ರಾಣಿಬೆನ್ನೂರಲ್ಲಿ ನಡೆಯುತ್ತಾ ಕೈ ಮ್ಯಾಜಿಕ್?
ಕನ್ನಡಪ್ರಭ ವಾರ್ತೆ, ಹಾವೇರಿ, ಏ. 9
ರಾಜ್ಯದ ಕಾಂಗ್ರೆಸ್ ಪಾಳೆಯದಲ್ಲಿ ಟಿಕೆಟ್ ಗುದ್ದಾಟ ಮುಂದುವರೆದಿದ್ದು, ಪ್ರಸಕ್ತ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಿಂದ ಸ್ಪರ್ಧಿಸಬೇಕೆಂಬ ಪ್ರಬಲ ಇಚ್ಛೆ ಹೊಂದಿರುವ ಆಕಾಂಕ್ಷಿಗಳು ಹೈಕಮಾಂಡ್ನ ವಿರುದ್ಧ ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದಾರೆ.
ರಾಣಿಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಲು ಇಚ್ಛಿಸಿದ್ದ ಕೆಪಿಸಿಸಿ ಕಾರ್ಯದರ್ಶಿಯೂ ಆಗಿದ್ದ ರುಕ್ಮಿಣಿ ಸಾಹುಕಾರ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದೇ ಈ ಮಾತಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಮಹಿಳೆಯರಿಗೆ ಕಾಂಗ್ರೆಸ್ನಲ್ಲಿ ಪ್ರಾಧಾನ್ಯ ನೀಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಇನ್ನೆರಡು ದಿನಗಳಲ್ಲಿ ರಾಜಿನಾಮೆ ಪತ್ರವನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸುವುದಾಗಿ ತಿಳಿಸಿದ್ದು, ಕ್ಷೇತ್ರವಲ್ಲದೇ ಇಡೀ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಗೊಂದಲ ಮೂಡಿದೆ.
ದ್ವಿಸದಸ್ಯ ಕ್ಷೇತ್ರ!: 1957ರಲ್ಲಿ ರಾಣಿಬೆನ್ನೂರು ಹಾಗೂ ಬ್ಯಾಡಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರಗಳಾಗಿರಲಿಲ್ಲ. ಇದರಿಂದಾಗಿ ಈ ಎರಡೂ ಕ್ಷೇತ್ರದ ಮತದಾರರು ಒಟ್ಟು ಇಬ್ಬರು ಶಾಸಕರನ್ನು ಚುನಾಯಿಸುವ ಜವಾಬ್ದಾರಿ ಹೊಂದಿದ್ದರು. 1957ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಯಲ್ಲವ್ವ ಸಾಂಬ್ರಾಣಿ ಹಾಗೂ ಎಸ್.ಎಫ್. ಪಾಟೀಲ ಆಯ್ಕೆಯಾಗಿದ್ದರು. ನಂತರ, 1962ರಲ್ಲಿ ನಡೆದ ಚುನಾವಣೆಯಲ್ಲಿ ರಾಣಿಬೆನ್ನೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟಿತು. ಅಲ್ಲದೆ, ಮೀಸಲು ಕ್ಷೇತ್ರವಾಗಿತ್ತು. ಮರು ಆಯ್ಕೆ ಬಯಸಿ ಸಾಂಬ್ರಾಣಿ ಅವರೇ ಕಣಕ್ಕಿಳಿದು ಗೆಲವು ಸಾಧಿಸಿದ್ದರು.
ಕಾಂಗ್ರೆಸ್ ಭದ್ರಕೋಟೆ: ಹತ್ತು ವಿಧಾನಸಭಾ ಚುನಾವಣೆಗಳನ್ನು ಕಂಡಿರುವ ರಾಣಿಬೆನ್ನೂರು ಕ್ಷೇತ್ರದ ಮತದಾರರು, ಒಟ್ಟು 7 ಬಾರಿ ಕಾಂಗ್ರೆಸ್ಗೆ ಗೆಲವು ತಂದುಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಈ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯೇ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ. ಒಟ್ಟು 8 ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಮಾಜಿ ಸಚಿವ ಕೆ.ಬಿ. ಕೋಳಿವಾಡ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೆ ನಾಲ್ಕು ಬಾರಿ ಸೋಲುಂಡಿದ್ದರು. ಒಂದು ಬಾರಿ ಪಿಎಸ್ಪಿ, ಒಂದು ಬಾರಿ ಜನತಾದಳ ಹಾಗೂ ಒಮ್ಮೆ ಪಕ್ಷೇತರ ಅಭ್ಯರ್ಥಿ ಇಲ್ಲಿ ಪಾರುರತ್ಯ ಮೆರೆದಿದ್ದರು. 2008ರಲ್ಲಿ ರಾಜ್ಯ ರಾಜಕೀಯದಲ್ಲಿ ಆದ ಬದಲಾವಣೆಯಿಂದಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ. ಶಿವಣ್ಣ ಕ್ಷೇತ್ರದಲ್ಲಿ ಆಯ್ಕೆಯಾಗುವ ಮೂಲಕ ಪ್ರಥಮ ಬಾರಿಗೆ ಬಿಜೆಪಿಗೆ ಗೆಲವು ತಂದುಕೊಟ್ಟ ಕೀರ್ತಿಗೆ ಭಾಜನರಾಗಿದ್ದರು.
ತ್ರಿಕೋನ ಸ್ಪರ್ಧೆ: ರಾಣಿಬೆನ್ನೂರು ಕ್ಷೇತ್ರದ ಮತದಾರ ರಾಜಕೀಯ ಸ್ಥಿತ್ಯಂತರಗಳನ್ನು ಇತ್ತೀಚಿನ ವರ್ಷಗಳಲ್ಲಿ ಸೂಕ್ಷ್ಮವಾಗಿ ಗಮನಿಸುತ್ತ ಸಾಗಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕೆಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಾಗಿವೆ. ಕಳೆದ ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಜಿ. ಶಿವಣ್ಣ ಪ್ರಸಕ್ತ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಲು ಮಂಜುನಾಥ ಓಲೇಕಾರ ಹಾಗೂ ಭಾರತಿ ಜಂಬಗಿ ತಮ್ಮ ಇಂಗಿತವನ್ನು ವರಿಷ್ಠರಲ್ಲಿ ತೋರ್ಪಡಿಸಿದ್ದಾರೆ. ಕೆಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಿಸುವ ಮೂಲಕ ಕಮಲ ಅರಳಿಸುವಂತಹ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ವರಿಷ್ಠರು ತಲ್ಲೀನರಾಗಿದ್ದರಿಂದ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳಲ್ಲಿ ಸಹಜವಾಗಿ ಗೊಂದಲ ಮೂಡಿಸಿದೆ. ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿರುವ ಮಾಜಿ ಸಚಿವ ಕೆ.ಬಿ. ಕೋಳಿವಾಡ, ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಜೆಡಿಎಸ್ ಹಾಗೂ ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಈವರೆಗೂ ಅಭ್ಯರ್ಥಿ ಹೆಸರು ಅಖೈರುಗೊಳಿಸಿಲ್ಲ.
ಬಂಡಾಯದ ಭೀತಿ: 2008ರಲ್ಲಿ ನಡೆದ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರ ಕಾಂಗ್ರೆಸ್ ಕೈಯಿಂದ ಜಾರಿತ್ತು. ಕ್ಷೇತ್ರದಲ್ಲಿ ಮತ್ತೆ ಕೈ ಬಲಪಡಿಸಬೇಕೆಂಬ ಉದ್ದೇಶದಿಂದ ಕೆಪಿಸಿಸಿ ಕಾರ್ಯದರ್ಶಿ, ಟಿಕೆಟ್ ಪ್ರಬಲ ಆಕಾಂಕ್ಷಿ ರುಕ್ಮಿಣಿ ಸಾಹುಕಾರ, ಸತತ 2 ವರ್ಷಗಳ ಕಾಲ ಕ್ಷೇತ್ರದಲ್ಲಿ 122ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪಕ್ಷದ ಸಂಘಟನೆಗೆ ಶ್ರಮಿಸಿದ್ದರು. ಗ್ರಾಮ ವಾಸ್ತವ್ಯ, ಗ್ರಾಮಸಭೆ ಹಾಗೂ ಮಹಿಳೆಯರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ವಿವರವಾಗಿ ಅಧ್ಯಯನ ಮಾಡಿದ್ದ ಸಾಹುಕಾರ, ಅಲ್ಲಿನ ಮತದಾರರ ಮನದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಇದು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವಿಗೆ ಸಾಕಷ್ಟು ಪ್ಲಸ್ ಆಗಲಿದೆ ಎಂಬ ಮಾತುಗಳು ಕೈ ಪಾಳೆಯದಲ್ಲೇ ಕೇಳಿ ಬರುತ್ತಿವೆ. ಈ ಮಧ್ಯೆ ಟಿಕೆಟ್ ಸಿಗಲಿಲ್ಲ ಎಂಬ ಬೇಸರದಲ್ಲಿರುವ ರುಕ್ಮೀಣಿ ಸಾಹುಕಾರ ಬಂಡಾಯ ಏಳುವ ಭೀತಿಯೂ ಕಾಂಗ್ರೆಸ್ನಲ್ಲಿದೆ.
ಲಿಂಗಾಯತರೇ: ರಾಣಿಬೆನ್ನೂರು ಕ್ಷೇತ್ರದಲ್ಲಿ ಲಿಂಗಾಯತರೇ ಪ್ರಾಬಲ್ಯ ಸಾಧಿಸಿದ್ದಾರೆ. ಒಟ್ಟು 1,79,603 ಮತದಾರರನ್ನು ಹೊಂದಿರುವ ರಾಣಿಬೆನ್ನೂರು, ಕುಡಿಯುವ ನೀರು, ವಿದ್ಯುತ್, ರಸ್ತೆ, ಬೀದಿ ದೀಪ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಬಿಜೆಪಿ ಮಾಜಿ ಶಾಸಕ ಜಿ. ಶಿವಣ್ಣ, ಪ್ರಸಕ್ತ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗಳ್ಯಾರು ಎಂಬುದನ್ನು ಘೋಷಿಸಿಲ್ಲ. ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿಕೊಳ್ಳಲು ಕಾಂಗ್ರೆಸ್ನಿಂದ ಕೋಳಿವಾಡ ಅಖಾಡಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಕೈಮೇಲಾಗುವುದೋ, ಬಿಜೆಪಿಯ ಕಮಲ ಅರಳುವುದೋ ಅಥವಾ ಕೆಜೆಪಿಯ ಟೆಂಗಿನಕಾಯಿ ಗಟ್ಟಿತನ ಪ್ರದರ್ಶಿಸುವುದೋ ಅಥವಾ ತೆನೆ ಹೊತ್ತ ಮಹಿಳೆ ಮೆರೆಯುವಳೋ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.
- ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

