ಹಾಸನ

ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಕರು, ಪೊಲೀಸರ ಪಾತ್ರ ಮಹತ್ವ

Published On :

ಕ.ಪ್ರ. ವಾರ್ತೆ ಹಾಸನ ಮೇ 30
ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಮತ್ತು ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ  ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ರವೀಂದ್ರ ನಗರದಲ್ಲಿ ಇರುವ ಬಿ.ಜಿ.ಎಸ್. ಸ್ಟಡಿ ಸೆಂಟರ್ ಸಭಾಂಗಣದಲ್ಲಿ ಗುರುವಾರ ಪೊಲೀಸ್ ನೇಮಕಾತಿ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಉತ್ತಮ ಪ್ರಜೆಗಳನ್ನು ರೂಪಿಸುವ ಹೊಣೆ ಶಿಕ್ಷಕರದ್ದಾದರೆ, ದಾರಿತಪ್ಪುವ ಪ್ರಜೆಗಳನ್ನು ಸರಿದಾರಿಗೆ ತರುವ ಕೆಲಸ ಪೊಲೀಸರದ್ದಾಗಿದೆ. ಇವರಿಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮತ್ತು ಪವಿತ್ರ ಭಾವನೆಯಿಂದ ನಿರ್ವಹಿಸಿದಾಗ ಮಾತ್ರ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಬದುಕಿನಲ್ಲಿ ಮುಂದೆ ಸಾಗಲು ಜ್ಞಾನ ಅಗತ್ಯ. ಅದಕ್ಕೆ ಅಧ್ಯಯನಶೀಲತೆ ಮತ್ತು ಇಂತಹ ತರಬೇತಿಗಳು ಅತ್ಯವಶ್ಯಕ. ಎಲ್ಲ ಧರ್ಮ ಮತ್ತು ಜಾತಿಗಳ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಕೆಲಸ ಮಾಡುತ್ತಿದೆ. ಒಂದು ಕೋಟಿ ರು. ವೆಚ್ಚದಲ್ಲಿ ಬಿ.ಜಿ.ಎಸ್ ಸ್ಟಡಿ ಸೆಂಟರ್ ಅನ್ನು ಮೇಲ್ದರ್ಜೆಗೇರಿಸಲಾಗುವುದು. ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳಿಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಟಿಇಟಿ ತರಬೇತಿ ಶಿಬಿರದ ಸಮಾರೋಪ ಭಾಷಣ ಮಾಡಿದ ಎನ್‌ಡಿಆರ್‌ಕೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮೋಹನ್ ಕುಮಾರ್, ಗುರಿ ಸಾಧನೆಯಲ್ಲಿ ಸರಿಯಾದ ಮಾರ್ಗದರ್ಶನದ ಪಾಲು ಶೇ.30 ರಷ್ಟಿದ್ದರೆ, ಸ್ವಂತ ಪರಿಶ್ರಮದ ಪಾಲು ಶೇ.70 ರಷ್ಟಿದೆ. ಆದ್ದರಿಂದ ನಮ್ಮ ಬದುಕಿನ ಶಿಲ್ಪಿಗಳು ನಾವೇ ಎಂಬ ಸತ್ಯವನ್ನರಿತು ಸತತ ಪ್ರಯತ್ನದಿಂದ ಕನಸು ನನಸು ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೀಳರಿಮೆ ತೊರೆದು ಧನಾತ್ಮಕ ಆಲೋಚನೆ ಬೆಳೆಸಿಕೊಳ್ಳಬೇಕು. ಸಾಧಿಸುವ ಛಲ, ಅವಕಾಶಗಳ ಸದುಪಯೋಗದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ. ಶಿಕ್ಷಕ ಅಧ್ಯಯನಶೀಲನಾಗಿರಬೇಕು. ಆಗ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದರು.
ಬಿಜಿಎಸ್ ಸ್ಟಡಿ ಸೆಂಟರ್ ಸಂಯೋಜಕ ಡಾ. ಎಚ್.ಕೆ. ಕುಶಾಲಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜ್ಞಾನದಾನಿಗಳ ಪರವಾಗಿ ರಘು ಮಾತನಾಡಿದರು. ಶಿಬಿರಾರ್ಥಿಗಳ ಪರವಾಗಿ ಪುನೀತ್ ಕುಮಾರ್, ಚಂದ್ರಶೇಖರ್ ಮತ್ತು ನಾಗಮಣಿ ಮಾತನಾಡಿದರು.
ಜ್ಞಾನದಾನಿಗಳಾದ ಕುಮಾರಸ್ವಾಮಿ, ಅಣ್ಣಪ್ಪ ಶೆಟ್ಟಿ ಮತ್ತು ಮಂಜುನಾಥ್ ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮತ್ತು ಬಿ.ಜಿ.ಎಸ್. ಸ್ಟಡಿ ಸೆಂಟರ್ ವ್ಯವಸ್ಥಾಪಕ ಮಂಜು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.