ಹಾಸನ

ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನ ಮಾಡಿ

Published On :

ಕನ್ನಡಪ್ರಭವಾರ್ತೆ, ಹಾಸನ, ಮಾ. 28
ಪ್ರಜಾಪ್ರಭುತ್ವವನ್ನು ಬಲಗೊಳಿಸಬೇಕಾದರೆ ಪ್ರತಿಯೊಬ್ಬ ಮತದಾರರೂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ವಿ. ಅನ್ಬುಕುಮಾರ್ ಯುವ ಮತದಾರರಿಗೆ ಹಾಗೂ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಪ್ರಜಾಪ್ರಭುತ್ವ ಸದೃಢಗೊಳಿಸಿ: ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಸಮಿತಿ ನಗರದ ಹೇಮಾವತಿ ಪ್ರತಿಮೆ ಬಳಿ ಮತದಾರರ ಜಾಗೃತಿಗಾಗಿ ಶುಕ್ರವಾರ ಏರ್ಪಡಿಸಿದ್ದ ಬೃಹತ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರೂ ಮತದಾನದ ದಿನದಂದು ತಪ್ಪದೆ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂದರು.
ಸ್ವೀಪ್ ಸಮಿತಿಯ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ಶುಭ ಹಾರೈಸಿದರು.
ಕರಪತ್ರಗಳ ವಿತರಣೆ: ಈ ಬೃಹತ್ ಜಾಥಾ, ಹೇಮಾವತಿ ಪ್ರತಿಮೆಯಿಂದ ಹೊರಟು ಸಹ್ಯಾದ್ರಿ ವೃತ್ತ, ಹೊಸ ಲೈನ್ ರಸ್ತೆ, ಸಂತೆ ಪೇಟೆ ರಸ್ತೆ, ನೆಹರು ವೃತ್ತದ ಮೂಲಕ ಹಾಯ್ದು ಪೊಲೀಸ್ ಸರ್ಕಲ್ನಲ್ಲಿ ಅಂತ್ಯಗೊಂಡಿತು. ಈ ಜಾಥಾದಲ್ಲಿ ಬೀದಿ ನಾಟಕದ ಕಲಾ ತಂಡದವರಿಂದ ಚುನಾವಣೆಗೆ ಹೆಚ್ಚಿನ ರೀತಿಯಲ್ಲಿ ಬಂದು ಮತ ಚಲಾಯಿಸುವ ಕುರಿತ ಅರಿವು ಮೂಡಿಸುವ ಜಾಗೃತಿ ಹಾಡನ್ನು ಜಾಥಾದಲ್ಲಿ ಹಾಡುವುದರ ಮೂಲಕ ಜನರನ್ನು ಆಕರ್ಷಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಎಲ್. ಶ್ಯಾಮಲಾದೇವಿ, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚಿದಾನಂದ, ಸ್ವೀಪ್ ಸಮಿತಿಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಎನ್.ಎಸ್.ಎಸ್. ಸಂಚಾಲಕ ಕೃಷ್ಣಪ್ಪ, ಕ್ಷೇತ್ರ ಪ್ರಚಾರ ಇಲಾಖೆಯ ಪ್ರಕಾಶ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಜಾಥಾದಲ್ಲಿ ನಗರದ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳು, ನರ್ಸಿಂಗ್ ಕಾಲೇಜು, ವೈದ್ಯಕೀಯ ಕಾಲೇಜು, ಬಿ.ಎಡ್. ಕಾಲೇಜು, ತಾಲ್ಲೂಕಿನ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ನಗರಸಭೆಯ ಪೌರ ಕಾರ್ಮಿಕರು, ಆರೋಗ್ಯ ಇಲಾಖೆಯ ನೌಕರರು, ನಾನಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ನಾನಾ ಸಂಘ ಸಂಸ್ಥೆಗಳ ಸದಸ್ಯರು ಬೃಹತ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.