ಹಾಸನ

ಸಂಪರ್ಕ ರಸ್ತೆ ದುರಸ್ತಿಗೊಳಿಸದೆ ನಿರ್ಲಕ್ಷ್ಯ

Published On :

ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ:ಇಲ್ಲಿನ ನೀರಾವರಿ ಇಲಾಖೆ ತಾಲೂಕಿನ ನಾಗಲಾಪುರ ಗ್ರಾಮದ ಬಳಿಯಲ್ಲಿನ ಶ್ರೀರಾಮ ದೇವರ ಬಲದಂಡೆ ನಾಲೆಯ ಸರ್ವಿಸ್ ರಸ್ತೆ ದುರಸ್ತಿಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.
ಇದರಿಂದ ಜನ-ಜಾನುವಾರುಗಳು ತಿರುಗಾಡಲು ಹರಸಾಹಸ ಪಡಬೇಕಾದ ದುಸ್ಥಿತಿಯಲ್ಲಿದೆ.
ನಾಗಲಾಪುರ ಗ್ರಾಮದಯಿಂದ ಶ್ರೀರಾಮ ದೇವರ ಕಟ್ಟೆಯ ಕಡೆಗೆ ತೆರಳುವ ಮಾರ್ಗದಲ್ಲಿನ ಸರ್ವಿಸ್ ರಸ್ತೆ ಕೆಲವು ವರ್ಷಗಳಿಂದ ದುಸ್ಥಿತಿಯಲ್ಲಿದ್ದರೂ, ಇಲ್ಲಿಗೆ ಸಂಬಂಧಿಸಿದ ನೀರಾವರಿ ಇಲಾಖೆಯ ಯಾವುದೇ ಎಂಜಿನಿಯರ್‌ಗಳು ತಿರುಗಿಯೂ ನೋಡದ ಕಾರಣ ನಿತ್ಯ ಇದೇ ರಸ್ತೆಯಲ್ಲಿ ತಮ್ಮ ಜಮೀನಿಗೆ ತೆರಳಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕಾದ ಈ ಭಾಗದ ರೈತರಿಗೆ ತೊಂದರೆಯಾಗಿದೆ ಎಂದು ಇಲ್ಲಿನ ಗ್ರಾಮಸ್ಥರುಗಳು ದೂರಿದ್ದಾರೆ.
ಶ್ರೀರಾಮ ದೇವರ ನಾಲೆಯನ್ನು ಕೋಟಿಗಟ್ಟಲೆ ಅನುದಾನದಲ್ಲಿ ಆಧುನೀಕರಣಗೊಳಿಸಿ ಕೈತೊಳೆದುಕೊಂಡ ನೀರಾವರಿ ಇಲಾಖೆ, ನೂತನ ಕಾಮಗಾರಿಗಳಿಗೆ ತೋರುವ ಮುತುವರ್ಜಿಯನ್ನು ನಾಲೆಯ ರಸ್ತೆಗಳನ್ನು ದುರಸ್ಥಿಗೊಳಿಸುವಲ್ಲಿ ತೋರುತ್ತಿಲ್ಲ ಎಂಬುದು ಈ ಭಾಗದ ರೈತರ ಅಸಮಾಧಾನವಾಗಿದೆ.  
ಶ್ರೀರಾಮ ದೇವರ ಬಲದಂಡೆ ನಾಲೆಯ ಸರ್ವಿಸ್ ರಸ್ತೆ ಕಳೆದೆರಡು ವರ್ಷಗಳಿಂದಲೂ ಹದಗೆಟ್ಟು ತಮ್ಮ ಕೃಷಿ ಭೂಮಿಗೆ ಜಾನುವಾರುಗಳು ಹಾಗೂ ಎತ್ತಿನ ಗಾಡಿಗಳಲ್ಲಿ ತೆರಳಲು ಆಗದ ಸ್ಥಿತಿ ಇದೆ ಎನ್ನುವ ರೈತರು, ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಾಗಿಸಿ ಶೇಖರಿಸಲು ಈ ರಸ್ತೆಯಲ್ಲಿ ಯಾವುದೇ ಎತ್ತಿನ ಗಾಡಿಯನ್ನಾಗಲೀ, ವಾಹನಗಳನ್ನಾಗಲೀ ತರಲು ಆಗದ ಸ್ಥಿತಿ ನಿರ್ಮಾಣವಾಗಿದೆ ಎಂದು ನೀರಾವರಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕೇವಲ ನಾಲೆಗಳಲ್ಲಿ ನೀರು ಹರಿಸುವ ಸಂದರ್ಭದಲ್ಲಿ ಬಂದರೆ ಆಯಿತು, ಇಲ್ಲದಿದ್ದಲ್ಲಿ ಆಗಲೂ ನಾಲೆಗಳ ಸ್ಥಿತಿ-ಗತಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಇಲ್ಲಿನ ನೀರಾವರಿ ಇಲಾಖೆಯ ಎಂಜಿನಿಯರ್‌ಗಳ ಧೋರಣೆಯಿಂದಾಗಿ ನಾಲೆಗಳ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಸದ್ಯ ಮಳೆಗಾಲ ಆರಂಭಗೊಳ್ಳುತ್ತಿದ್ದು ಅದಕ್ಕೂ ಮೊದಲು ನಾಲೆಗಳ ಸರ್ವಿಸ್ ರಸ್ತ್ತೆಯನ್ನು ದುರಸ್ತಿಗೊಳಿಸಿ ಜನ-ಜಾನುವಾರುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಇಲ್ಲಿನ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.