ ಇಳಿಸಿದೆ.
ಸರಳ, ಸಜ್ಜನಿಕೆಗೆ ಹೆಸರಾದ ವಿಜಯಶಂಕರ್ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದ ಹಾದಿಯಲ್ಲಿ ಪಕ್ಷದ ಸಿದ್ಧಾಂತ, ಸೂಚನೆ, ನಿರ್ಧಾರಗಳನ್ನು ಶಿರಾಸವಹಿಸಿ ಪಾಲನೆ ಮಾಡಿದ್ದಾರೆ.  ಅದಕ್ಕೆ ಹಾಸನದಿಂದ ಅವರು ಸ್ಫರ್ಧಿಸಿರುವುದು ಸಾಕ್ಷಿಯಾಗಿದೆ.
ಪ್ರತ್ಯೇಕ ಪ್ರಣಾಳಿಕೆ: ಜಿಲ್ಲೆಯಲ್ಲಿ ಆನೇಕ ಸಮಸ್ಯೆಗಳಿದ್ದು, ಕಾಲಬದ್ಧವಾಗಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಿಲ್ಲೆಗೆ ಪ್ರತ್ಯೇಕ ಣಾಳಿಕೆ ಬಿಡುಗಡೆ ಮಾಡಲಾಗುವುದು. ಪಕ್ಷದಲ್ಲಿ ಒಡಕು ಇಲ್ಲ. ಎಲ್ಲರು ಒಗ್ಗೂಡಿ ಪ್ರಚಾರ ಮಾಡುವರು. ಇಲ್ಲಿನ ಜನತೆ ಒಂದು ಬದಲಾವಣೆ ಬಯಸುತ್ತಿದ್ದು, ಜಿಲ್ಲೆ ಒಳಗೆ ನಾಲ್ಕು ದಿವಸ ಪ್ರಚಾರ ಮಾಡಿದ ವೇಳೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹಿರಿಯ ಮುತ್ಸದಿ ಬಿ.ಬಿ. ಶಿವಪ್ಪ ನವರ ಶ್ರೀರಕ್ಷೆ ನಮಗಿದೆ. ಪಕ್ಷದ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.
ತ್ರಿಕೋನ ಸ್ಪರ್ಧೆ: ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್, ಬಿಜೆಪಿ ಮತ್ತು ಬಿಜೆಪಿ ನಡುವೆ ತ್ರೀಕೋನ ಸ್ಪರ್ಧೆ ಇದೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಎರಡನ್ನು ಲಘುವಾಗಿ ಪರಿಗಣಿಸುವುದಿಲ್ಲ. ಈ ಬಾರಿ ಬಿಜೆಪಿ ಪಕ್ಷಕ್ಕೆ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅಲೆ ದೇಶದಲ್ಲಿ ಇರುವಂತೆ ಜಿಲ್ಲೆಯಲ್ಲೂ ಇರುವುದರಿಂದ ಪಕ್ಷ ಪ್ರಭಲವಾಗಿದೆ.   ಪ್ರಮೋದ್ ಮುತಾಲಿಕ್‌ರನ್ನು ಪಕ್ಷದಲ್ಲಿ ಸೇರಿಸಿಕೊಳ್ಳುವುದು ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ಅವರ  ಮೇಲೆ ಕೇಸು ದಾಖಲಿಸಿರುವುದು ದೇಶದ್ರೋಹದ ಕೆಲಸದ ಎಸಗಿ ಅಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸಮಾಜ ಹೊಡೆಯುವ ಕೆಲಸಕ್ಕೆ ಕೈಹಾಕಿರುವುದು ನೋಡಿದರೇ ಅದು ಹತಾಶೆ ಭಾವನೆ ಎನಿಸುತ್ತದೆ. ಮೋದಿ ಅಲೆಗೆ ಭಯಗೊಂಡು ದೇಶ ಹೊಡೆಯುವ ಪದ ಬಳಸಲಾಗುತ್ತಿದೆ ಎಂದು ದೂರಿದರು.
ಜಿಲ್ಲೆಯಲ್ಲಿ 5 ದಶಕಗಳ ಸುಧೀರ್ಘ ಅನುಭವ ಜೆಡಿಎಸ್ ಪಕ್ಷಕ್ಕೆ ಇದೆ. ಅದೇ ರೀತಿ ಕಾಂಗ್ರೆಸ್ ಪಕ್ಷವನ್ನು ಲಘುವಾಗಿ ಪರಿಗಣಿಸುವಾಗಿಲ್ಲ. ಇವೆಡರ ನಡುವೆ ಈ ಬಾರಿ ಜಿಲ್ಲೆಯಲ್ಲಿ ಬೆಜೆಪಿ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೆಜೆಪಿ ಮತ್ತು ಬಿಜೆಪಿ ವಿಲಿನಗೊಂಡು ಈಗ ಶಕ್ತಿಶಾಲಿಯಾಗಿದೆ ಪಕ್ಷ. ಜಿಲ್ಲೆ ಒಳಗೆ ತ್ರಿಕೋನ ಸ್ಪರ್ಧೆ ಇರುವುದರಿಂದ ಎದುರಾಳಿ ಇಂತವರು ಎಂದು ಹೇಳಲು ಅಸಾಧ್ಯ ಎಂದು ಪ್ರತಿಪಾದಿಸಿದರು.



ಅಭ್ಯರ್ಥಿಗಿಂತ ಪಕ್ಷ ಮುಖ್ಯ. ಪಕ್ಷದ ಗೌರವ, ಸಿದ್ಧಾಂತ ಉಳಿಯಲು ಮತ್ತು ಮೋದಿ ಪ್ರಧಾನಮಂತ್ರಿಯಾಗಲು ಬಿಜೆಪಿ ರಾಜ್ಯಾದ್ಯಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಕಾರ್ಯಕರ್ತರು, ಮುಖಂಡರು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು
ಟಿ  ಸಿ.ಎಚ್. ವಿಜಯಶಂಕರ್, ಬಿಜೆಪಿ ಅಭ್ಯರ್ಥಿ


ನರೇಂದ್ರ ಮೋದಿ ಅಲೆ ದೇಶದಲ್ಲಿ ಇರುವಂತೆ ಜಿಲ್ಲೆಯಲ್ಲೂ ಇರುವುದರಿಂದ ಪಕ್ಷ ಪ್ರಭಲವಾಗಿದೆ.   ಪ್ರಮೋದ್ ಮುತಾಲಿಕ್‌ರನ್ನು ಪಕ್ಷದಲ್ಲಿ ಸೇರಿಸಿಕೊಳ್ಳುವುದು ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ಅವರ  ಮೇಲೆ ಕೇಸು ದಾಖಲಿಸಿರುವುದು ದೇಶದ್ರೋಹದ ಕೆಲಸದ ಎಸಗಿ ಅಲ್ಲ.
ಟಿ  ಸಿ.ಟಿ. ರವಿ ಮಾಜಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.