ಹಾವೇರಿ

ಬಿಎಜೆಎಸ್‌ಎಸ್ ಕಾಲೇಜಿಗೆ 'ಬಿ' ಗ್ರೇಡ್

Published On :

ರಾಣಿಬೆನ್ನೂರು: ನಗರದ ಬಿಎಜೆಎಸ್.ಎಸ್ ಮಹಿಳಾ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕ ಸಂಸ್ಥೆ ಬಿ ಗ್ರೇಡ್ ಮಾನ್ಯತೆ ಲಭಿಸಿದೆ. ಇತ್ತೀಚೆಗೆ ರಾಷ್ಟ್ರೀಯ ಮೌಲ್ಯಮಾಪನಾ ಮತ್ತು ಮೌಲ್ಯಾಂಕ ಸಂಸ್ಥೆ ತಂಡ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಆರಂಭಗೊಂಡಾಗಿನಿಂದ ಇಲ್ಲಿಯವರೆಗೂ ಸಾಧಿಸಿರುವ ಸಾಧನೆಗಳು ಮತ್ತು ಸೌಲಭ್ಯಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿ ನ್ಯಾಕ್ ಮಾನ್ಯತೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಇಂದು ಪೊಲೀಸ್ ಧ್ವಜ ದಿನ
ಹಾವೇರಿ:
ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಏ. 2ರಂದು ಬೆಳಗ್ಗೆ 8 ಗಂಟೆಗೆ ಕೆರಿಮತ್ತಿಹಳ್ಳಿಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗಲಿದೆ. ಅತಿಥಿಗಳಾಗಿ ನಿವೃತ್ತ ಪೊಲೀಸ್ ಉಪ ಅಧೀಕ್ಷಕ ವಿ.ಎ.ಪೂಜಾರ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಪಾಲ್ಗೊಳ್ಳುವರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನಸಿಂಗ್ ರಾಠೋರ್ ತಿಳಿಸಿದ್ದಾರೆ.

ಮುಖರ್ಜಿ ನಿಧನಕ್ಕೆ ಸಂತಾಪ
ಹಾವೇರಿ:
ಗ್ರಾಮೀಣ ಬ್ಯಾಕುಗಳ ನೌಕರರ ಜ್ವಲಂತ ಸಮಸ್ಯೆಗಳ ಶಾಶ್ವತ ನಿವಾರಣೆಗಾಗಿ ಶ್ರಮಿಸಿದ, ಭಾನುವಾರ ಕೊಲ್ಕತ್ತದಲ್ಲಿ ನಿಧನರಾದ ದಿಲೀಪ್.ಕುಮಾರ ಮುಖರ್ಜಿ ಅವರ ಅಕಾಲಿಕ ಅಗಲಿಕೆಗೆ ಇಲ್ಲಿನ ಬ್ಯಾಂಕ್ ಗ್ರಾಮೀಣ ನೌಕರರ ಸಂಘಟನೆ ಆಘಾತ ವ್ಯಕ್ತಪಡಿಸಿದೆ. ಈ ಕುರಿತಂತೆ ಸ್ಥಳೀಯ ಐತಿಹಾಸಿಕ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ ನೌಕರರು, ಗ್ರಾಮೀಣ ಬ್ಯಾಂಕುಗಳ ಕಣ್ಮಣಿ, ಗ್ರಾಮೀಣ ಬ್ಯಾಂಕ್ ನೌಕರರ ದಾದಾ ದಿಲೀಪಕುಮಾರ ಅವರ ಅಗಲಿಕೆಗೆ ತೀವ್ರ ಶೋಕ ವ್ಯಕ್ತಪಡಿಸಿ, ಶ್ರದ್ದಾಂಜಲಿ ಸಭೆ ನಡೆಸಿದರು. ರಾಷ್ಟ್ರಮಟ್ಟದಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಸಿಗುವ ಎಲ್ಲ ಸೌಲಭ್ಯಗಳು ಗ್ರಾಮೀಣ ಬ್ಯಾಂಕುಗಳ ನೌಕರರಿಗೂ ಸಿಗುವಂತೆ ಹೋರಾಟ ನಡೆಸಿದ ಧೀಮಂತ ನಾಯಕನ ಅಸ್ತಂಗತ ನೌಕರರಿಗೆ ತುಂಬಲಾರದ ಹಾನಿಯನ್ನುಂಟು ಮಾಡಿದೆ. ಶ್ರದ್ಧಾಂಜಲಿ ಸಭೆಯಲ್ಲಿ ಬಸವರಾಜ ಕೊರಡೂರ, ಪ್ರಕಾಶ ಸೊಪ್ಪಿನ, ಪಿ.ಎಂ. ಬಸನಗೌಡ್ರ, ಆರ್.ಎಸ್. ಸಾಲಿಮಠ, ಎಂ.ಎಸ್. ತರಿಕೇರಿ, ಯು.ಎನ್. ನರಗುಂದ, ಜಿ.ಎಸ್. ಕೋರಿ, ಆರ್.ಎನ್. ಕುಲಕರ್ಣಿ, ತೇಲಕರ, ಕೆ.ಜೆ. ಪಾಟೀಲ, ಎಂ.ಎನ್. ಪರಪ್ಪನವರ, ಆರ್.ಎಸ್. ಕೂಡಲ ಹಲವರು ಪಾಲ್ಗೊಂಡಿದ್ದರು.

ಜೆಡಿಎಸ್.ಗೆ ಟಿ.ಎಲ್. ನಾಯಕ ರಾಜಿನಾಮೆ
ಮುಂಡರಗಿ:
ಗದಗ ಜಿಲ್ಲಾ ಜಾತ್ಯತೀತ ಜನತಾದಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧ್ಯಕ್ಷ ಟಿ.ಎಲ್. ನಾಯಕ ತಮ್ಮ ಸ್ಥಾನಕ್ಕೆ ಹಾಗೂ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜನಾಮೆ ನೀಡಿದ್ದಾಗಿ ಹೇಳಿದ್ದಾರೆ. ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದೇನೆ. ಸ್ಥಳೀಯ ಹಾಗೂ ಜಿಲ್ಲಾ ಜೆಡಿಎಸ್.ನ ಕೆಲವು ಮುಖಂಡರು ಪಕ್ಷ ಸಂಘಟಿಸದೆ ವೈಯಕ್ತಿಕ ಲಾಭಕ್ಕಾಗಿ ಮತ್ತೊಬ್ಬರನ್ನು ಬಲಿಪಶು ಮಾಡುತ್ತಿದ್ದಾರೆ. ಇದರಿಂದ ಉಸಿರುಕಟ್ಟಿಸುವ ವಾತಾವರಣ ಉಂಟಾಗಿದ್ದು, ತಾವು ಪಕ್ಷ ತ್ಯಜಿಸುವ ನಿರ್ಧಾರ ಕೈಗೊಂಡಿರುವುದಾಗಿ ವಿವರಿಸಿದರು. 2008ರ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರೂ ಈ ಬಾರಿ ಶಿರಹಟ್ಟಿ ಕ್ಷೇತ್ರದಿಂದ ತಾವು ಆಕಾಂಕ್ಷಿಯಾಗಿದ್ದು, ಟಿಕೆಟ್ ನೀಡುವ ಲಕ್ಷಣಗಳು ಕಾಣಿಸಲಿಲ್ಲ. ಪಕ್ಷ ಸಂಘಟನೆಗೆ ಬೆಲೆ ಸಿಗದ ಕಾರಣ ರಾಜಿನಾಮೆ ನೀಡಿದ್ದಾಗಿ ತಿಳಿಸಿದರು. ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿದ ಕೆಜೆಪಿ ಸೇರುತ್ತಿದ್ದೇನೆ. ಅಲ್ಲಿ ಟಿಕೆಟ್ ಸಿಗದಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು. ತಾಲೂಕು ಕೆಜೆಪಿ ಅಧ್ಯಕ್ಷ ಕಾಂತರಾಜ ಹಿರೇಮಠ, ಅಶೋಕ ಮೇಗಳಮನಿ, ಶಿವಪ್ಪ ಪವಾರ, ಸುಲೇಮಾನ್.ಸಾಬ ಭಾವಾಜಿ, ಸುರೇಶ ಹಲವಾಗಲಿ, ಕುಬೇರ ಪೂಜಾರ ಇದ್ದರು.

ಪರೀಕ್ಷೆ ಸುವ್ಯವಸ್ಥಿತ
ನರೇಗಲ್ಲ:
ಸ್ಥಳೀಯ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುವ್ಯವಸ್ಥಿತವಾಗಿ ಜರುಗಿವೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಸ್.ಎಚ್. ಅಬ್ಬಿಗೇರಿ ತಿಳಿಸಿದರು. ಪಟ್ಟಣದ 2 ಪರೀಕ್ಷಾ ಕೇಂದ್ರಗಳಾದ ಅನ್ನದಾನ ವಿಜಯ ಬಾಲಕರ ಪ್ರೌಢಶಾಲೆ, ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಗಳಲ್ಲಿ 12 ಶಾಲೆಗಳ ಒಟ್ಟು 616 ಮಕ್ಕಳು ಪರೀಕ್ಷೆ ಬರೆದರು.
ಇಂದು ಸಮಾರೋಪ
ಗದಗ: ಕನಕದಾಸ ಶಿಕ್ಷಣ ಸಮಿತಿಯ ಕೆಎಸ್.ಎಸ್ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ  ಸಾಂಘಿಕ ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆ ಸಮಾರೋಪ ಸಮಾರಂಭ ಏ. 2ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ. ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ವಹಿಸುವರು. ಅತಿಥಿಗಳಾಗಿ ಕವಿವಿ ಧಾರವಾಡದ ಮೌಲ್ಯಮಾಪನದ ಕುಲಸಚಿವ ಡಾ.  ಕೆ.ಆರ್. ದುರ್ಗಾದಾಸ್ ಆಗಮಿಸುವರು. ಜಿಪಂ ಮಾಜಿ ಉಪಾಧ್ಯಕ್ಷೆ ಶಕುಂತಲಾ ದಂಡಿನ ಪಾರಿತೋಷಕ ವಿತರಿಸುವರು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ.ಎನ್. ಕಾಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರು ಪೂರೈಕೆ ಮಾಹಿತಿ
ಗದಗ:
ನಗರದ ವಿಎನ್.ಟಿ ರಸ್ತೆ, ಜವುಳ ಭಾಗ, ಚವ್ಹಾಣ ಲೈನ್, ಕಾಗದಗೇರಿ ಓಣಿ, ಹಂಪಿನ ಗಲ್ಲಿ, ಎಲಿಗಾರ ಪ್ಲಾಟ್, ಶಿವಪ್ಪನ ಮಠ, ಬನ್ನಿಕಟ್ಟೆ ಲೈನ್, ಕೊಟ್ಟೂರ ಲೈನ್, ಹನುಮನ ಗರಡಿ, ವಿಭೂತಿ ಓಣಿ, ಪಲ್ಲೇದವರ ಓಣಿ, 2ನೇ ನಂ. ಶಾಲೆ, ನರಿಬಾವಿ ಓಣಿ, ಅರಸಿದ್ದಿಯವರ ಲೈನ್ ಈ ಭಾಗಗಳಲ್ಲಿ ಮಂಗಳವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.

ಶಿವಗಂಗಮ್ಮ ನಿಧನ
ನರೇಗಲ್ಲ:
ಪಟ್ಟಣದ ನಿವಾಸಿ ಶಿವಗಂಗಮ್ಮ ಕಳಕೊಣ್ಣವರ (69) ನಿಧನರಾಗಿದ್ದಾರೆ. ಅವರಿಗೆ ನಾಲ್ವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಹಾಗೂ ಅಪಾರ ಬಂಧುಗಳು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.