ಸಾಂಸ್ಕೃತಿಕ ಖಿನ್ನತೆಯಲ್ಲಿ ಇಂದಿನ ಯುವಜನ
ಕ.ಪ್ರ.ವಾರ್ತೆ ಹಾಸನ ಮಾ.27
ವಿಕಾರಗಳನ್ನು ಮನದಲ್ಲಿ ತುಂಬಿಕೊಂಡು, ಸೃಜನಶೀಲತೆಯಿಂದ ವಂಚಿತರಾಗಿ, ಪ್ರತಿಭಾ ಪ್ರದರ್ಶನವೆಂದರೆ ಅಬ್ಬರ ಸಂಗೀತದ ಸಿನಿಮಾ ನೃತ್ಯಗಳು ಮಾತ್ರ ಎಂಬ ತತ್ವಕ್ಕೆ ಅಂಟಿಕೊಂಡಿರುವ ಇಂದಿನ ವಿದ್ಯಾರ್ಥಿ ಸಮೂಹ ಸಾಂಸ್ಕೃತಿಕ ಖಿನ್ನತೆಯಿಂದ ನರಳುತ್ತಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಹಾಗೂ ಜಾನಪದ ಗಾಯಕ ಕರೀಗೌಡ ಅಭಿಪ್ರಾಯಪಟ್ಟರು.
ಹಾಸನ ತಾಲೂಕು ಮೊಸಳೆಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣದ ಉದ್ದೇಶದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರತಿಭಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಗ್ರಾಮೀಣ ಸಂಸ್ಕೃತಿಯ ಸತ್ವವನ್ನು ಪ್ರತಿಬಿಂಬಿಸುವ ಹಳ್ಳಿಯ ಹಾಡುಗಳು, ಸೋಬಾನೆ ಪದಗಳು, ಕೋಲಾಟ, ಸುಗ್ಗಿ ಕುಣಿತದಂತಹ ನೃತ್ಯಗಳು, ಬೀಸುವ ಹಾಗೂ ಕುಟ್ಟುವ ಪದಗಳು ಇಂದು ಕಣ್ಮರೆಯಾಗಿವೆ. ಅವುಗಳ ಜಾಗದಲ್ಲಿ ರೀಮಿಕ್ಸ್ ಸಂಸ್ಕೃತಿ ತಾಂಡವವಾಡುತ್ತಿದೆ. ಸುಮಧುರವಾದ ಸಂಗೀತ ಇಂದಿನ ಅಬ್ಬರದ ಸಂಗೀತದಲ್ಲಿ ನಲುಗಿಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವಜನತೆ ಸೃಜನಶೀಲ ಪ್ರತಿಭೆಯಿಂದ ವಂಚಿತರಾಗಿ ಕೀಳು ಅಭಿರುಚಿಯ ಸಿನಿಮಾ ನೃತ್ಯಗಳಿಗೆ ಸೀಮಿತರಾಗುತ್ತಿದ್ದಾರೆ ಎಂದರು.
ಮೆಚ್ಚುಗೆ: ಹಾಸ್ಯ ಕಾರ್ಯಕ್ರಮಗಳು ಹಾಸ್ಯಾಸ್ಪದವಾಗುತ್ತಿವೆ. ಇಂತಹ ವಾತಾವರಣದಲ್ಲಿ ಶುದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಅಭಿರುಚಿಯನ್ನು ಹುಟ್ಟುಹಾಕಿ, ಅವರ ಸೃಜನಶೀಲ ಪ್ರತಿಭೆಗಳಿಗೆ ವೇದಿಕೆಯನ್ನು ಸೃಷ್ಟಿಸುತ್ತಿರುವ ಈ ಕಾಲೇಜಿನ ಪ್ರಯತ್ನ ಸ್ತುತ್ಯಾರ್ಹವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಶ್ರೀನಿವಾಸ ಮಾತನಾಡಿ ಸಂಸ್ಕೃತಿ ಮೌಲ್ಯಗಳಿಲ್ಲದ ಶಿಕ್ಷಣ ಯಾಂತ್ರಿಕ ಜ್ಞಾನವನ್ನು ಮಾತ್ರ ನೀಡಬಲ್ಲುದು. ಜಾಗತೀಕರಣದ ಕಲ್ಪನೆಯ ಸರಕುಗಳಾಗಿರುವ ನಮ್ಮ ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರತಿಭೆಗಳನ್ನು ಸಕಾರಾತ್ಮಕವಾಗಿ ಬೆಳೆಸುವುದು ನಮ್ಮ ಮುಂದಿನ ದೊಡ್ಡ ಸವಾಲಾಗಿದೆ. ಇಂದು ಸಣ್ಣ ಸಣ್ಣ ಮಕ್ಕಳಿಗೂ ಬಣ್ಣ ಬಣ್ಣದ ವಸ್ತ್ರಗಳನ್ನು ಹಾಕಿ ಆಧುನಿಕ ಹಿಂದಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿಸಿ ಆನಂದಪಡುವ ಪೋಷಕರು ಹಾಗೂ ಶಿಕ್ಷಕರಿದ್ದಾರೆ ಎಂದರು.
ತಪ್ಪು ಸಂದೇಶ ರವಾನೆ: ರಾಮಾಯಣ, ಮಹಾಭಾರತದಂತಹ ಕಾವ್ಯಗಳ ಪ್ರಸಂಗಗಳನ್ನು ಅಪಹಾಸ್ಯ ಮಾಡಿ ಪ್ರಹಸನಗಳನ್ನು ಆಬಿನಯಿಸುವುದೇ ಪ್ರತಿಭೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಇದು ಮುಂದಿನ ಜನಾಂಗಕ್ಕೆ ನಮ್ಮ ಪರಂಪರೆಯ ಬಗೆಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಇಂತಹ ಸಂಪ್ರದಾಯಕ್ಕೆ ಕೊನೆ ಹಾಡಿ ಇಂದಿನ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಪ್ರತಿಭಾ ಪ್ರದರ್ಶನವನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಾಂಸ್ಕತಿಕ ಸಮಿತಿಯ ಸಂಚಾಲಕ ಎಂ.ಮಾದೇಗೌಡ ಮಾತನಾಡಿ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಅಭಿರುಚಿಯನ್ನು ಬೆಳೆಸುವಂತಹ ಸ್ಪರ್ಧೆ ಹಾಗೂ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿದಲ್ಲಿ ಖಂಡಿತ ವಿದ್ಯಾರ್ಥಿಗಳು ಸುಸಂಸ್ಕೃತವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ. ಅವರ ಸೃಜನಶೀಲತೆಯೂ ವಿಕಾಸವಾಗುತ್ತದೆ ಎಂದು ಹೇಳಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಪಿ. ಗೋಪಾಲ್, ಗ್ರಂಥಪಾಲಕ ಎನ್. ಮಂಜುನಾಥ್ ವೇದಿಕೆಯಲ್ಲಿ ಇದ್ದರು. ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಲೋಕೇಶ್ ಸ್ವಾಗತಿಸಿದರು. ಪ್ರೀತಿ ವಂದಿಸಿದರು, ಚಾಂದಿನಿ ನಿರೂಪಿಸಿದರು. ನಂತರ ನಡೆದ ಪ್ರತಿಭಾ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಭಾವಗೀತೆ, ಜನಪದಗೀತೆ, ವಾದ್ಯಸಂಗೀತ, ರಸಪ್ರಶ್ನೆ, ಚಿತ್ರಕಲೆ, ಸ್ಮರಣ ಶಕ್ತಿ, ಕೋಲಾಟ, ಜನಪದ ನೃತ್ಯ, ಗ್ರಾಮೀಣ ವಸ್ತುಗಳನ್ನು ಬಿಂಬಿಸುವ ಜಾಹೀರಾತುಗಳ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

