ಮೊಯ್ಲಿ ವಿರುದ್ಧ ಎಚ್ಡಿಕೆ ಸೋಲು ನಿಶ್ಚಿತ
ಕನ್ನಡಪ್ರಭ ವಾರ್ತ್ಣೆ ಹಾಸನ ಮಾ. 26
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಮತದಾರರು ಮೇಲೆ ನಂಬಿಕೆ ಇಲ್ಲದೆ ಈಗ ಚಿಕ್ಕಬಳ್ಳಾಪುರದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಸ್ಪರ್ಧಿಸಲು ಮುಂದಾಗಿದ್ದು, ಅಲ್ಲಿ ಕುಮಾರಸ್ವಾಮಿಗೆ ಸೋಲು ನಿಶ್ಚಿತ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಮನಗರದಲ್ಲಿ ಕುಮಾರಸ್ವಾಮಿ ಕೆಲಸ ಮಾಡಿದ್ದೇ ಆಗಿದ್ದರೆ, ಅಲ್ಲಿನ ಜನರಲ್ಲಿ ನಂಬಿಕೆ ಇರುತ್ತಿತ್ತು. ಈಗ ವೀರಪ್ಪ ಮೊಯ್ಲಿ ವಿರುದ್ಧ ಗದಾ ಪ್ರಹಾರಕ್ಕೆ ಹೋಗಿದ್ದಾರೆ. ಅಲ್ಲಿ ಕುಮಾರಸ್ವಾಮಿ ಸೋಲು ಅನುಭವಿಸುವುದು ಖಚಿತ ಎಂದು ಹೇಳಿದರು.
ಜೆಡಿಎಸ್‌ನ ಸಾಕ್ಷಿ ಗುಡ್ಡವೇನು?: ಈ ಜಿಲ್ಲೆಯಲ್ಲಿ ಪ್ರಧಾನಿ ಮಂತ್ರಿ ಹುದ್ದೆ, ಮುಖ್ಯಮಂತ್ರಿ ಹುದ್ದೆ, ಮಂತ್ರಿ ಹುದ್ದೆಗಳನ್ನು ಜೆಡಿಎಸ್ ಮುಖಂಡರು ಅನುಭವಿಸಿದ್ದಾರೆ. ಆದರೆ, ಅವರ ಸಾಧನೆ ಏನು ಮತ್ತು ಅದಕ್ಕೆ ಇರುವಂತಹ ಸಾಕ್ಷಿ ಗುಡ್ಡವೇನು ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಹಲವಾರು ಸಾಕ್ಷಿಗುಡ್ಡವನ್ನು ನೀಡಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ರು. 1ಕ್ಕೆ 1 ಕೆಜಿ ಅಕ್ಕಿ ನೀಡಿದರು. ಸೋನಿಯಾ ಗಾಂಧಿ ಅವರು ಗ್ರಾಮಪಂಚಾಯ್ತಿಗಳಿಗೆ ಈ ಹಿಂದೆ ಇದ್ದ ಅನುದಾನ ರು. 1 ಲಕ್ಷವನ್ನು ರು. 1 ಕೋಟಿಗೆ ಏರಿಕೆ ಮಾಡಿದರು. ಅದೇ ರೀತಿ ಇಂದಿರಾಗಾಂಧಿ ಅವರ ಕಾಲದಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ್ದು, ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಿಸಿಯೂಟದಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾಕ್ಷಿಗುಡ್ಡವನ್ನು ಉಳಿಸಿಕೊಂಡಿದ್ದಾರೆ. ಆದರೆ ಜೆಡಿಎಸ್‌ನವರು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆಗೆ ನೀಡಿರುವಂತಹ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದ ಅವರು, ಕಣ್ಣೀರು ಹಾಕುವುದೇ ಜೆಡಿಎಸ್‌ನ ಸಾಕ್ಷಿಗುಡ್ಡವಾಗಿದೆ ಎಂದು ಹಾಸ್ಯ ಮಾಡಿದರು.
ಪಕ್ಷ ಒಗ್ಗಟ್ಟಿನಿಂದಿದೆ: ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದು, ಯಶಸ್ವಿಯನ್ನು ಸಾಧಿಸಲಿದ್ದೇವೆ. ಪ್ರಾರಂಭದಲ್ಲಿ ಶುಭವಾಗಿ ಐಕ್ಯತೆಯಿಂದ ಹೊರಟರೆ ಅರ್ಧ ಕೆಲಸ ಆಯಿತು ಅಂತ. ಶುಭಘಳಿಗೆಯಲ್ಲಿ ಎ. ಮಂಜು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದು, ಈ ಚುನಾವಣೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಹೊಸ ಸಂದೇಶ ನೀಡಲಿದ್ದಾರೆ. ಪಕ್ಷದಲ್ಲಿ ಯಾವುದೇ ಒಡಕಿಲ್ಲದೇ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಶಾಸಕ ವೈ.ಎನ್. ರುದ್ರೇಶ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ, ಮುಖಂಡರಾದ ಎಸ್.ಎಂ. ಆನಂದ್, ಎಚ್.ಕೆ. ಮಹೇಶ್, ಅನುಪಮ, ಸಿ.ವಿ. ರಾಜಪ್ಪ, ರಂಗೇಗೌಡ, ಕಡೂರಿನ ಮುಖಂಡರಾದ ಮಲ್ಲಿಕಾರ್ಜುನ್ ಮತ್ತು ಕೆಂಪರಾಜು, ಸಿ.ಎಸ್. ಪುಟ್ಟೇಗೌಡ, ವಿಶ್ವನಾಥ್ ಇತರರು ಇದ್ದರು.
ರಾಮನಗರದಲ್ಲಿ ಕುಮಾರಸ್ವಾಮಿ ಕೆಲಸ ಮಾಡಿದ್ದೇ ಆಗಿದ್ದರೆ, ಅಲ್ಲಿನ ಜನರಲ್ಲಿ ನಂಬಿಕೆ ಇರುತ್ತಿತ್ತು. ಈಗ ವೀರಪ್ಪ ಮೊಯ್ಲಿ ವಿರುದ್ಧ ಗದಾ ಪ್ರಹಾರಕ್ಕೆ ಹೋಗಿದ್ದಾರೆ. ಅಲ್ಲಿ ಕುಮಾರಸ್ವಾಮಿ ಸೋಲು ಅನುಭವಿಸುವುದು ಖಚಿತ
ಟಿ ಡಿ.ಕೆ. ಶಿವಕುಮಾರ್, ಇಂಧನ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

