ಹೆಣ್ಣಾನೆಯೊಂದಿಗೆ ಎರಡು ಮರಿಯಾನೆ ಸೆರೆ
ಆಲೂರು: ಮುಂದುವರಿದ ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಮತ್ತೊಂದು ಹೆಣ್ಣಾನೆ ಹಾಗು 2 ಮರಿಯಾನೆಗಳನ್ನು ಭಾನುವಾರ ಸೆರೆ ಹಿಡಿಯಲಾಗಿದೆ.
ತಾಲೂಕಿನ ಕೆ. ಹೊಸಕೋಟೆ ಹೋಬಳಿ ಮಾಗಲು ಕಾಲೋನಿ ಬಳಿ ಶನಿವಾರವಷ್ಟೇ 30 ವರ್ಷದ ಒಂದು ಹೆಣ್ಣಾನೆ 8 ವರ್ಷದ ಮರಿಯಾನೆಯನ್ನು ಸೆರೆ ಹಿಡಿಯಲಾಗಿತ್ತು. ನೆನ್ನೆ ಸೆರೆ ಹಿಡಿದ ಹೆಣ್ಣಾನೆಯ ಮರಿ ಸಿಗದಿದ್ದ ಕಾರಣ ಇಂದೂ ಸಹ ಕಾರ್ಯಾಚರಣೆಯನ್ನು ಮುಂದುವರಿಸಲಾಯಿತು. ಮಧ್ಯಾಹ್ನ 2 ಗಂಟೆಯಲ್ಲಿ ಶನಿವಾರ ತಪ್ಪಿಸಿಕೊಂಡಿದ್ದ ಮರಿಯಾನೆ ಹಾಗೂ ಮತ್ತೊಂದು ಹೆಣ್ಣಾನೆ ಹಾಗೂ ಅದರ ಮರಿಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಲಾಯಿತು.
ಮೊದಲು ಪ್ರಜ್ಞೆ ತಪ್ಪಿಸಿ, ನಂತರ ಸೆರೆ ಹಿಡಿಯಲಾದ ಹೆಣ್ಣಾನೆಗೆ ಸೆಣಬಿನ ಹಗ್ಗ ಕಟ್ಟುವ ಮೊದಲೇ ಪ್ರಜ್ಞೆ ಬಂದು ಸುತ್ತ ನೆರೆದಿದ್ದ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಪುನಃ ಅರವಳಿಕೆ ನೀಡಿ ಅದನ್ನು ಸೆರೆ ಹಿಡಿಯುವಷ್ಟರಲ್ಲಿ ಸಿಬ್ಬಂದಿ ಸಾಕಾಗಿ ಹೋಗಿದ್ದರು. ರಾತ್ರಿ ಕಟ್ಟಿದ್ದ ಜಾಗದಲ್ಲಿ ಸೆಣಬಿನ ಹಗ್ಗವನ್ನು ತುಂಡರಿಸಿ ಪಾರಾಗುವ ಯತ್ನದಲ್ಲಿದ್ದಾಗ ಸಾಕಾನೆ ಗೋಪಾಲಸ್ವಾಮಿಯ ಮಾವುತ ಗೋವಿಂದ ರಾಜುವಿನ ಸಮಯ ಪ್ರಜ್ಞೆಯಿಂದಾಗಿ ಪುನಃ ಬಂಧಿಸುವಲ್ಲಿ ಯಶಸ್ವಿಯಾದರು.
ಸೆರೆ ಹಿಡಿದಿದ್ದ ಹೆಣ್ಣಾನೆ ಮರಿಯಿಂದ ಬೇರ್ಪಟ್ಟ ಕಾರಣ ಆಹಾರ ಸೇವಿಸದೆ ಮಂಕಾಗಿತ್ತು. ನಿನ್ನೆಯೇ ಅದರ ಮರಿಯನ್ನು ಹಿಡಿದಿದ್ದರೆ ಇಂದು ಕಾರ್ಯಾಚರಣೆ ಸ್ಥಗಿತಗೊಳಿಸಿ ಆನೆಗಳನ್ನು ಶಿವಮೊಗ್ಗದ ಸಕ್ರೆಬೈಲು ಅರಣ್ಯ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು.
ಆದರೆ ಮರಿಯಾನೆಯನ್ನು ಹಿಡಿಯಲೇಬೇಕಾದ ಪರಿಣಾಮ ವಿಧಿಯಿಲ್ಲದೆ ಕಾರ್ಯಾಚರಣೆ ನಡೆಸಿದ ಪರಿಣಾಮ ಆ ಮರಿಯಾನೆ ಜೊತೆಗೆ ಮತ್ತೊಂದು ಹೆಣ್ಣಾನೆ ಹಾಗೂ ಅದರ ಮರಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ, ಪಕ್ಕದ ಹರಿಹಳ್ಳಿ ಗ್ರಾಮದಲ್ಲಿ ಕೆಂಚಾಂಬ ದೇವಿಯವರ ದೊಡ್ಡ ಜಾತ್ರಾ ಮಹೋತ್ಸವ ಇರುವ ಕಾರಣ ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯವರು ವಿಶೇಷ ಮುತುವರ್ಜಿ ವಹಿಸಿ ಕಾಡಾನೆಗಳು ಜಾತ್ರೆಯ ಸ್ಥಳಕ್ಕೆ ಬಾರದಂತೆ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಬೇಕಾಯಿತು.
ಸಕ್ರೆಬೈಲು ಅರಣ್ಯ ಪ್ರದೇಶಕ್ಕೆ: ಇಂದು ಹಿಡಿದ ಹೆಣ್ಣಾನೆಯು ನೆನ್ನೆ ಹಿಡಿದ ಹೆಣ್ಣಾನೆಯ ಮರಿಯನ್ನು ತನ್ನ ಮರಿಯಂತೆಯೇ ತನ್ನೊಟ್ಟಿಗೆ ಹಿಡಿದ ನಂತರವೂ ರಕ್ಷಿಸಿಕೊಂಡು ಹೆಜ್ಜೆ ಹಾಕಿತು. ಇದುವರೆವಿಗೂ ಒಟ್ಟು 21 ಆನೆಗಳನ್ನು ಸೆರೆ ಹಿಡಿಯಲಾಗಿದ್ದು, ಅದರಲ್ಲಿ 12 ಗಂಡಾನೆ, 4 ಮರಿಯಾನೆ ಹಾಗು 5 ಹೆಣ್ಣಾನೆಗಳನ್ನು ಸೆರೆ ಹಿಡಿಯಲಾಗಿದ್ದು, ಉಳಿದ ಆನೆಗಳನ್ನು ಕೆಲದಿನಗಳ ನಂತರ ಹಿಡಿಯಲಾಗುವುದೆಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದು, ಶನಿವಾರ ಹಾಗೂ ಇಂದು ಹಿಡಿದ 2 ಹೆಣ್ಣಾನೆ ಹಾಗೂ 3 ಮರಿಯಾನೆಗಳನ್ನು ಸೋಮವಾರ ಶಿವಮೊಗ್ಗದ ಸಕ್ರೆ ಬೈಲು ಅರಣ್ಯ ಪ್ರದೇಶಕ್ಕೆ ರವಾನಿಸಲಾಗುವುದು.
ಶನಿವಾರ ಹಿಡಿದ 2 ಆನೆಗಳನ್ನು ಮಾಗಲು ಬಳಿಯ ಅರಣ್ಯದಲ್ಲಿ ಕಟ್ಟಿ ಹಾಕಿದ್ದು, ಇಂದು ಹಿಡಿದ 3 ಆನೆಗಳನ್ನು ಕೆಂಚಾಂಬ ಟೆಂಪಲ್ ಬಳಿ ಕಟ್ಟಿ ಹಾಕಲಾಗಿದ್ದು, ಇಂದು ಜಾತ್ರೆ ಇದ್ದ ಕಾರಣ ಆನೆಗಳನ್ನು ನೋಡಲು ಜನಜಂಗುಳಿಯೆ ನೆರೆದಿತ್ತು. ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆಯವರು ಹರ ಸಾಹಸ ಪಡಬೇಕಾಯಿತು.
ಸಿಸಿಎಫ್ ರಂಗಾರಾವ್, ಡಿಎಫ್ಒ ಗಣೇಶ ಭಟ್ಟ, ತಹಸೀಲ್ದಾರ್ ಮಹದೇವಯ್ಯ, ಆರ್ಎಫ್ಒ ದೇವರಾಜು ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

