ಕಾಂಗ್ರೆಸ್ ತನ್ನ ಕೊಡುಗೆ ಬಗ್ಗೆ ಹೇಳಲಿ: ರೇವಣ್ಣ
ಕ.ಪ್ರ.ವಾರ್ತೆ ಬೇಲೂರು ಮಾ.27
ದೇವೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸುವವರು 50 ವರ್ಷದಲ್ಲಿ ಕಾಂಗ್ರೆಸ್ ಕೊಡುಗೆ ಎನು ಎಂಬ ಪ್ರಶ್ನೆಗೆ ಉತ್ತರ ನೀಡಲಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಿರುಗೇಟು ನೀಡಿದ್ದಾರೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ದೇವೇಗೌಡರನ್ನು ಟೀಕಿಸಿರುವ ಕಾಂಗ್ರೆಸಿಗರ ವಿರುದ್ಧ ಹರಿಹಾಯ್ದರು. ಕೆಲವರಿಗೆ ದೇವೇಗೌಡರನ್ನು ಟೀಕಿಸದಿದ್ದರೆ, ರಾತ್ರಿ ನಿದ್ರೆ ಬರುವುದಿಲ್ಲ ಎಂದೂ ವ್ಯಂಗ್ಯ ಮಾಡಿದರು. ಈಗ ಪರೀಕ್ಷಾ ಸಮಯ. ಇಂಥ ಸಂದರ್ಭದಲ್ಲಿ ಕನಿಷ್ಠ 2 ಗಂಟೆ ವಿದ್ಯುತ್ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆಗೀಡಾಗಿದ್ದಾರೆ. ವಿದ್ಯುತ್ ಇಲ್ಲದೇ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಹೀಗೆ, ತೊಂದರೆ ನೀಡುವುದು ಕಾಂಗ್ರೆಸ್ ಕೊಡುಗೆ ಎಂದು ಅವರು ಜರಿದರು.
ದೇವೇಗೌಡರು ತಮ್ಮ ರಾಜಕೀಯ ವಿರೋಧಿ ಎಂಬ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಲ್ಲೆಗೆ ಯಾವುದೇ ಅನುದಾನ ನೀಡಲು ಹಿಂದೇಟು ಹಾಕುತ್ತಿದ್ದು, ದೇವೇಗೌಡರು 51 ವರ್ಷಗಳನ್ನು ರಾಜಕೀಯ ಜೀವನದಲ್ಲೇ ಕಳೆದಿದ್ದು ತಳಮಟ್ಟದ ರಾಜಕಾರಣದಿಂದ ಪ್ರಧಾನಿ ಹುದ್ದೆಗೆ ಹೋಗಬೇಕೆಂದರೆ ಅದು ರಾಜ್ಯದ ಜನತೆಯ ಆಶೀರ್ವಾದವೇ ಕಾರಣ. ಈ ಬಾರಿಯೂ ಜಿಲ್ಲೆ ಹಾಗೂ ರಾಜ್ಯದ ಜನತೆ ಜೆಡಿಎಸ್ ಬೆಂಬಲಿಸಲಿದ್ದು ಕನಿಷ್ಟ 8ರಿಂದ 10 ಸ್ಥಾನಗಳನ್ನು ಜೆಡಿಎಸ್ ಪಡೆಯಲಿದೆ ಎಂದರು.
ಶಾಂತಿ ಕದಡಲು ಡಿಕೆಶಿ ಆಗಮನ: ಜಿಲ್ಲೆಯಲ್ಲಿದ್ದ ನೆಮ್ಮದಿ ಹಾಗೂ ಶಾಂತಿಯ ವಾತಾವರಣವನ್ನು ಕದಡಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿಕೊಂಡಿದ್ದಾರೆ. ದೇವೇಗೌಡರನ್ನು ಸೋಲಿಸಲು ಯಾರೇ ಬಂದರೂ ಸಾಧ್ಯವಿಲ್ಲ. ಜಿಲ್ಲೆಯ ಜನತೆಯ ಆರ್ಶೀವಾದ ಇರುವವರೆಗೂ ದೇವೇಗೌಡರನ್ನು ಯಾರೂ ಎನೂ ಮಾಡಲಾರರು. ದೇವೇಗೌಡರ ವಿರೋಧಿಗಳಿಗೆ ದೇವರೇ ಶಿಕ್ಷೆ ಕೊಡುತ್ತಾನೆ ಎಂದರು.
ದಿನಕ್ಕೆ 2 ಗಂಟೆ ವಿದ್ಯುತ್ ಕೊಡಲು ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ. ಈಗ ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ಹಲವು ಪರೀಕ್ಷೆಗಳು ನಡೆಯುವ ಸಮಯವಾಗಿದ್ದು ರಾತ್ರಿ ವೇಳೆ ವಿದ್ಯುತ್ ತೆಗೆಯುತ್ತಿದ್ದು ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ತಾವು ಇಂಧನ ಸಚಿವರಾಗಿದ್ದಾಗ ಪರೀಕ್ಷೆಯ ಕಾಲದಲ್ಲಿ ಯಾವುದೇ ಕಾರಣಕ್ಕೂ ಸಂಜೆ 7ರಿಂದ ರಾತ್ರಿ 11 ರವರೆಗೆ ಪವರ್ ಕಟ್ ಮಾಡಬಾರದು ಎಂದು ಇಲಾಖೆಗೆ ಸೂಚಿಸಿದ್ದೆ. ಅಲ್ಲದೆ 450 ಸಬ್ ಸ್ಟೇಷನ್ಗಳು, 2500 ಕಿ. ವ್ಯಾ. ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಚಾಲನೆ ನೀಡಿದ್ದನ್ನು ಸ್ಮರಿಸಿಕೊಂಡರು.
ರಾಜಕೀಯದಿಂದ ನಿವೃತ್ತಿ: ಏತ ನೀರಾವರಿಯ ಯೋಜನೆ ತಮ್ಮ ಶ್ರಮ ಎಂದು ವಿರೋಧ ಪಕ್ಷದ ಮುಖಂಡರು ಹೇಳಿಕೊಳ್ಳುತ್ತಾರೆ. ಅಲ್ಲದೇ, ಹೊಳೆನರಸೀಪುರ ತಾಲೂಕಿಗೆ ಯಗಚಿ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಆರೋಪವನ್ನೂ ಮಾಡುತ್ತಿದ್ದಾರೆ. ಒಂದು ವೇಳೆ ಯಗಚಿ ಜಲಾಶಯದ ನೀರು ಹೊಳೆನರಸೀಪುರ ತಾಲೂಕಿಗೆ ಹೋಗಿರುವುದನ್ನು ಸಾಬೀತು ಮಾಡಿದಲ್ಲಿ ತಾವು ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಾಜಶೇಖರ್, ತಾಲೂಕು ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ, ಜಿಪಂ ಸದಸ್ಯ ಚಂದ್ರೇಗೌಡ, ಮಾಜಿ ತಾಪಂ ಅಧ್ಯಕ್ಷ ಎಂ.ಎ. ನಾಗರಾಜ್, ಪುರಸಭೆ ಅಧ್ಯಕ್ಷ ಗಿರೀಶ್, ಮುಖಂಡರಾಜ ಸಿ.ಎಸ್. ಪ್ರಕಾಶ್, ಗಣೇಶ್, ನಟರಾಜ್, ಶ್ರೀನಿಧಿ, ಖಾದರ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

