ಹಾಸನ

ಗೌಡ್ರ ರಾಜಕೀಯ ದೇಶಕ್ಕಲ್ಲ, ಕುಟುಂಬಕ್ಕೆ

Published On :

ಚನ್ನರಾಯಪಟ್ಟಣ: ಜನಸೇವೆ ಮಾಡಲು ಕೆಲವರು ರಾಜಕಾರಣ ಮಾಡುತ್ತಿದ್ದರೆ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ತಮ್ಮ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ರಾಜಕಾರಣದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ತಿಳಿಸಿದರು.
ತಾಲೂಕಿನ ಜನಿವಾರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪರ ಮತಯಾಚಿಸಿ ಮಾತನಾಡಿ ದೇವೇಗೌಡ ಅವರು ಯಾರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅವರು ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿದ್ದಾಗಲೂ ರಾಜ್ಯದ ಯಾವ ನಾಯಕರನ್ನು ಬೆಳೆಸಿದ್ದಾರೆ. ಅವರು ಯಾರನ್ನೂ ಬೆಳೆಸಿಲ್ಲ. ಅವರ ಕುಟುಂಬದ ಸದಸ್ಯರನ್ನು ಬೆಳೆಸಲು ಮಾತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಪುಟ್ಟೇಗೌಡ ಟೀಕಿಸಿದರು.
ಮುಖ್ಯಮಂತ್ರಿ, ಪ್ರಧಾನಿ ಹಾಗೂ ಅವರ ಮಗನನ್ನು ಮುಖ್ಯಮಂತ್ರಿ, ಮತ್ತೊಬ್ಬರನ್ನು ಪ್ರಭಾವಿ ಮಂತ್ರಿಯಾಗಿಸಿ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ನಿರೂಪಿಸಲಿ ಎಂದು ಸವಾಲು ಹಾಕಿದ ಅವರು ಕೇವಲ ಅವರ ಹಿಂಬಾಲಕರಿಗೆ ಗುತ್ತಿಗೆ ನೀಡುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಸತತ 50 ವರ್ಷ ರಾಜಕಾರಣ ಮಾಡುತ್ತಾ ಜಿಲ್ಲೆಯ ಜನರನ್ನು ಮುಗ್ದರೆಂದು ತಿಳಿದು ಅವರಿಗೆ ಮೋಸ ಮಾಡಿದ್ದು, ತಾವೊಬ್ಬ ನೀರಾವರಿ ತಜ್ಞರೆಂದು ಹೇಳಿಕೊಂಡು ಕಣ್ಣೀರು ಸುರಿಸುವ ಮಾಜಿ ಪ್ರಧಾನಿಗಳು ಜಿಲ್ಲೆಯ ಎಷ್ಟು ಭಾಗಕ್ಕೆ ನೀರಾವರಿ ಕಲ್ಪಿಸಿದ್ದಾರೆಂದು ತಿಳಿಸಲಿ, ತುಮಕೂರು, ಮಂಡ್ಯ ಜಿಲ್ಲೆಗೆ ನೀರು ಕೊಂಡೊಯ್ಯಲು ಅವಕಾಶ ನೀಡಿದ್ದೇ ಇವರ ಕೊಡುಗೆ ಎಂದು ಟೀಕಿಸಿದರು.
ಸೀತಾರಾಂ ಕೇಸರಿ ಇಲ್ಲ: ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಲು ಕಾಂಗ್ರೆಸ್ ಪಕ್ಷ ಕಾರಣವಾಗಿದ್ದು, ಅದನ್ನು ಎಂದಿಗೂ ಮರೆಯಬಾರದು. ಸೀತಾರಾಂ ಕೇಸರಿ ಅವರು ಇಲ್ಲದಿದ್ದರೆ ಇವರಿಗೆ ಪ್ರಧಾನಿಯಲ್ಲ ದೆಹಲಿಯಲ್ಲಿ ಸ್ಥಳವಿರುತ್ತಿರಲಿಲ್ಲ. ಇಂದು ಅವರಂತಹ ವ್ಯಕ್ತಿ ಯಾರಿಲ್ಲ. ತೃತೀಯ ರಂಗ ಕಟ್ಟಿಕೊಂಡು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ತೃತೀಯ ರಂಗದಲ್ಲಿ ಕೇಸರಿಯಂತಹ ಅಧಿಕಾರ ಬಿಟ್ಟುಕೊಡುವ ವ್ಯಕ್ತಿ ಯಾರೂ ಇಲ್ಲ ಎಂದು ತಿಳಿಸಿದರು.
ಸಿದ್ದು ನೊಂದು ಬಂದರು: ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಇಷ್ಟು ದಿನ ಕಾಯಬೇಕಿರಲಿಲ್ಲ. ಅವರಿಗೆ ಎರಡು ಬಾರಿ ಮುಖ್ಯಮಂತ್ರಿಯಾಗಲು ಜನತೆ ಅವಕಾಶ ನೀಡಿದರು. ಆದರೆ ದೇವೇಗೌಡ ಅವರ ಕುಟುಂಬ ರಾಜಕಾರಣ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ತಪ್ಪಿಸಿದರು. ದೇವೇಗೌಡ ಅವರಿಂದ ಅವರು ಮುಖ್ಯಮಂತ್ರಿ ಆಗಿದ್ದರೆ ಗೌಡರ ಮನೆಯ ಕೂಲಿಯಾಳು ಆಗಿರಬೇಕಿತ್ತು ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಲಲಿತಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರುಗಳಾದ ಚಂದ್ರಶೇಖರ್, ಎಚ್.ಎಸ್. ವಿಜಯ್ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ, ಪಕ್ಷದ ಮುಖಂಡರಾದ ಕಬ್ಬಳಿ ರಂಗೇಗೌಡ, ಎಂ. ಶಂಕರ್, ರಾಮಚಂದ್ರ, ಶೋಭಾ, ಶಶಿಕಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.