ಇದು ಡಕೋಟ ಎಕ್ಸ್ಪ್ರೆಸ್ ಹೈವೇ!
ಕ.ಪ್ರ. ವಾರ್ತೆ ಜಾವಗಲ್ ಮೇ 10
ಜಾವಗಲ್ ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 234 ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಪಟ್ಟಣದ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ರಸ್ತೆಯ ಎರಡೂ ಬದಿಗಳಲ್ಲಿ ನೆಲಮಟ್ಟದಿಂದ ಸುಮಾರು 4 ಅಡಿ ಎತ್ತರದ ಮೋರಿಗಳನ್ನು ನಿರ್ಮಿಸಲಾಗಿದ್ದು, ಮೋರಿಗಳ ಮೇಲೆ ಸಂಪೂರ್ಣವಾಗಿ ಸ್ಲ್ಯಾಬ್ಗಳನ್ನು ಮುಚ್ಚಿಲ್ಲ. ಇದರಿಂದ ಪಾದಚಾರಿಗಳು ಓಡಾಡುವಾಗ ಹಲವರು ಮೋರಿಯ ಒಳಕ್ಕೆ ಬಿದ್ದಿರುವ ಘಟನೆಗಳು ನಡೆದಿವೆ.
ಶಾಲೆ ಮುಂದೆ ಮೋರಿ ನೀರು: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಮೋರಿ ಕಾಮಗಾರಿ ಅಪೂರ್ಣಗೊಳಿಸಿರುವುದರಿಂದ ಶಾಲೆಯ ಮುಂಭಾಗದಲ್ಲಿ ಪಟ್ಟಣದ ಹಲವು ಬಡಾವಣೆಗಳಿಂದ ಬರುವ ಮೋರಿ ನೀರು ಮತ್ತು ತ್ಯಾಜ್ಯ ವಸ್ತುಗಳು ಶೇಖರಣೆಯಾಗಿ ರಸ್ತೆಗೆ ನುಗ್ಗುತ್ತಿವೆ. ಇದರಿಂದ ಶಾಲೆಯ ಪರಿಸರಕ್ಕೂ ಧಕ್ಕೆಯಾಗುತ್ತಿದೆ.
ಸೊಳ್ಳೆಗಳ ಕಾಟ: ಶಾಲೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ಹಾಗೂ ಹಳೆ ಬಸ್ನಿಲ್ದಾಣದವರೆಗಿನ ಮೋರಿ ಕಾಮಗಾರಿಯನ್ನು ಮಾಡದೇ ಇರುವುದರಿಂದ ಬಸ್ ನಿಲ್ದಾಣದ ಮುಂಭಾಗದ ಅಪೂರ್ಣವಾಗಿರುವ ಮೋರಿಯಲ್ಲಿ ತ್ಯಾಜ್ಯ ವಸ್ತುಗಳು ಶೇಖರಣೆ ಆಗುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಪರಿಸ್ಥಿತಿ ಉಂಟಾಗುವ ಸಂಭವವಿದೆ.
ಆಶ್ವಾಸನೆ ಏನಾಯ್ತು?: ಜತೆಗೆ ದುರ್ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಸುಮಾರು 2 ತಿಂಗಳ ಹಿಂದೆ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿದಾಗ, ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಎಂಜಿನಿಯರ್ಗಳು ಮೇ ಅಂತ್ಯದೊಳಗೆ ಜಾವಗಲ್ ಕೆರೆ ಏರಿಯಿಂದ ಕೆ.ಬಿ. ಹಾಳ್ಹ್ಯಾಂಡ್ ಪೋಸ್ಟ್ವರೆಗೆ ರಸ್ತೆ ಹಾಗೂ ಮೋರಿ ಕಾಮಗಾರಿಯನ್ನು ಪೂರ್ಣಗೊಳಿಸಿಕೊಡುವುದಾಗಿ ಹೇಳಿದ್ದರು.
ಆದರೆ ಮೇ ಮೊದಲ ವಾರ ಕಳೆದರೂ ಇನ್ನೂ ಪಟ್ಟಣವ್ಯಾಪ್ತಿಯಲ್ಲಿ ಹಾದುಹೋಗುವ 2 ಕಿ.ಮೀ ರಸ್ತೆ ಮತ್ತು ಮೋರಿ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ.
ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದಿನ್ನೂ ಪೂರ್ತಿಯಾಗಲು, ಇನ್ನೂ 56 ತಿಂಗಳು ಬೇಕಾಗಬಹುದೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಮಳೆ ಬಂದಾಗ ತೊಂದರೆ: ಕಳೆದೆರಡು ಮೂರು ದಿನಗಳಿಂದ ಆವರಿಸಿರುವ ಸೈಕ್ಲೋನ್ ಪರಿಣಾಮವಾಗಿ ಜಾವಗಲ್ ಸುತ್ತಮುತ್ತ ಅಪರೂಪಕ್ಕೆ ಸೋನೆಮಳೆ ಬಂದಿತ್ತು.
ಇದರಿಂದಾಗಿ, ಮೋರಿಯ ನೀರು ಮತ್ತು ತ್ಯಾಜ್ಯವಸ್ತುಗಳು ರಸ್ತೆಯ ಮೇಲೆ ಹರಿದು ಸುಮಾರು ಒಂದು ಫಾರ್ಲಾಂಗ್ನಷ್ಟು ದೂರದವರೆಗೂ ರಸ್ತೆಯ ಮೇಲೆ 2 ಅಡಿಗಳಷ್ಟು ಎತ್ತರ ನೀರು ಶೇಖರಣೆಯಾಗಿ ವಾಹನಗಳಿಗೆ ಮತ್ತು ಸಾರ್ವಜನಕರಿಗೆ ತೀವ್ರ ತೊಂದರೆ ಉಂಟಾಗಿದೆ.
ಜೂ 1ರಿಂದ ಶಾಲಾಕಾಲೇಜುಗಳು ಪುನಾರಂಭವಾಗುವುದರಿಂದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಹಿತದೃಷ್ಠಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದ ಮೋರಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿಕೊಡುವಂತೆ ಜಾವಗಲ್ ಪಟ್ಟಣದ ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

