ಒಡೆದು ಆಳಿದ್ದರಿಂದಅರಸೀಕೆರೆ ಬರಪೀಡಿತ
ಅರಸೀಕೆರೆ: ಕುತಂತ್ರ ಹಾಗೂ ಜಾತಿ ರಾಜಕಾರಣಕ್ಕೆ ಹೆಸರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಒಡೆದು ಆಳುವ ನೀತಿಯಿಂದಲೇ ಅರಸೀಕೆರೆ ತಾಲೂಕಿನ ಜನತೆ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊರುವಂತಾಗಿದೆ. ಕಾವೇರಿ ಕಣಿವೆಯ ಜನರನ್ನು ಕೃಷ್ಣ ಕಣಿವೆಗೆ ಸೇರಿಸುವ ಮೂಲಕ ಈ ತಾಲ್ಲೂಕಿನ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಅರಕಲಗೂಡು ಶಾಸಕ ಹಾಗೂ ಹಾಸನ ಲೋಕಸಭಾ ಅಭ್ಯರ್ಥಿ ಎ. ಮಂಜು ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಲೋಕಸಭಾ ಚುನವಾಣೆ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತಂತೆ ಸುದೀರ್ಘ ಚರ್ಚೆ ನಡೆಸಲಾಯಿತು.
ಮೊಸಳೆ ಕಣ್ಣೀರು: ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತೀವ್ರ ಬರಗಾಲ, ಮಳೆಯ ಅಭಾವದಿಂದ ತೆಂಗಿನ ಮರಗಳು ಸುಳಿಬಿದ್ದು ನಾಶವಾಗಿದ್ದು ಅದರ ಪಾಪದ ಫಲವಾಗಿ ತಾವು ನಾಶವಾಗಲಿದ್ದೀರಿ. ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ಹೇಮಾವತಿ ನೀರಿನ ಸೌಲಭ್ಯವನ್ನು ಬೇರೆಯವರಿಗೆ ಬಿಟ್ಟು ಸೋಲಿನ ಸುಳಿಯಿಂದ ಪಾರಾಗಲು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆಂದು ಕಿಡಿಕಾರಿದರು.
ಲೋಕೋಪಯೋಗಿ ಸಚಿವರಾಗಿ, ಸಂಸದರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಸಾಧ್ಯವಾಗದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಅದೆಷ್ಟು ಕಡೆ ಚುನಾವಣೆಗಳು ಎಂಬುದೇ ಅರ್ಥವಾಗುತ್ತಿಲ್ಲ. ಚುನಾವಣೆ ಎದುರಾದಾಗಲೆಲ್ಲ ಮತದಾರರನ್ನು ತಮಗಿದು ಕಡೆ ಚುನವಾಣೆ ಎಂದು ಕಣ್ಣೀರಿಟ್ಟು ಮತ ಪಡೆಯುವ ನಾಟಕದ ತಂತ್ರಕ್ಕೆ ಜಿಲ್ಲೆಯ ಮತದಾರರು ಈ ಬಾರಿ ಇತಿಶ್ರೀ ಹಾಡಲಿದ್ದಾರೆ ಎಂದರು.
ಹೊಸ ಬಾಂಬ್: ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮತದಾರರನ್ನು ಮೂರ್ಖರನ್ನಾಗಿಸಲು ಅವರು ಕೈಗೊಂಡಿರುವ ಯೋಜನೆಗಳೇನು ಎಂಬುದು ತಮಗೂ ತಿಳಿದಿದೆ. ದುದ್ದ- ಹಾಸನ ರಸ್ತೆ, ಬಾಣಾವರ ಹುಳಿಯಾರು ರಸ್ತೆ ಕಾಮಗಾರಿ ನೆನೆಗುದಿಗೆ ಬೀಳಲು ಇವರು ಗುತ್ತಿಗೆದಾರರನ್ನು ಬೆದರಿಸುತ್ತಿರುವುದೇ ಕಾರಣ ಎಂದು ಹೊಸ ಬಾಂಬ್ ಸಿಡಿಸಿದರು.
ಮಾಜಿ ಸಚಿವ ಬಿ. ಶಿವರಾಂ, ಮಾಜಿ ಶಾಸಕ ಕೆ.ಪಿ. ಪ್ರಭುಕುಮಾರ್, ಜಿಪಂ ಮಾಜಿ ಅಧ್ಯಕ್ಷ ಗುರುಸಿದ್ದಪ್ಪ, ಹಿಂದುಳಿದ ವರ್ಗಗಳ ಮುಖಂಡ ಪಟೇಲ್ ಶಿವಪ್ಪ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಜ್ಜನಹಳ್ಳಿ ಬಸವರಾಜ್, ನೂರ್ ಸಾಬ್, ವಿಜಯಕುಮಾರ್, ಚಂದ್ರಪ್ಪ ಇನ್ನಿತರರು ಮಾತನಾಡಿದರು. ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ಹಿರಿಯೂರು ರೇವಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಜಿ. ಶಿವಶಂಕರಸ್ವಾಮಿ, ಎಪಿಎಂಸಿ ಸದಸ್ಯ ಮೆಟ್ರೋಬಾಬು, ಜಿಟಿಎಸ್ ಗೌಸ್ ಖಾನ್, ಅಜಯ್, ಶೇಖರಪ್ಪ, ಚಂದ್ರಪ್ಪ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

