ಹಾಸನ

'ಬೇಸಿಗೆ ಶಿಬಿರಗಳಿಂದ ಜ್ಞಾನ ವೃದ್ಧಿ'

Published On :

ಹೊಳೆನರಸೀಪುರ: ಪಟ್ಟಣದಲ್ಲಿನ ಮೈಸ್ ಕಂಪ್ಯೂಟರ್ ತರಬೇತಿ ಸಂಸ್ಥೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಿಂದ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಪಟ್ಟಣದಲ್ಲಿನ ರೋಟರಿ ಬಾಲಭವನಲ್ಲಿ  ಇತ್ತೀಚೆಗೆ ಏರ್ಪಡಿಸಲಾಗಿತ್ತು.        
ಇದೇ ಸಂದರ್ಭದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಿರುವ 'ದಿ ನರ್ಸ್‌' ಎಂಬ ಪುಸ್ತಕ ಬರೆದು ಫ್ಲಾರೆನ್ ನೈಟಿಂಗೇಲ್ ಪ್ರಶಸ್ತಿ ಪಡೆದಿರುವ ಎಚ್.ಆರ್.ಜಗದೀಶ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ್, ಜೀವನದಲ್ಲಿ ಏನಾದರೂ ಸಾಧಿಸುವ ಮನಸ್ಸು ಪ್ರತಿಯೊಬ್ಬರದ್ದಾಗಲಿ, ಗುರಿಯಿಲ್ಲದೆ ಬದುಕುವುದು ಶೂನ್ಯದಂತೆ, ಎಲ್ಲವೂ ನಮ್ಮ ಮನಸ್ಥಿತಿಯ ಮೇಲಿದೆ, ನಮಗೆ ನಾವೇ ಉತ್ತಮ ಹಾಗೂ ಆತ್ಮೀಯರು, ಕಷ್ಟಗಳು ಏನೇ ಇದ್ದರೂ ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ರೊ.ಆರ್.ಬಿ.ಪುಟ್ಟೇಗೌಡ ಮಾತನಾಡಿ, ಇಂತಹ ಬೇಸಿಗೆ ಶಿಬಿರಗಳ ಮೂಲಕ ಮಕ್ಕಳ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರುವ ಪ್ರಯತ್ನವನ್ನು ಮೈಸ್‌ನ ವ್ಯವಸ್ಥಾಪಕ ಎಚ್.ಬಿ.ತಮ್ಮಯ್ಯ ಮಾಡಿರುವುದು ಮೆಚ್ಚುವಂತಹ ವಿಷಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಮಾತನಾಡಿ,  ತಾಲೂಕಿನ ಹಾಗೂ ಹೊರಗಡೆ ವ್ಯಾಸಂಗ ಮಾಡುತ್ತಿರುವ ಮಕ್ಕಳು ಒಂದೆಡೆ ಸೇರಿದಾಗ ಪರಸ್ಪರ ಸ್ನೇಹ, ಅವರ ಶಾಲೆಯ ಬಗ್ಗೆ, ಶಿಕ್ಷಕರ ಬಗ್ಗೆ  ಹಲವಾರು ವಿಷಯಗಳ ಬಗ್ಗೆ ಜ್ಞಾನದ ವಿನಿಮಯ ಮಾಡಿಕೊಳ್ಳಲು ಒಂದು ಒಳ್ಳೆಯ ಅವಕಾಶ ಬೇಸಿಗೆ ಶಿಬಿರಗಳಿಂದಾಗಿ ದೊರೆತಂತಾಗುತ್ತದೆ ಎಂದರು.
ಇಂತಹ ಶಿಬಿರಗಳಿಗೆ ರೋಟರಿ ಸಂಸ್ಥೆಯೂ ಬೆಂಬಲ ನೀಡಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ರೋಟರಿ ಸದಸ್ಯರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಲಯನ್ಸ್ ಸಂಸ್ಥೆಯ ಖಜಾಂಚಿ ಎಂ.ಎನ್.ಜೈಪ್ರಕಾಶ್, ಶಿಕ್ಷಕ ನಂದೀಶ್, ಸಂತೋಷ್, ಕಿರಿಯ ಎಂಜಿನಿಯರ್ ಪುಟ್ಟಣ್ಣಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.