ಹಾಸನ

ವಿಪತ್ತು ನಿರ್ವಹಣೆ ವಿಶೇಷ ತರಬೇತಿ

Published On :

ಹಾಸನ: ಪ್ರಾಕೃತಿಕ ವಿಕೋಪಗಳು ಹಾಗೂ ವಿಪತ್ತು ನಿರ್ವಹಣೆ ಹೇಗೆ ಮಾಡಬೇಕೆಂಬ ಕುರಿತು ಜಿಲ್ಲೆಯ ಆಯ್ದ 50 ಮಂದಿಗೆ ತರಬೇತಿ ನೀಡುವ ಶಿಬಿರವೊಂದನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರೆಡ್ಕ್ರಾಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಮೋಹನ್ ಪ್ರಕಟಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ, ಸರ್ಕಾರಿ ವಿಜ್ಞಾನ ಕಾಲೇಜಿನ ಯುವ ರೆಡ್ಕ್ರಾಸ್ ಘಟಕ ಮತ್ತು ಚಾಮರಾಜೇಂದ್ರ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಆಶ್ರಯದಲ್ಲಿ ನಗರದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿದ್ದ 151ನೇ ವಿಶ್ವ ರೆಡ್ಕ್ರಾಸ್ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತರಬೇತಿ ಅಗತ್ಯವಿದೆ: ಪ್ರವಾಹ, ಭೂಕಂಪ, ಸುನಾಮಿ, ಸುಂಟರಗಾಳಿ, ಬಿರುಗಾಳಿ, ಚಂಡಮಾರುತ ಇತ್ಯಾದಿ ಹವಾಮಾನ ವೈಪರೀತ್ಯಗಳು ಉಂಟಾದಾಗ ಆಗುವ ಕಷ್ಟ ನಷ್ಟ ಹಾಗೂ ಜೀವ ಹಾನಿಯನ್ನು ಆದಷ್ಟೂ ಮಟ್ಟಿಗೆ ತಡೆಗಟ್ಟುವ ನಿಟ್ಟಿನಲ್ಲಿ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ರೆಡ್ಕ್ರಾಸ್ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು.
ದಿನಾಚರಣೆ ಮಹತ್ವ: ರೆಡ್ಕ್ರಾಸ್ ಸಂಸ್ಥಾಪಕ ಹೆನ್ರಿ ಡ್ಯುನಾಂಡ್ ಅವರ ಜನ್ಮ ದಿನದಂದು ಜಗತ್ತಿನಾದ್ಯಂತ ವಿಶ್ವ ರೆಡ್ಕ್ರಾಸ್ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ದಿನಾಚರಣೆಯ ಮಹತ್ವ ತಿಳಿಸಿದರು.
ಇತರ ಜಿಲ್ಲೆಗಳಲ್ಲಿ ಇರುವಂತೆ ಹಾಸನದಲ್ಲಿರುವ ರೆಡ್ಕ್ರಾಸ್ ಘಟಕಕ್ಕೂ ತನ್ನದೇ ಆದ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಐದು ಗಣ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ. ಘಟಕದ ಮೂಲಕ ರಕ್ತದಾನ, ಆರೋಗ್ಯ ಇತ್ಯಾದಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಜಗತ್ತಿನಾದ್ಯಂತ ಉತ್ತಮ ಸೇವೆ: ಖ್ಯಾತ ವೈದ್ಯ, ಸಮಾಜ ಸೇವಕ ಹಾಗೂ ರೆಡ್ಕ್ರಾಸ್ ಜಿಲ್ಲಾ ಶಾಖೆ ಉಪಾಧ್ಯಕ್ಷ ಡಾ. ಗುರುರಾಜ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1863ರಲ್ಲಿ ಸ್ಥಾಪನೆಗೊಂಡ ರೆಡ್ಕ್ರಾಸ್ ಸಂಸ್ಥೆ ವಿಶ್ವಾದ್ಯಂತ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಪ್ರಶಂಸಿಸಿದರು.
ಮೌಲ್ಯಯುತ ಸೇವೆ: ಹಿರಿಯ ನಾಗರಿಕ ಎಚ್.ಎಂ. ಶಿವಣ್ಣ ರೆಡ್ಕ್ರಾಸ್ ಸಂಸ್ಥೆ ಸೇವೆ ಪ್ರಶಂಸಿಸಿದರು. ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ. ಎಲ್. ಮುರಳೀಧರ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ರೆಡ್ಕ್ರಾಸ್ ಕುರಿತು ಮಕ್ಕಳಿಗೆ ತಿಳಿವಳಿಕೆ ಕೊಡುವುದು ಅಗತ್ಯ ಎಂದು ಸಲಹೆ ನೀಡಿದರು.
ರೆಡ್ಕ್ರಾಸ್ ಜಿಲ್ಲಾ ಶಾಖೆ ಖಜಾಂಚಿ ಯು.ಜೆ. ಮಲ್ಲಿಕಾರ್ಜುನ ಮಾತನಾಡಿ, ಮುಂದಿನ ವರ್ಷದ ರೆಡ್ಕ್ರಾಸ್ ದಿನಾಚರಣೆ ವೇಳೆಗೆ ಸ್ವಂತ ಕಟ್ಟಡ ಹೊಂದಲೇಬೇಕು. ಅದಕ್ಕಾಗಿ ಸರ್ವರೂ ಸಹಕರಿಸಬೇಕು ಎಂದು ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಅಮ್ಜದ್ ಖಾನ್, ಮುತ್ತತ್ತಿ ರಾಜಣ್ಣ, ನಿವೃತ್ತ ಪ್ರಾಂಶುಪಾಲ ಮಂಜಪ್ಪಗೌಡ, ಡಾ. ವೈ.ಎಸ್. ವೀರಭದ್ರಪ್ಪ, ಡಾ. ಭಾರತಿ ರಾಜಶೇಖರ್, ಕೆ.ಟಿ. ಜಯಶ್ರೀ, ಸಕಲೇಶಪುರದ ಶಾರದಾ ಗುರುಮೂರ್ತಿ ಮತ್ತಿತರರು ಭಾಗವಹಿಸಿದ್ದರು. ರೆಡ್ಕ್ರಾಸ್ ಜಿಲ್ಲಾ ಶಾಖೆ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ಸಂಯೋಜಕ ಕೃಷ್ಣಪ್ಪ ಸ್ವಾಗತಿಸಿದರು. ಎಚ್.ಡಿ. ಕುಮಾರ್ ವಂದಿಸಿದರು.
ದಿನಾಚರಣೆ ನಿಮಿತ್ತ ಸಂಸ್ಕತ ಭವನದಲ್ಲಿ ಏರ್ಪಡಿಸಿದ್ದ ಸ್ವಯಂಪ್ರೇರಿತ ಉಚಿತ ರಕ್ತ ದಾನ ಶಿಬಿರದಲ್ಲಿ ಡಾ. ಭಾರತಿ ರಾಜಶೇಖರ್ ಮತ್ತಿತರ ದಾನಿಗಳು ರಕ್ತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.