ಹಾಸನ

ಬೈಕಿಗೆ ಲಾರಿ ಡಿಕ್ಕಿ: ಹಿಂಬದಿ ಸವಾರ ಸಾವು

Published On :

ಹೊಳೆನರಸೀಪುರ: ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಹಿಂಬದಿ ಸವಾರ ಮೃತಪಟ್ಟ ಘಟನೆ ಶುಕ್ರವಾರ ತಾಲೂಕಿನ ಮಹದೇಶ್ವರ ಕಾಲೊನಿಯ ಕೂಡು ರಸ್ತೆಯ ಬಳಿ ನಡೆದಿದೆ.
ತಾಲೂಕಿನ ನಿಡುವಣೆ ಗ್ರಾಮದ ಉಮಾಪತಿ(55) ಎಂಬವರೇ ಮೃತ ದುರ್ದೈವಿ.
ಉಮಾಪತಿ ಅದೇ ಗ್ರಾಮದ ಸ್ನೇಹಿತ ರಘು ಎಂಬವರಿಗೆ ಸೇರಿದ ಸ್ಲ್ಪೆಂಡರ್ ಬೈಕ್‌ನಲ್ಲಿ ಮಹದೇಶ್ವರ ಕಾಲೊನಿ, ಕೂಡು ರಸ್ತೆ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ, ಚಾಲಕನ ನಿರ್ಲಕ್ಷ್ಯದಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಕೆಳಗೆ ಬಿದ್ದ ಉಮಾಪತಿಯ ತಲೆಯ ಮೇಲೆ ಲಾರಿಯ  ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಯಗೊಂಡ ರಘು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮರಳು ಸಾಗಣೆ: ಬಂಧನ
ಸಕಲೇಶಪುರ: ತಾಲೂಕಿನ ಕೌಡಳ್ಳಿ ಗ್ರಾಮದ ಹೇಮಾವತಿ ಹೊಳೆ ಹತ್ತಿರ ಸರ್ಕಾರಕ್ಕೆ ರಾಜಧನ ಕಟ್ಟದೆ ಅಕ್ರಮವಾಗಿ ಮರಳು ತುಂಬುತ್ತಿದ್ದ ತಾಲೂಕಿನ ಜಾನಕೆರೆ ಗ್ರಾಮದ ಧನರಾಜ್ ಎಂಬಾತನನ್ನು  ಪೊಲೀಸರು ಬಂಧಿಸಲಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಟ್ಟಣ ಠಾಣೆಯ ಪಿಎಸ್‌ಐ  ಜೀವನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ  ಟ್ರ್ಯಾಕ್ಟರ್ ಮತ್ತು ಟ್ರೇಲರ್‌ನಲ್ಲಿ ಮರಳು ತುಂಬಲಾಗುತ್ತಿತ್ತು. ತಕ್ಷಣವೇ ಆರೋಪಿ ಧನರಾಜನನ್ನು ಪೊಲೀಸರು ಬಂಧಿಸಿದ್ದು, ಮರಳು ಸಮೇತ ಟ್ರ್ಯಾಕ್ಟರ್ ಮತ್ತು ಟ್ರೇಲರ್‌ಅನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿಯನ್ನು  ನ್ಯಾಯಾಲಯಕ್ಕೆ  ಹಾಜರುಪಡಿಸಲಾಗಿದೆ.
ವ್ಯಕ್ತಿ ನಾಪತ್ತೆ
ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ, ವಡ್ಡರಹಳ್ಳಿಕೊಪ್ಪಲು ಗ್ರಾಮದ ಸೋಮಯ್ಯ ಎಂಬುವರ  ಪುತ್ರ ಕುಮಾರ ಉರುಫ್ ವಿಜಯ್(30) ಮನೆಯಿಂದ ಹೊರಗೆ ಹೋದವನು ಈವರೆಗೆ ವಾಪಸಾಗಿಲ್ಲ. 5.6 ಅಡಿ ಎತ್ತರ, ಕೆಂಪು ಬಣ್ಣ, ದೃಢಕಾಯ ಶರೀರ, ಕನ್ನಡ ತುಳು ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಕೆಂಪು ಬಿಳಿ ಮಿಶ್ರಿತ ಶರ್ಟ್‌ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದನು ಎಂದು ಆತನ ಅಣ್ಣ ಜಯಣ್ಣ ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವಕನ ಪತ್ತೆಗೆ ಮನವಿ
ಆಲೂರು: ತಾಲೂಕಿನ  ಪಾಳ್ಯ ಹೋಬಳಿಯ ರಂಗೇನಹಳ್ಳಿ ಗ್ರಾಮದ ಬಸವರಾಜು ಎಂಬುವರ ಮಗ ಹರೀಶ್  (25) ತನ್ನ ಮದುವೆಯ ಲಗ್ನ ಪತ್ರಿಕೆಯನ್ನು ಸಂಬಂಧಿಕರ ಮನೆಗೆ ಕೊಟ್ಟು ಬರುತ್ತೇನೆಂದು ಮೇ 20 ರಂದದು ಮನೆಯಲ್ಲಿ ಹೇಳಿ ಹೋದವನು ಈವರೆಗೂ ಮನೆಗೆ ಹಿಂದಿರುಗಿಲ್ಲ.
5.5 ಅಡಿ ಎತ್ತರ, ಕೋಲುಮುಖ, ಕಪ್ಪುಬಣ್ಣ, ತೆಳುವಾದ ಶರೀರ, ಕನ್ನಡ ಮಾತನಾಡುತ್ತಾನೆ, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು ಎಂದು ಆತನ ತಂದೆ ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.
ತಾಯಿ- ಮಗಳು ನಾಪತ್ತೆ
ಆಲೂರು:  ತಾಲೂಕಿನ ಹಂಚೂರು ಗ್ರಾಮದ ಕುಮಾರ ಎಂಬವರ ಪತ್ನಿ ರೇಖಾ(32) ಅವರು ಮಗಳು ಚಿತ್ರಾ ಉರುಫ್ ಬೇಬಿ(10) ಜತೆಗೆ ಆಲೂರು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಹಿಂದಿರುಗಿಲ್ಲ.
ರೇಖಾ 5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ.  ಮನೆಯಿಂದ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿದ್ದರು.  ಮಗಳು  ಚಿತ್ರ ಉರುಫ್ ಬೇಬಿ   3.5 ಅಡಿ ಎತ್ತರವಿದ್ದು,  ಬಿಳಿ ಬಣ್ಣ, ಕೋಲುಮುಖ ಹೊಂದಿದ್ದು, ಮನೆ ಬಿಟ್ಟಾಗ ಕೆಂಪು ಬಣ್ಣದ ಬಟ್ಟೆ ಧರಿಸಿದ್ದಳು ಎಂದು ಕುಮಾರ್ ಎಂಬುವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.