ಹಾಸನ

ಹತಾಶೆ ಗೆಲ್ಲುವ ಆತ್ಮವಿಶ್ವಾಸ ಮೂಡಿಸಿ

Published On :

ಹಾಸನ: ಮಕ್ಕಳಿಗೆ ಬದುಕನ್ನು ಸಮರ್ಥವಾಗಿ ಎದುರಿಸುವುದನ್ನು ಕಲಿಸುವ ತುರ್ತು ಅಗತ್ಯವಾಗಿದೆ ಎಂದು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಕಿವಿಮಾತು ಹೇಳಿದರು.
ಇಲ್ಲಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನವನಾಥಯಾಗ ಮಂಟಪದಲ್ಲಿ ನಡೆದ 'ಗುರು ತೋರಿದ ದಾರಿ ತಿಂಗಳ ಮಾಮ  ತೇರು' ಹುಣ್ಣಿಮೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಹತಾಶೆ ಬೇಡವೇ ಬೇಡ: ಇಂದು ಸಣ್ಣಪುಟ್ಟ ಸೋಲುಗಳಿಗೂ ಮಕ್ಕಳು ಹತಾಶರಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಬದುಕಲು ಹಲವಾರು ಮಾರ್ಗಗಳಿವೆ. ಒಂದು ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಮತ್ತೊಂದು ಕನಸನ್ನು ಬೆನ್ನು ಹತ್ತಬೇಕು. ಅದರ ಸಾಕ್ಷಾತ್ಕಾರಕ್ಕೆ ಸತತ ಪ್ರಯತ್ನ ನಡೆಸಬೇಕು. ಬದುಕನ್ನು ಸಮರ್ಥವಾಗಿ ಎದುರಿಸುವುದರಲ್ಲೇ ಬದುಕುವ ಕಲೆ ಅಡಗಿದೆ ಎಂದು ಕಿವಿಮಾತು ಹೇಳಿದರು.
ಭಾರತದ ನಿಜವಾದ ಸಂಪತ್ತು ಯುವ ಸಮುದಾಯ. ಆದರೆ ಸಿನಿಮಾಗಳು ಮತ್ತು ಟಿವಿ ಮಾಧ್ಯಮಗಳು ಭ್ರಾಮಕ ಜಗತ್ತನ್ನು ಸೃಷ್ಟಿಸಿ ಯುವಜನರನ್ನು ದಾರಿತಪ್ಪಿಸುತ್ತಿರುವ ಇಂದಿನ ದಿನಗಳಲ್ಲಿ ಪಾಲಕರ ಜವಾಬ್ದಾರಿ ಹೆಚ್ಚಿದೆ. ಮಕ್ಕಳನ್ನು ಸತ್ಸಂಗದಲ್ಲಿ ಸೇರುವಂತೆ ಮಾಡಿ ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಎಲ್ಲರನ್ನು ಪ್ರೀತಿಸುವ ಸಂಸ್ಕಾರ ಬೆಳೆಸಬೇಕಿದೆ ಎಂದು ಸಲಹೆ ಮಾಡಿದರು.
ಹಿಂದಿನ ಸಿನಿಮಾಗಳಲ್ಲಿದ್ದ ಮಾನವೀಯ ಮೌಲ್ಯಗಳು ಇಂದಿನ ಸಿನಿಮಾಗಳಲ್ಲಿ ಕಾಣೆಯಾಗಿವೆ. ಹಿಂದೆ ಸಿನಿಮಾಗಳ ಕಥೆಯಿಂದ ಪ್ರಭಾವಿತರಾಗಿ ಅಸಂಖ್ಯಾತ ಜನರು ಬದುಕನ್ನು ಸುಂದರಗೊಳಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಆದರೆ ಇಂದಿನ ಸಿನಿಮಾಗಳು ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಠ ಪರಂಪರೆಯಲ್ಲೇ ವಿಶಿಷ್ಟ ಸ್ಥಾನ: ನಾಡಿನ ಬಡಮಕ್ಕಳಿಗೆ ಉಚಿತ ಅನ್ನ, ಬಟ್ಟೆ, ವಸತಿ ಮತ್ತು ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ ಆದಿಚುಂಚನಗಿರಿ ಮಠವು ಮಠ ಪರಂಪರೆಯಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ಅಲ್ಲದೆ ಪರಿಸರ, ಜಾನಪದ ಮತ್ತು ಸಾಂಸ್ಕತಿಕ ಕ್ಷೇತ್ರಗಳನ್ನೂ ಪ್ರೋತ್ಸಾಹಿಸಿ ರಕ್ಷಿಸುತ್ತಾ ಬರುತ್ತಿರುವುದು ಪ್ರಶಂಸನೀಯ. ಇಂತಹ ಕಾರ್ಯಗಳ ಮೂಲಕವೇ ಬೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ  ಜನರ ಮನಸ್ಸಲ್ಲಿ ಚಿರಂಜೀವಿಯಾಗಿದ್ದಾರೆ ಎಂದು ಬಣ್ಣಿಸಿದರು.
ನಮ್ಮನ್ನು ನಾವು ಅರಿಯಬೇಕು: ಸಾನ್ನಿಧ್ಯ ವಹಿಸಿದ್ದ ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ ಮಾತನಾಡಿ, ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿತಾಗ ಮಾತ್ರ ಇತರರನ್ನೂ ಅಹಂಕಾರವಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸಲು ಸಾಧ್ಯವಾಗುತ್ತದೆ. ಹುಟ್ಟಿದವರು ಒಂದು ದಿನ ಸಾಯಲೇಬೇಕು. ಆದರೆ ಅಲ್ಲಿಯವರೆಗೆ ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮನ್ನು ಅಮರರನ್ನಾಗಿಸುತ್ತವೆ ಎಂದು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ  ಕಾಲಬೈರವೇಶ್ವರ ವೇದಾಗಮ ಸಂಸ್ಕತ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯ ಪ್ರೊ. ಸಿ. ನಂಜುಂಡಯ್ಯ ಅವರನ್ನು ವತಿಯಿಂದ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.