ಹಾಸನ

ಹಾಸನಕ್ಕೊಂದು ಸಚಿವ ಸ್ಥಾನ ನೀಡಿ

Published On :

ಹಾಸನ: ಜಿಲ್ಲೆಯ ಇಬ್ಬರು ಶಾಸಕರ ಪೈಕಿ ಯಾರಾದರೊಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಮಂಗಳವಾರ ಹಾಸನ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ರಾಜ್ಯ ಹೈಕಮಾಂಡ್‌ಅನ್ನು ಗ್ರಹಿಸಲಾಯಿತು.
ಪಕ್ಷದ ಹಿತ ದೃಷ್ಟಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಒಬ್ಬರು ಸಚಿವರಾಗುವುದು ಸೂಕ್ತವಾಗಿದೆ. ಈ ಕಾರಣದಿಂದ ಸಚಿವ ಸ್ಥಾನ ನೀಡಬೇಕು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಒತ್ತು ನೀಡಬೇಕು ಎಂಬುದು ಸೇರಿದಂತೆ ಕೆಲ ನಿರ್ಣಯಗಳನ್ನು  ತೆಗೆದುಕೊಳ್ಳಲಾಯಿತು ಎಂದು ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಸೋಲು ಕಂಡಿದ್ದರು ಸಹ ಜಿಲ್ಲೆಯಲ್ಲಿ ಕಾಂಗ್ರೆಸ್ ಸುಧಾರಣೆ ಕಂಡಿದೆ ಎಂದು ಬಿ.ಶಿವರಾಂ ಹೇಳಿದರು.
ಜಿಲ್ಲೆಯಲ್ಲಿ ಈ ಬಾರಿ ಚುನಾವಣೆಯ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಶ್ರಮಿಸಲಾಗಿದ್ದು, ಈ ಹಿಂದೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ ಎಂದು ಬಿಂಬಿಸಲಾಗಿತ್ತು. ಆ ಕಳಂಕವನ್ನು ದೂರ ಮಾಡಲಾಗಿದೆ. ಈ ಬಗ್ಗೆ ಕೆಪಿಸಿಸಿ ಹಾಗೂ ಮುಖ್ಯಮಂತ್ರಿ ಅವರಿಗೆ ಅರಿವಾಗಿದೆ ಎಂದು ಅವರು ಹೇಳಿದರು.
ಇಂದಿರಾ ಸೋತಿದ್ದರು...
ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ  ಪಡೆದಿರಬಹುದು. ಆದರೆ, ಅದು ಶಾಶ್ವತ ಅಲ್ಲ. ಈ ಹಿಂದೆ ಇಂದಿರಾಗಾಂಧಿ ಸಹ ಸೋತಿದ್ದರು ನಂತರ ಅವರು ಎಚ್ಚೆತ್ತುಕೊಂಡು ಪಕ್ಷ ಬಲ ಪಡಿಸಿ ವಿಶ್ವವೇ ಮೆಚ್ಚುವಂತೆ ಆಡಳಿತ ನಡೆಸಿದರು. ಅದೇ ರೀತಿ ರಾಜೀವ್‌ಗಾಂಧಿ ಸಹ ಪಕ್ಷ ಸಂಘಟನೆ ಮಾಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಬಿಜೆಪಿ ಗೆಲವು ಶಾಶ್ವತವಲ್ಲ ಎಂದು ಅಭಿಪ್ರಾಯಪಟ್ಟರು.
ಇದು ಗೌಡರ ಗೆಲವು ಅಲ್ಲ...
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಂದು ಲಕ್ಷ ಮತಗಳ ಅಂತರಿಂದ ಗೆಲವು ಸಾಧಿಸಿದ್ದು, ಅವರು ಈ ಸಾರಿ ಅಷ್ಟೇನು ಗೆಲವಿನ ಅಂತರ ಕಾಯ್ದುಕೊಂಡಿಲ್ಲ. ಜಿಲ್ಲೆಯ ಜನತೆ ಗೌಡರ ಕೊನೆ ಚುನಾವಣೆ ಹಾಗೂ ಹಿರಿಯರು ಎಂಬ ಕಾರಣಕ್ಕೆ ಮತ ನೀಡಿದ್ದಾರೆ ಅಷ್ಟೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೇ ಚುನಾವಣಾ ಪ್ರಚಾರ ಕೈಗೊಂಡಿದ್ದರೆ. ಯಾವ ಕನಿಕರದ ಓಟುಗಳು ದೇವೇಗೌಡರು ಸಿಗುತ್ತಿರಲಿಲ್ಲ. ಕಡಿಮೆ ಅಂತರದಿಂದ ಗೆದ್ದಿರುವ ದೇವೇಗೌಡರ ಗೆಲವು ಗೆಲವಲ್ಲ ಎಂದರು.
   ದೇವೇಗೌಡರು ದೇಶದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಲಿದ್ದು, ಅಲ್ಲಿ ನಮ್ಮ ಪಕ್ಷ ಪ್ರಮುಖ ಪಾತ್ರವಹಿಸಲಿದೆ ಎಂದಿದ್ದರು. ಆಲ್ಲದೆ, ಗೌಡರ ಹಿಂಬಾಲಕರು ಸಹ ಮುಂದಿನ ಪ್ರಧಾನಿ ದೇವೇಗೌಡರು ಎಂದು ಬಿಂಬಿಸಿದ್ದರು. ಕಾಂಗ್ರೆಸ್ ಮುಖಂಡರಾದ ಎಸ್.ಎಂ.ಆನಂದ್, ಪಟೇಲ್ ಶಿವಪ್ಪ, ಡಿ.ಮಲ್ಲೇಶ್, ಹೆಮ್ಮಿಗೆ ಮೋಹನ್, ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.