ಹಾಸನ

ಎ. ಮಂಜು ಹೇಳಿಕೆಗೆ ವ್ಯಾಪಕ ಆಕ್ರೋಶ

Published On :

ಹಾಸನ: ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ತಾವೇ ಗೆದ್ದಿರು ವುದಾಗಿ ಹೇಳಿರುವ ಕಾಂಗ್ರೆಸ್  ಅಭ್ಯರ್ಥಿಯಾಗಿದ್ದ ಶಾಸಕ ಎ. ಮಂಜು ಅವರ ವರ್ತನೆ ಜಟ್ಟಿ ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಎಂದು  ಜಿಲ್ಲಾ ಪಂಚಾಯತ್ ಸದಸ್ಯ ಮಲ್ಲಿಗೆವಾಳು ದೇವಪ್ಪ ಅವರು ವ್ಯಂಗ್ಯವಾಡಿದ್ದಾರೆ.
  ಜಿಲ್ಲೆಯ ಜನರು ಮಾಜಿ  ಪ್ರಧಾನಿ  ಹೆಚ್.ಡಿ.ದೇವೇಗೌಡರೊಂದಿಗೆ ಭಾವನಾತ್ಮಕ  ಸಂಬಂಧ ಇಟ್ಟುಕೊಂಡಿದ್ದಾರೆ. ಇದು ರಾಜಕೀಯಕ್ಕೆ ಹೊರತಾದ ಸಂಬಂಧ. ಈ ರೀತಿಯ  ಭಾವನಾತ್ಮಕ   ಪ್ರೀತಿಯನ್ನು ಗಳಿಸಲಾರದ್ದಕ್ಕೆ ಎ. ಮಂಜು ಸೋತಿದ್ದಾರೆ.
ಚುನಾವಣೆ  ಸಂದರ್ಭದಲ್ಲಿ ದೇವೇಗೌಡರನ್ನು  ವಿನಾಕಾರಣ ಮನಬಂದಂತೆ  ಜರಿದದ್ದರಿಂದಲೇ ಎ.ಮಂಜು ಸೋಲನುಭವಿಸಬೇಕಾಯಿತು.  ಕಳೆದ ಚುನಾವಣೆಗಿಂತ  ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ದುಪ್ಪಟ್ಟಾಗಿದೆ ಎಂದಿರುವ ಎ. ಮಂಜು ತಮ್ಮ  ಬೆನ್ನನ್ನು  ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದರು. ದೇವೇಗೌಡರು ಒಂದು ಲಕ್ಷಕ್ಕೂ ಹೆಚ್ಚು ಅಂತರದಿಂದ ಆಯ್ಕೆ ಯಾಗಿದ್ದರೂ ಎ. ಮಂಜು ಈ ರೀತಿ ಮಾತನಾಡಿಕೊಳ್ಳುತ್ತಿರುವುದು ಅವರ ಹತಾಶ ಮನೋಭಾವ ತೋರಿಸುತ್ತದೆ ಎಂದರು.  ದೇವೇಗೌಡರು ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾಡಿರುವ  ಅಭಿವೃದ್ಧಿ  ಕೆಲಸಗಳಿಂದಾಗಿಯೇ  ಜಿಲ್ಲೆಯ ಜನರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಎಂದರು.

ಸುಳ್ಳು ಭವಿಷ್ಯ ಶ್ರೀಗಳ ವಿವರಣೆ
ಅರಸೀಕೆರೆ: ದೇಶದ ರಾಜಕೀಯದ  ಬಗ್ಗೆ ತಾವು ಹೇಳಿರುವ ಭವಿಷ್ಯವಾಣಿಯನ್ನು ಕೆಲವರು ಸರಿಯಾಗಿ ಅರ್ಥೈಸಿಕೊಳ್ಳದೇ ನಾನು ಹೇಳಿದ ಭವಿಷ್ಯ ಸುಳ್ಳೆಂದು ಹೇಳುತ್ತಿರುವುದು ಸರಿಯಲ್ಲ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ  ತಿಳಿಸಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ  ವಿವರಣೆ ನೀಡಿದ ಅವರು, ತಾವು ಮೂರು ತಿಂಗಳ ಹಿಂದೆ ಹೇಳಿದ್ದು ಹೀಗೆ   
ನಡೆವ ಹಾದಿ ಮೂರು ಭಾಗವಾದೀತು
ಮುದುಕನ ಕೋಲಮೇಲೆ ಕಾಗೆ ಕೂತೀತು ,
ಮುತ್ತಿನ ಗಿಣಿ ಮುದಕಾಗಿ ಮುತ್ತಾತು (ಮುದಕಾಗದೇ ಮುತ್ತಾತು)
ಎಂದು  ಹೇಳಿದ್ದೆ  ಇದರ ಆರ್ಥ 2014ರ ಚುನಾವಣೆಯಲ್ಲಿ  ಮೂರು ಗುಂಪು ಆದೀತು ಎನ್‌ಡಿಎ, ಯೂಪಿಎ, ಇತರರು. ಕಾಂಗ್ರೆಸ್ ಅನ್ನು ಹುಟ್ಟು ಹಾಕಿದ ಮಹಾತ್ಮ ಗಾಂಧಿ. ಗಾಂಧಿಯ ಕೈಯಲ್ಲಿ ಕೋಲು ಅಂದರೆ ದಂಡ. ದಂಡ ಎಂದರೆ  ಆಡಳಿತ  ಈ ಆಡಳಿತದ ಮೇಲೆ ಕಾಗೆ ಕುಳಿತರೆ ಆಡಳಿತ ನಡೆಸುವವರಿಗೆ  ಅಶುಭ ಹಾಗಾಗಿ ಕಾಂಗೈ ಆಡಳಿತ ಅಂತ್ಯವಾಗಿ ತೀರಾ ಅಧೋಗತಿಗೆ ಇಳಿಯಿತು ಮುತ್ತಿನ ಗಿಣಿ ಮುದಕಾಗದೆ ಮುತ್ತಾತು ಇದರ ಅರ್ಥ ಜಗತ್ತಿನಲ್ಲಿ ಎಲ್ಲರು ಪ್ರೀತಿಸುವ ಪಕ್ಷಿ ಗಿಣಿ ಈ ಹಿಂದೆ ಸಂಸದರಾಗದೆ ಕೇಂದ್ರ ಮಂತ್ರಿ ಮಂಡಲದಲ್ಲಿ ಮಂತ್ರಿ ಯಾಗದೇ ರಾಷ್ಟ್ರರಾಜಕಾರಣದಲ್ಲಿ ಪಾಲ್ಗೊಳ್ಳದೇ ಇದ್ದ ನರೇಂದ್ರ ಮೋದಿ ಎಂಬ ಗಿಣಿ  ಪ್ರಧಾನಿ ಪಟ್ಟಕೇರುವುದು ಖಚಿತವಾಯಿತು.
ಮಹಾತ್ಮ ಗಾಂಧಿಯ ಜನ್ಮ ಭೂಮಿ ಗುಜರಾತಿನ ಪೋರ್‌ಬಂದರ್ ಆ ಸಮುದ್ರದಲ್ಲಿ ಹುಟ್ಟುವುದು ಮುತ್ತು  ನರೇಂದ್ರ ಮೋದಿ  ಗುಜರಾತಿನವರಾಗಿದ್ದು ಮುತ್ತಾಗಿದ್ದಾರೆಂದು ವಿಶ್ಲೇಷಿಸಿದ್ದಾರೆ.
 ಜೊತೆಗೆ ನಾವು ಎಂದೂ ಭವಿಷ್ಯ ಹೇಳುವವರಲ್ಲ ಭವಿಷ್ಯ ರೂಪಿಸುವವರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.