27 ಸಾವಿರ ಮೆಟ್ರಿಕ್ ಟನ್ ಬಿತ್ತನೆ ಆಲೂಗಡ್ಡೆ ಶೇಖರಣೆ
ಹಾಸನ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಈ ಬಾರಿ ನಾನಾ ಶೀತಲ ಗೃಹಗಳಲ್ಲಿ 27,000 ಮೆಟ್ರಿಕ್ ಟನ್ ಬಿತ್ತನೆ ಆಲೂಗಡ್ಡೆ ಶೇಖರಣೆಯಾಗಿದೆ.
ಈ ಪ್ರಮಾಣದ ಆಲೂಗಡ್ಡೆ ಅಂದಾಜು 21,500 ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆಗೆ ಸಾಕಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಂದಾಜು 4000-5000 ಹೆಕ್ಟೇರ್ ಶುಂಠಿ ಹೆಚ್ಚಾಗಿ ಬಿತ್ತನೆಯಾಗಿದ್ದು, ಆಲೂಗಡ್ಡೆ ಬೆಳೆಯ ವಿಸ್ತೀರ್ಣ ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬಾರಿ ಬಿತ್ತನೆ ಆಲೂಗಡ್ಡೆಗೆ ಕೊರತೆಯಾಗುವ ಸಾಧ್ಯತೆ ಇಲ್ಲ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಗಾರು ತಡವಾಗಿ ಆರಂಭವಾಗುವ ಸಾಧ್ಯತೆಯಿದೆ. ಈ ವರ್ಷದ ಮುಂಗಾರು ಮಳೆ ಒಟ್ಟಾರೆಯಾಗಿ ಕೊರತೆಯಾಗಬಹುದಾಗಿದ್ದು, ರಾಜ್ಯದ ವಿಪತ್ತು ನಿರ್ವಹಣೆ ಕೋಶ, ಬೆಂಗಳೂರು ರವರ ಮಾಹಿತಿ ಪ್ರಕಾರ ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲವಿರುವ ಸಾಧ್ಯತೆ ಇದ್ದು, ಜುಲೈ ಮತ್ತು ಆಗಸ್ಟ್ ಮಾಹೆಯಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಆಲೂಗಡ್ಡೆ ಬಿತ್ತನೆಗೆ ತಾಂತ್ರಿಕವಾಗಿ ಹವಾಮಾನ ಆಧಾರಿತವಾಗಿ ಮೇ-15 ರಿಂದ ಜೂನ್-15ರ ವರೆಗೂ ಕಾಲಾವಕಾಶವಿದೆ. ಮಣ್ಣಿನಲ್ಲಿ ತೇವಾಂಶದ ಕೊರತೆ ಹಾಗೂ ಹೆಚ್ಚಿನ ಉಷ್ಣಾಂಶದಿಂದ ಗಡ್ಡೆಗಳು ಕೊಳೆತು ನಾಶವಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ರೈತರು ತಮ್ಮ ಭಾಗದಲ್ಲಿ ಮಳೆಯ ಪ್ರಮಾಣವನ್ನು ಗಮನಿಸಿ ಆಲೂಗಡ್ಡೆ ಬಿತ್ತನೆ ಮಾಡುವುದು ಸೂಕ್ತವಾಗಿರುತ್ತದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರೂ ಈ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ರೈತರು ಯಾವುದೇ ಆತುರಕ್ಕೆ ಒಳಗಾಗದೇ ಹದವಾಗಿ ಮಳೆಯಾಗುವುದನ್ನು ಗಮನಿಸಿ ಬಿತ್ತನೆ ಆಲೂಗಡ್ಡೆ ಖರೀದಿಸುವುದು ಹಾಗೂ ಬಿತ್ತನೆ ಮಾಡುವುದು ಸೂಕ್ತ. ಶೈತ್ಯಾಗಾರಗಳಿಂದ ಬಿತ್ತನೆ ಆಲೂಗಡ್ಡೆ ತೆಗೆದ ನಂತರ ಕನಿಷ್ಠ 10-15 ದಿವಸ ಹದಗೊಳಿಸಿ ಮೊಳಕೆ ಬಂದ ನಂತರ ಹಾಗೂ ಹದವಾಗಿ ಮಳೆಯಾಗಿ ಭೂಮಿ ತಂಪಾದ ನಂತರವೇ ಬಿತ್ತನೆ ಮಾಡುವಂತೆ ವಿನಂತಿಸಿದೆ.
ಮುಖ್ಯವಾಗಿ ಮಳೆಯಾಶ್ರಿತವಾಗಿ ಆಲೂಗಡ್ಡೆ ಬೆಳೆಯುವ ರೈತರು ಮಳೆ ಪ್ರಮಾಣವನ್ನು ಗಮನಿಸಿ ಆಲೂಗಡ್ಡೆ ಬಿತ್ತನೆ ಮಾಡುವುದು ಅಥವಾ ಇತರೆ ಬೆಳೆಗಳಾದ ಮೆಕ್ಕೆಜೋಳ, ರಾಗಿ ಇತ್ಯಾದಿ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕ ಶಕೀಲ್ ಅಹಮದ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

