ಹಾಸನ

ಹೊಳೆನರಸೀಪುರದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

Published On :

ಹೊಳೆನರಸೀಪುರ: ತಂಬಾಕು ಸೇವನೆ ತ್ಯಜಿಸುವ ಕುರಿತಂತೆ ಸಾರ್ವಜನಿಕವಾಗಿ ಮಾಡುವ ಪ್ರತಿಜ್ಞೆಗಿಂತಲೂ, ನಮ್ಮ ಅಂತರಾತ್ಮದಲ್ಲಿ ದೃಡ ಸಂಕಲ್ಪ ಕೈಗೊಂಡಾಗ ಮಾತ್ರವೇ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ಅಭಿಪ್ರಾಯಪಟ್ಟರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಕಾನೂನು ಅರಿವು ನೆರವು ಶಿಭಿರ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕರಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಂತೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ವರ್ಷದಾದ್ಯಂತ ಒಂದಿಲ್ಲೊಂದು ದಿನಾಚರಣೆಗಳನ್ನು ಆಚರಿಸುತ್ತಲೇ ಇದ್ದರೂ, ಅವುಗಳ ಮಹತ್ವ ಅರಿಯದೇ ಯಾವುದೇ ದಿನಾಚರಣೆ  ಆಚರಿಸಿದರೂ ಪ್ರಯೋಜನವಿಲ್ಲದಂತೆ ಆಗಿದೆ. ಆದರೆ ತಂಬಾಕು ವಿರೋಧಿ ದಿನಾಚರಣೆ ಆಚರಿಸುವ ಮೂಲಕ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಮಾದ್ಯಮಗಳು ಇನ್ನೂ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ತಂಬಾಕು ಮತ್ತು ಅವುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಂತೆ ಮಾತನಾಡಿದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ನಟರಾಜ್, ವಿಶ್ವದಲ್ಲಿಯೇ ಅತಿ ಹೆಚ್ಚಿನ ಧೂಮಪಾನಿಗಳಿರುವುದು ಭಾರತದಲ್ಲಿಯೇ ಎಂಬ ಅಂಶ ಆಘಾತಕಾರಿಯಾಗಿದೆ ಎಂದರಲ್ಲದೆ, ಧೂಮಪಾನ ಮತ್ತು ತಂಬಾಕಿನ ಸೇವನೆಯಂತಹ ದುಶ್ಚಟಗಳಿಗೆ ಬಲಿಯಾದವರಲ್ಲಿ ಪ್ರತಿ 6 ಸೆಕೆಂಡಿಗೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದರು.
ಸಿಗರೇಟಿನಲ್ಲಿ 4 ಸಾವಿರ ವಿಷಕಾರಕ ಅಂಶಗಳಿದ್ದು, ಸಿಗರೇಟಿನ ಚಟಕ್ಕೆ ಬಿದ್ದಿರುವ ಜನರಿಂದಾಗಿ ಪ್ರತಿ ವರ್ಷ 1 ಲಕ್ಷ ಕೋಟಿಗಳಷ್ಟು ಹಣ ತಂಬಾಕಿಗೆ ಖರ್ಚಾಗುತ್ತಿದೆ ಎಂದು ವಿವರಿಸಿದರಲ್ಲದೇ ಕ್ರೇಜ್‌ಗಾಗಿ, ಶೋಕಿಗಾಗಿ, ಪ್ರತಿಷ್ಠೆಗಾಗಿ ಆರಂಭಿಸುವ ಸಿಗರೇಟು ಸೇದುವ ಹವ್ಯಾಸ ನಂತರದಲ್ಲಿ ಚಟವಾಗಿ ಪರಿಣಮಿಸಿ ಮನುಷ್ಯನ ಆರೋಗ್ಯದ ಮೇಲೆ ತೀವ್ರ ತರವಾದ ದುಷ್ಪರಿಣಾಮಗಳನ್ನು ಬೀರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವ ಕಾಯಿದೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಂಡಾಗ ಮಾತ್ರ ತಂಬಾಕು ನಿಷೇಧ ದಿನಾಚರಣೆಯು ಪರಿಣಾಮಕಾರಿ ಹಾಗೂ ಅರ್ಥಪೂರ್ಣವಾಗಲು ಸಾಧ್ಯ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಡಿ. ರವೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದ ಸುಮಾರು 49 ಸಾವಿರ ಜನರಿಗೆ ರಾಜ್ಯದಲ್ಲಿ 53 ಲಕ್ಷರು. ಗಳಷ್ಟು ದಂಡ ವಿಧಿಸಲಾಗಿದ್ದರೂ, ಇಂದಿಗೂ ಸಾರ್ವಜನಿಕ ಸ್ಥಳಗಳಲ್ಲಿನ ಧೂಮಪಾನ ನಿಷೇಧ ಕಾಯಿದೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಿದೆ ಎಂದರು. ತಂಬಾಕು ಬೆಳೆಯುವುದನ್ನೇ ನಿಷೇಧಿಸಿದಲ್ಲಿ ಸಿಗರೇಟು ಸೇದುವುದನ್ನು ನಿಯಂತ್ರಿಸಬಹುದು ಎನ್ನುವ ಪರಿಕಲ್ಪನೆಗೂ ಮೊದಲು ತಂಬಾಕು ಬೆಳೆಯ ನಿಷೇಧ, ಅದನ್ನೇ ನಂಬಿರುವ ಉದ್ಯಮದಲ್ಲಿನ ಲಕ್ಷಾಂತರ ಜನರ ಬದುಕಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದರು.
ಚನ್ನರಾಯಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ದೇವರಾಜ್ ಹಾಗೂ ಹೊಳೆನರಸೀಪುರ ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಪ್ರಭಪ್ಪ ದಿಡ್ಡಿ, ಅಧಿಕ ಸಿವಿಲ್ ನ್ಯಾಯಾಧೀಶರಾದ ವಿ.ಮಾದೇಶ ಅವರು ಉಪಸ್ಥಿತರಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಸಿ.ಎನ್.ಲೋಕೇಶ್ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಾಗಾರ...
ಹಾಸನ: ಕಾಲೇಜು ವಿದ್ಯಾರ್ಥಿಗಳು ತಂಬಾಕು ಸೇವನೆಗೆ ತುತ್ತಾಗುತ್ತಿದ್ದು, ಅದನ್ನು ತಡಗಟ್ಟಬೇಕಾಗಿದೆ ಎಂದು 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಪ್ರಕಾಶ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಇಲಾಖೆ, ಎಂ. ಕೃಷ್ಣ ಮತ್ತು ಸರ್ಕಾರಿ ಕಾನೂನು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಣದಲ್ಲಿ ಶನಿವಾರ ನಡೆದ ವಿಶ್ವತಂಬಾಕು ರಹಿತ ದಿನಾಚರಣೆ ಮತ್ತು ಒಂದು ದಿನದ ಜಿಲ್ಲಾ ಮಟ್ಟದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಆರೋಗ್ಯ ಕಾಣಲು ತಂಬಾಕು ಮುಕ್ತರಾಗಬೇಕು. ಯುವಕರು ತಂಬಾಕು ಸೇವನೆಗೆ ಹೆಚ್ಚು ಒಳಗಾಗುತ್ತಿದ್ದು, ಅವರ ಆರೋಗ್ಯ ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೊಗೆಸೊಪ್ಪಿನಲ್ಲಿ ನಿಯೋಟಿನ್ ಅಂಶ ಹೆಚ್ಚಾಗಿದೆ ಎಂದರು.
ಪ್ರಧಾನ ನ್ಯಾಧೀಶರಾದ ಸಿ.ಹಾಲಪ್ಪ ಮಾತನಾಡಿ, ಸಮಾಜಕ್ಕೆ ಹಾಗೂ ಮಾನವರಿಗೆ ತಂಬಾಕು ಮಾರಕವಾಗಿದ್ದು, ತಂಬಾಕು ಸೇವನೆ ಕಡಿಮೆ ಮಾಡಬೇಕು. ಮಕ್ಕಳು ಸಹ ತಂಬಾಕು ಸೇವನೆಗೆ ಒಳಗಾಗುತ್ತಿರುವುದರಿಂದ ಹೈಸ್ಕೂಲ್‌ನಲ್ಲಿಯೇ ಮಕ್ಕಳಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದಾಗ ತಂಬಾಕು ಸೇವನೆ ತಡೆಗಟ್ಟಬಹುದಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ದೇವರಾಜೇಗೌಡ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ ಮತ್ತು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ವಿ. ಕೋಸಂದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ಯಾಮಲಾದೇವಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್, ಶಬೀರ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.