ಭ್ರಷ್ಟಾಚಾರದಲ್ಲೇ ಮಿಂದ ಯುಪಿಎ
ಅರಸೀಕೆರೆ: ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಕಳೆದ 10 ವರ್ಷಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು, ಇದರಿಂದ ದೇಶದ ಆಂತರಿಕ ಭದ್ರತೆಗೆ ಆತಂಕ ಎದುರಾಗಿದೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಟೀಕಿಸಿದ್ದಾರೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನೆಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಸಾಧ್ಯ. ಜನರಲ್ಲಿ ಇದೇ ಅಭಿಪ್ರಾಯ ಬೇರೂರಿದ್ದು, ಅದೇ ತಮಗೆ ವರದಾನವಾಗಲಿದೆ ಎಂದರು.
ಪಕ್ಷ ಎಲ್ಲವನ್ನೂ ನೀಡಿದೆ: ಕಾರ್ಯಕರ್ತರ, ಅಭಿಮಾನಿಗಳ ಸಹಕಾರದಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು ಪಕ್ಷದ ವರಿಷ್ಟರ ಆದೇಶದಂತೆ ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ತಾವು ಮೈಸೂರು ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದು ನಿಜ. ಆದರೆ, ವರಿಷ್ಠರು ಹಾಸನದಿಂದ ಸ್ಪರ್ಧಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ, ಹುರಿಯಾಳಾಗಿ ಅಖಾಡ ಪ್ರವೇಶಿಸಿದ್ದೇನೆ. ಪಕ್ಷ ತಮಗೆ ಎಲ್ಲವನ್ನೂ ನೀಡಿದೆ ಎಂದರು.
ವಿಶಿಷ್ಠ ಕ್ಷೇತ್ರ: ತಾವು ಕ್ಷೇತ್ರಾದ್ಯಂತ ಪ್ರವಾಸ ಮಾಡಿದ್ದು ಎಲ್ಲೆಡೆ ಕಾರ್ಯಕರ್ತರು ಒಗ್ಗಟ್ಟಿನಿಂದ ತಮ್ಮನ್ನು ಬೆಂಬಲಿಸುವ ಮೂಲಕ ಶಕ್ತಿ ತುಂಬಿದ್ದಾರೆ. ರಾಜ್ಯದಲ್ಲೇ ಹಾಸನ ಲೋಕಸಭಾ ಕ್ಷೇತ್ರ ವಿಶಿಷ್ಟವಾದ ಕ್ಷೇತ್ರವಾಗಿದ್ದು ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಪ್ರದೇಶವನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ.
ಅಸಮಾಧಾನ: ಅರಸೀಕೆರೆ ಕ್ಷೇತ್ರ ಮಳೆಯನ್ನಾಧರಿಸಿದ ವ್ಯವಸಾಯ ವ್ಯವಸ್ಥೆ ಹೊಂದಿದ್ದು, ಪ್ರಸ್ತುತ ಕುಡಿಯುವ ನೀರಿಗೆ ಹಾಹಾಕಾರದ ಪರಿಸ್ಥಿತಿ ಎದುರಿಸುತ್ತಿದೆ. ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು ಮನವಿ ಮಾಡುತ್ತಿದ್ದಾರೆ. ಆದರೆ, ಈವರೆಗೆ ಆಡಳಿತ ನಡೆಸಿರುವ ಜನಪ್ರತಿನಿಧಿಗಳು ಜನರ ಕೂಗಿಗೆ ಸ್ಪಂದಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಯಗಳಿಸುವ ವಿಶ್ವಾಸ: ದೇಶಾದ್ಯಂತ ನರೇಂದ್ರ ಮೋದಿಯವರ ಅಲೆ ಅದು ಹಾಸನ ಜಿಲ್ಲೆಯಲ್ಲಿಯೂ ಸಹ ವ್ಯಾಪಿಸುತ್ತಿದ್ದು ಯುವಕ, ಯುವತಿಯರು ಬಿಜೆಪಿಯತ್ತ ಒಲವು ತೋರುತ್ತಿದ್ದು ತಮಗೆ ವರದಾನವಾಗಿ ಪರಿಣಮಿಸಲಿದ್ದು ಕಠಿಣ ಎನಿಸಿರುವ ಈ ಕ್ಷೇತ್ರದಲ್ಲಿ ತಾವು ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಮತದಾರರು ಈ ಬಾರಿ ದೇಶದ ಭದ್ರತೆಗಾಗಿ ಪಕ್ಷದ ಪರ ಮತ ನೀಡಲಿದ್ದಾರೆ ಎಂದ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ತಮಗೂ ಅರಿವಿದೆ. ಜಿಲ್ಲೆಯಲ್ಲಿ 60 ವರ್ಷಗಳು ಇತರರು ಚುನಾಯಿತರಾಗಿದ್ದಾರೆ. ತಮಗೂ 60 ತಿಂಗಳು ಅವಕಾಶ ನೀಡುವರು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್, ನವಿಲೆ ಅಣ್ಣಪ್ಪ, ತಾ.ಅಧ್ಯಕ್ಷ ಹರಳಕಟ್ಟ ರಮೇಶ್, ಮುಖಂಡರಾದ ಎನ್.ಡಿ. ಪ್ರಸಾದ್, ಕಾಟೀಕೆರೆ ಪ್ರಸನ್ನಕುಮಾರ್, ಗಂಜಿಗೆರೆ ಬಸವರಾಜು, ತಾಪಂ ಸದಸ್ಯರಾದ ಬಾಣಾವರ ಜಯಣ್ಣ, ದಿನೇಶ್, ನಗರಾಧ್ಯಕ್ಷ ಹಿರಿಯಣ್ಣ, ವಕ್ತಾರ ವೈ.ಕೆ. ದೇವರಾಜ್, ಹಾರನಹಳ್ಳಿ ಸಿದ್ದಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

