ಹಾಸನ

ರುದ್ರಪಟ್ಟಣದಲ್ಲಿ ಸಂಗೀತೋತ್ಸವ ಸಂಪನ್ನ

Published On :

ರಾಮನಾಥಪುರ: ಕರ್ನಾಟಕದ ಸಂಗೀತ ಗ್ರಾಮ ಎಂದೇ ಪ್ರಸಿದ್ಧಿ ಪಡೆದಿರುವ ಅರಕಲಗೂಡು ತಾಲೂಕು ರುದ್ರಪಟ್ಟಣದಲ್ಲಿ  3 ದಿನಗಳ ಅರ್ಥಪೂರ್ಣ ಸಂಗೀತ ಹಬ್ಬಕ್ಕೆ ಭಾನುವಾರ ಸಂಜೆ ತೆರಬಿದ್ದಿದ್ದು. ಸಾವಿರಾರು ಸಂಗೀತ ಪ್ರಿಯರು ಇದಕ್ಕೆ ಸಾಕ್ಷಿಯಾಗಿ ನಾದಗಂಗೆಯಲಿ ಮಿಂದೆದ್ದರು.
ಕಾವೇರಿ ತಟದಲ್ಲಿ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಾದಪ್ರಿಯರಿಗೆ ರಸದೌತಣ ಉಣ ಬಡಿಸಿತು. ರುದ್ರಪಟ್ಟಣ ಪಕ್ಕದ ಕಾವೇದಿ ನದಿ ತೀರದಲ್ಲಿ ಹತ್ತಾರು ಕಲಾವಿದರು ಒಂದೇ ವೇದಿಕೆಯಲ್ಲಿ ಸಾಮೂಹಿಕವಾಗಿ ಹಾಡುವ ಮೂಲಕ ಹೊಸದೊಂದು ನಾದ-ವಿನೋದ ಪ್ರಪಂಚವನ್ನೇ ಸೃಷ್ಟಿಸಿದರು. ಇದೇ ವೇಳೆ ಕಾವೇರಿ ಮಾತೆಗೆ ನಾದ ನಮನ ಸಲ್ಲಿಸುವ ತೆಪ್ಪೋತ್ಸವ ಹಾಗೂ ಬಣ್ಣ ಬಣ್ಣದ ಪಟಾಕಿಗಳ ಚಿತ್ತಾರ ಎಲ್ಲರ ಮನಸೂರೆಗೊಂಡಿತು.
ಕಳೆದ 3 ದಿನಗಳಿಂದ ನಡೆಯುತ್ತಿರುವ ಸಂಗೀತೋತ್ಸವ ಹಿರಿಯ-ಕಿರಿಯ ಕಲಾವಿದರು ಮತ್ತು ಸಂಗೀತ ಪ್ರಿಯರ ಸಮಾಗಮಕ್ಕೆ ಸಾಕ್ಷಿ ಯಾಯಿತು.
ಈ ಮೂಲಕ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಗಾಯನ ಜೊತೆಗೆ ಕೊಳಲು, ಪಿಟೀಲು, ಮೃದಂಗ, ವಯಲಿನ್ ನಾದವನ್ನು ಒಂದೇ ವೇದಿಕೆಯಲ್ಲಿ ಆಲಿಸಿ, ಆಹ್ಲಾದ ಪಡುವ ಸೌಭಾಗ್ಯ ಸಂಗೀತ ಪ್ರಿಯರಿಗೆ ಲಭಿಸಿತು. ಮತ್ತೊಂದೆಡೆ ಶ್ರೇಷ್ಠ ವಿದ್ವಾನ್‌ಗಳ ಮಧ್ಯೆ ತಮ್ಮ ಗಾನ ಪ್ರತಿಭೆಯನ್ನು ಅನಾವರಣಗೊಳಿಸುವ ಅಪರೂಪದ ಅವಕಾಶ ಹತ್ತಾರು ಕಿರಿಯ ಗಾಯಕರಿಗೆ ಸಿಕ್ಕಿದ್ದರಿಂದ ಸಹಜವಾಗಿಯೇ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಹಾಡಿಗೆ ತಕ್ಕ ಮೇಳ, ತಬಲ ಸೇರಿದಂತೆ ನಾನಾ ವಾದನಗಳ ತಾಳಕ್ಕೆ ತಕ್ಕಂತೆ ಗಾಯನ ನೆರೆದಿದ್ದವರನ್ನು ಪುಳಕಗೊಳಿಸಿತು.
ತಡರಾತ್ರಿಯಾದರೂ ಕೊಂಚವೂ ವಿಚಲಿತರಾಗದ ಸಂಗೀತ ಪ್ರಿಯರು, ಅಪರೂಪದ ಕ್ಷಣಗಳನ್ನು ಕಣ್ತುಂಬಿ ಕೊಂಡರು. ಸಂಗೀತೋತ್ಸವ ವೇಳೆ ಕಾವೇರಿ ನದಿ ದಡದಲ್ಲಿ ನಡೆಯುವ ತೆಪ್ಪೋತ್ಸವ ಮತ್ತು ಗಂಗಾಮಾತೆಗೆ ನಾದನಮನ ಎಲ್ಲರನ್ನೂ ಹೊಸ ಲೋಕವೊಂದಕ್ಕೆ ಕೊಂಡೊಯ್ದಿತ್ತು. ನದಿಯ ದಡದಲ್ಲಿ ಹತ್ತಾರು ಹಿರಿಯ ಮತ್ತು ಕಿರಿಯ ಕಲಾವಿದರು ಕಲೆತು ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನದಲ್ಲಿ ಮಗ್ನರಾಗಿದ್ದರೆ, ನಭದಲ್ಲಿ ಬಣ್ಣ ಬಣ್ಣದ ಪಟಾಕಿಗಳು ನವ ಚಿತ್ತಾರ ಬರೆದಿದ್ದವು.
ಗ್ರಾಮೀಣ ಜನರಿಗೆ ಶಾಸ್ತ್ರೀಯ ಸಂಗೀತದ ಅಭಿರುಚಿ ಪರಿಚಯಿಸುವ ಉದ್ದೇಶದಿಂದ ನಡೆಸುತ್ತಿರುವ ಇಂಥ ನಾದ ಕೈಂಕರ್ಯ ನಿರಂತರವಾಗಿ ಮುಂದುವರಿಯಲಿ ಅನ್ನೋದು ಸಂಘಟಕರ ಆಶಯ.  
ಇದೇ ವೇಳೆ ಪ್ರತಿವರ್ಷ ಕೊಡ ಮಾಡುವ ನಾಚಾರಮ್ಮ ಪ್ರಶಸ್ತಿಯನ್ನು ಪ್ರಸಿದ್ಧ ಮೃದಂಗ ವಿದ್ವಾಂಸ ಟಿ.ಎ.ಎಸ್.ಮಣಿ ಅವರಿಗೆ ಪ್ರದಾನ ಮಾಡಲಾಯಿತು. ಒಟ್ಟಿನಲ್ಲಿ ತಂಬೂರಿಯಾಕಾರದ ದೇವಾಲಯ ಇರುವ ಸಂಗೀತ ಗ್ರಾಮ ರುದ್ರಪಟ್ಟಣದ ಕಾವೇರಿ ನದಿ ತೀರದಲ್ಲಿ ಹೊಸ ಪ್ರಪಂಚವೇ ಸೃಷ್ಟಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.