ದೀನ ದಲಿತರ, ರೈತರ ಹಿತ ಕಾಯುವವರಿಗೆ ಮತ ನೀಡಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 14
ರಾಜ್ಯದ ರೈತರ ಹಿತ ಕಾಪಾಡುವ ಬದಲು ತಮ್ಮ ಸ್ವಾರ್ಥ ಸಾಧನೆಗಳ ಈಡೇರಿಕೆಗಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಜೈಲು ಸೇರಿ ಹೊರಗೆ ಬಂದು ಪಕ್ಷವನ್ನು ಬಿಟ್ಟು-ಮೊಸಳೆ ಕಣ್ಣೀರು ಸುರಿಸುತ್ತಾ ಮತಯಾಚನೆಗೆ ಬಂದವರನ್ನು ಧಿಕ್ಕರಿಸಿ, ರಾಜ್ಯದ ರೈತರ ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸುವವರಿಗೆ ಮತ ನೀಡಲು ರೈತರು ಮುಂದಾಗಬೇಕೆಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವಿಂದ್ರಗೌಡ ಎಫ್. ಪಾಟೀಲ ಹೇಳಿದರು.
ತಾಲೂಕಿನ ನೂಕಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ರೈತ ಸಂಘದ ಸಮಾವೇಶ ಹಾಗೂ ನೂಕಾಪುರ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.
ಮುಕ್ತ ಮತದಾನ ಮಾಡುವುದು ದೇಶದ ಎಲ್ಲರ ಹಕ್ಕಾಗಿದ್ದು, ಹಣ ಹಾಗೂ ಅಧಿಕಾರದ ಬಲದಿಂದ ಕಳೆದ ನಾಲ್ಕುವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದವರು, ತಮ್ಮ ಸ್ವಾರ್ಥ ಸಾಧನೆಗಳ ಈಡೇರಿಕೆಗಾಗಿ ರಾಜ್ಯದ ಜನರ ಬೇಕು, ಬೇಡಿಕೆಗಳನ್ನು ಯಾವ ರೀತಿ ಈಡೇರಿಸಿದ್ದಾರೆಂಬುದರ ಕುರಿತು, ರೈತರ ಸಾಲವನ್ನು ಮನ್ನಾ ಮಾಡುತ್ತೆವೆಂದು ಹೇಳಿ 3 ವರ್ಷ ಕಳೆದರೂ ಸಾಲ ಏಕೆ ಮನ್ನಾ ಮಾಡಲಿಲ್ಲ?
ನಿರುದ್ಯೋಗಿಗಳಿಗೆ ಉದ್ಯೋಗ ವದಗಿಸುತ್ತೆವೆ, ಬೆಳೆ ವಿಮೆ ನೀಡುತ್ತೆವೆ ಎಂದು ಹೇಳಿದವರು ಎಲ್ಲಿದ್ದಾರೆ? ಕಾರಣ ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕೆಂಬುದರ ಕುರಿತು ರೈತರು ಯೋಚಿಸಿ ಮತದಾನಕ್ಕೆ ಮುಂದಾಗಬೇಕೆಂದು ರವಿಂದ್ರಗೌಡ ಮನವಿ ಮಾಡಿದರು. ರೈತ ಸಂಘದ ನೂಕಾಪುರ ಗ್ರಾಮ ಘಟಕದ ನಾಮಫಲಕವನ್ನು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸಿ.ಸಿ. ಸಣ್ಣಗೌಡ್ರ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಸುರೇಶಪ್ಪ ಗರಡಿಮನಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಉಪಾಧ್ಯಕ್ಷ ಜಯಣ್ಣ ಮಾಗನೂರು, ಮಹಿಳಾ ಅಧ್ಯಕ್ಷೆ ಕರಬಸವ್ವ ಕೋರೆರ, ಜಿಲ್ಲಾ ಮುಖಂಡ ಮಲ್ಲೇಶಪ್ಪ ಬಿಳಿಎಲಿ, ಕೊಟ್ರೇಶಪ್ಪ ಹುಬ್ಬಳ್ಳಿ, ಎಸ್.ಎಫ್. ಜಾನಪ್ಪನವರ ಮಾತನಾಡಿದರು.
ನೂಕಾಪುರ ಗ್ರಾಮ ಘಟಕದ ಅಧ್ಯಕ್ಷ ಈರಣ್ಣ ವಡ್ಡರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಹನುಮಂತಪ್ಪ ಕುಂಬಾರ, ತಮ್ಮಣ್ಣ ಸಣ್ಣಗೇರಿ, ಸಿರಾಜ ರಾಣಿಬೆನ್ನೂರು, ಶಿವಾನಂದ ಲಿಂಗದಹಳ್ಳಿ ಇದ್ದರು.
--
ಅಂಬೇಡ್ಕರ್ ಜಾತಿ ಮೀರಿ ಬೆಳೆದ ಧೀಮಂತ ನಾಯಕ
ಹಾನಗಲ್ಲ: ಭಾರತ ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ ಬಿ.ಆರ್. ಅಂಬೇಡ್ಕರ್ ಭಾರತಮಾತೆಯ ಹೆಮ್ಮೆಯ ಪುತ್ರ, ಜಾತಿ ಮೀರಿ ಬೆಳೆದ ಧೀಮಂತ ನಾಯಕ ಎಂದು ಹಾನಗಲ್ಲ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಎನ್.ಬಿ. ಬಣಕಾರ ಹೇಳಿದರು. ಸ್ಥಳೀಯ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಡಾ ಬಿ.ಆರ್. ಅಂಬೇಡ್ಕರ್ 122ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಡಾ ಅಂಬೇಡ್ಕರ್ ದೇಶ ಕಂಡ ಮಹಾತ್ಮರಲ್ಲಿ ಒಬ್ಬರು. ದೇಶದ ಜನರಿಗೆ ವಿಶೇಷವಾಗಿ ದಲಿತರಿಗೆ ದಾರಿದೀಪವಾಗಿ, ಅತ್ಯಂತ ದುರ್ಗಮವಾಗಿದ್ದ ದಲಿತ ವರ್ಗದವರ ಬದುಕನ್ನು ಹಸನಾಗಿಸುವಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಅಂಥ ಮುತ್ಸದ್ಧಿಯನ್ನು ಒಂದು ಕೋಮಿನ ನಾಯಕನನ್ನಾಗಿ ನೋಡದೆ ಇಡೀ ರಾಷ್ಟ್ರದ ಅಭಿವೃದ್ಧಿಯಲ್ಲಿ ಅವರ ಪಾತ್ರ ಸ್ಮರಿಸಬೇಕೆಂದು ಹೇಳಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಸಿ. ಮಂಜುನಾಥ, ಡಾ ವೈ.ವೈ. ಜಾನಕರ, ಡಾ ಎಂ.ಎಚ್. ಹೊಳಿಯಣ್ಣನವರ, ಬಾಹ್ಯ ಪರೀಕ್ಷಕರಾದ ಡಾ ವಿ.ಎಸ್. ದಾನೇನವರ, ಪಿ.ಎಫ್. ಪುರಾಣಮಠ, ಸಿಬ್ಬಂದಿ ವಸಂತ ಗುಡಗುಡಿ, ಮೋಹನ ಕಲಾಲ, ಎನ್.ಎಚ್. ಪುರೋಹಿತ ಮುಂತಾದವರು ಇದ್ದರು. ರಾಜು ಲಮಾಣಿ ಪ್ರಾರ್ಥಿಸಿದರು. ಪ್ರೊ. ವಿ.ಎಲ್. ಪಾಟೀಲ್ ಸ್ವಾಗತಿಸಿದರು. ಡಾ ಪ್ರಕಾಶ ಬಿ. ಹೊಳೇರ ವಂದಿಸಿದರು.
ಇಂದು ಕೋಳಿವಾಡ ನಾಮಪತ್ರ
ರಾಣಿಬೆನ್ನೂರು: ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಮಾಜಿ ಸಚಿವ ಕೆ.ಬಿ. ಕೋಳಿವಾಡ ಏ. 15ರಂದು ತಮ್ಮ ಬೆಂಬಲಿಗರೊಂದಿಗೆ ಬೆಳಗ್ಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ನಗರ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

