ಹಾಸನ

ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ , ಹಾಸನ , ಮೇ 4
ಕುಡಿಯುವ ನೀರು ಹಾಗೂ ನಿವಾಸದಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಬೀರನಹಳ್ಳಿ ಕೆರೆ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ನಿವಾಸಿದಲ್ಲಿ ಅಸಮರ್ಪಕ ಕುಡಿಯುವ ನೀರು, ಅವ್ಯವಸ್ಥೆಯಿಂದ ಬೇಸದ್ದ ಜನತೆ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಖಾಲಿ ಕೊಡಗಳನ್ನು ಪ್ರದರ್ಶಿಸಿದರು.
ನಗರದ ಬೀರನಹಳ್ಳಿ ಕೆರೆ, ಹೊಯ್ಸಳ ನಗರ ಹಾಗೂ ಪೊಲೀಸ್ ಕಾಲೋನಿಯ ನಿವಾಸಗಳಲ್ಲಿ ಕಳೆದ ಕೆಲವು ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಬರುತ್ತಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.
 ಕುಡಿಯುವ ನೀರಿಲ್ಲದೇ ಜನರು ಸಂಕಷ್ಟ ಎದುರಿಸುತ್ತಿದ್ದು, ಟ್ರ್ಯಾಕ್ಟರ್ ಮೂಲಕ ನೀರು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ಟ್ರ್ಯಾಕ್ಟರ್ ಮೂಲಕ ಪೂರೈಸಲಾಗುತ್ತಿರುವ ನೀರು ಸಾಲುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ನಿವಾಸದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಈವರೆಗೂ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ. ಕಾಲೋನಿಯಲ್ಲಿನ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ನಿವಾಸಿಗಳು ಗೋಳು ಕೇಳುವವರು ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಆಗ್ರಹ: ನಿವಾಸಿಗಳು ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಹೇಮಾವತಿ ನೀರು ಬರದಿದ್ದರೂ ಬೋರ್‌ವೆಲ್ ನೀರನ್ನಾದರೂ ನಗರಸಭೆ ಬಿಡಬೇಕು ಎಂದು ಆಗ್ರಹಿಸಿದರು.
ದಾರಿ ಮೇಲೆ ಕೊಳಚೆನೀರು: ಅಷ್ಟೇ ಅಲ್ಲದೆ ನಿವಾಸದಲ್ಲಿ ಯುಜಿಡಿ ವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದ್ದರೂ ಸಂಬಂಧಪಟ್ಟವರು ಯಾರೂ ಈ ಬಗ್ಗೆ ಕ್ರಮಕೈಗೊಂಡಿಲ್ಲ. ಚರಂಡಿಗಳು ಸ್ವಚ್ಛಗೊಳಿಸುವಂತೆ ತಿಳಿಸಿದರೂ ಅದಕ್ಕೂ ಸ್ಪಂದಿಸಿಲ್ಲ. ಇದರಿಂದ ಬೇಸತ್ತು ನಿವಾಸಿಗಳೇ ಹಣವನ್ನು ಸಂಗ್ರಹಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಿಕೊಂಡಿದ್ದೇವೆ. ಚರಂಡಿಗಳನ್ನು ಸ್ಪಚ್ಚಗೊಳಿಸದ ಕಾರಣ ರಸ್ತೆಗಳಲ್ಲಿಯೇ ಕೊಳಚೆ ನೀರ ಹರಿದಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲಸೌಕರ್ಯಗಳ ಕೊರತೆ: ಜೊತೆಗೆ ಇಲ್ಲಿನ ರಸ್ತೆಗಳು ಸರಿ ಇಲ್ಲದ ಕಾರಣ ದುರಸ್ತಿ ಪಡಿಸುವಂತೆ ಕೋರಿದ್ದರೂ ಇನ್ನೂ ರಸ್ತೆಗಳು ಆಗಿಲ್ಲ. ಈ ಬಗ್ಗೆ ನಗರಸಭೆಗೆ ವಿಚಾರಿಸಿದರೇ ಇದು ಸತ್ಯಮಂಗಲ ಗ್ರಾಮಪಂಚಾಯ್ತಿಗೆ ಬರಲಿದೆ ಎಂದು ಹೇಳುತ್ತಾರೆ. ಇಬ್ಬರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವಲತ್ತುಕೊಂಡರು.
ಎಚ್ಚರಿಕೆ: ಶೀಘ್ರವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ, ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಿವಾಸಿಗಳಾದ ನಿಂಗೇಗೌಡ, ಮಹಾಮದ್ ವಜೀರ್, ದೊಡ್ಡೇಗೌಡ, ಪಣೀರಾಜ್, ಬಸವರಾಜ್ ಹಾಗೂ ಇತರರು ಇದ್ದರು. 0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.