ಅಂತರ್ಜಾಲದಲ್ಲಿ ಪುರಾತತ್ವ ಇಲಾಖೆ ಮಾಹಿತಿ
ಹಾವೇರಿ: ಪುರಾತತ್ವ ಇಲಾಖೆಯಿಂದ ಪ್ರಕಟವಾಗಿರುವ ಎಲ್ಲ ಪುಸ್ತಕಗಳನ್ನು ಅಂತರ್ಜಾಲಕ್ಕೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಶೀಘ್ರವೇ ಅಂತರ್ಜಾಲದಲ್ಲಿ ಪುರಾತತ್ವ ಕುರಿತ ಮಾಹಿತಿ ಪಡೆಯಬಹುದಾಗಿದೆ ಎಂದು ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ಆಯುಕ್ತ ಪಿ.ಎಸ್. ವಸ್ತ್ರದ ಹೇಳಿದರು.
ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಕಾಲೇಜು ಆಶ್ರಯದಲ್ಲಿ ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆರಂಭವಾದ ಹಾವೇರಿ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ ವಿಷಯ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪುರಾತತ್ವ ಇಲಾಖೆಗಳಿಂದ ಪ್ರತಿ ಜಿಲ್ಲೆಗಳ ಇತಿಹಾಸ ಒಂದೆಡೆ ಕಲೆಹಾಕುವ ಸಲುವಾಗಿ ವಿಚಾರ ಸಂಕಿರಣ ಏರ್ಪಡಿಸಲಾಗುತ್ತಿದೆ. 20 ಜಿಲ್ಲೆಗಳಲ್ಲಿ ಇಂಥ ಸಂಕಿರಣ ಆಯೋಜಿಸಿ ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಅದರ ಜತೆಗೆ ಬೇರೆ ಬೇರೆ ವಿಷಯಗಳ ಕುರಿತು ಹತ್ತು ಹಲವು ಪುಸ್ತಕಗಳನ್ನು ಸಹ ಪ್ರಕಟ ಮಾಡಲಾಗಿದೆ. ಅವೆಲ್ಲವುಗಳನ್ನು ಅಂತರ್ಜಾಲದಲ್ಲಿ ಅಳವಡಿಸಲಾಗುತ್ತದೆ ಎಂದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಎಂ. ಷಡಕ್ಷರಯ್ಯ ಮಾತನಾಡಿ, ವಿಚಾರ ಸಂಕಿರಣಗಳು ಸ್ಥಳೀಯವಾಗಿ ಸಮಗ್ರ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿವೆ. ಪುರಾತತ್ವ ಇಲಾಖೆ ಮಹತ್ತರ ಪಾತ್ರ ವಹಿಸುತ್ತಿದೆ ಎಂದರು.
ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಪ್ರಾಚ್ಯವಸ್ತು ಇಲಾಖೆ ನಿವೃತ್ತ ಉಪನಿರ್ದೇಶಕಿ ಸುಲೋಚನಾ ಪೋತ್ನಿಸ್ ಮಾತನಾಡಿ, ಇತಿಹಾಸವು ಮಾನವನ ಸುದೀರ್ಘಕಾಲ ನಡೆಸಿದ ಹೋರಾಟ. ಅವನು ಪರಿಸರವನ್ನು ಅರ್ಥೈಸಲು ತನ್ನ ವಿವೇಚನೆಯನ್ನು ಬಳಸಿದ ರೀತಿ-ನೀತಿ ಹಾಗೂ ಈ ಅರ್ಥಗ್ರಹಿಕೆಯಂಥೆ ಕಾರ್ಯಾಚರಣೆಗೆ ತೊಡಗಿದ ಕ್ರಿಯೆ ಒಂದೆಡೆಯಾದರೆ, ಇನ್ನೊಂದೆಡೆ, ಆಧುನಿಕ ಕಾಲಘಟ್ಟದಲ್ಲಿ ಹೋರಾಟವನ್ನು ವಿಶಾಲಗೊಳಿಸಿ, ಕ್ರಾಂತಿಕಾರಿ ಪಥದಲ್ಲಿ ಕೊಂಡೊಯ್ಯುತ್ತಿರುವುದಾಗಿದೆ ಎಂದರು.
ಮೈಸೂರಿನ ಖ್ಯಾತ ಇತಿಹಾಸಕಾರ ಡಾ. ಎಂ.ಎಸ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪಿ.ಡಿ. ಶಿರೂರ, ವೀರಣ್ಣ ಅಂಗಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

