ಬಸವರಾಜ ಬೊಮ್ಮಾಯಿ ನನ್ನ ತಮ್ಮ: ಸುಷ್ಮಾ ಸ್ವರಾಜ್
ಶಿಗ್ಗಾಂವಿ: ಅದೃಷ್ಟದ ತಿಲಕವೆಂದೇ ಭಾವಿಸುತ್ತಿರುವ ಬಿಜೆಪಿಯ ಸುಷ್ಮಾ ಸ್ವರಾಜ್ ಅವರ ತೊದಲು ನುಡಿಗಳ ಕನ್ನಡದ ಭಾಷಣವು, ಬಿಸಿಲಿನಲ್ಲಿಯೂ ನೆರೆದಿದ್ದ ಅಪಾರ ಜನಸ್ತೋಮದಿಂದ ಆಗಾಗ್ಗೆ ಕೇಳಿ ಬರುತ್ತಿದ್ದ ಜಯಘೋಷಗಳ ನಡುವೆ ನಗುವಿನ ಅಲೆಯಲ್ಲಿ ತೇಲುವಂತೆ ಮಾಡಿದ ದೃಶ್ಯಗಳು ಶನಿವಾರ ಪಟ್ಟಣದ ಸಂತೆಬೈಲು ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಬಹಿರಂಗ ಸಮಾವೇಶದಲ್ಲಿ ಕಂಡು ಬಂದವು.
ಸುಮಾರು 2 ತಾಸು ತಡವಾಗಿ ಆರಂಭವಾದ ಸಭೆಯಲ್ಲಿ ಸುಡು ಸುಡು ಬಿಸಿಲು ನೆರೆದಿದ್ದ ಕಾರ್ಯಕರ್ತರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರೆ, ಇನ್ನೊಂದೆಡೆ ಕಾರ್ಯಕರ್ತರಲ್ಲಿ ಸುಷ್ಮಾ ಸ್ವರಾಜ್ರ ಭಾಷಣ ಕೇಳುವ ತವಕ. ಉರಿ ಬಿಸಿಲನ್ನು ಲೆಕ್ಕಿಸದೇ ಕಾರ್ಯಕರ್ತರು ತೋರಿದ ಉತ್ಸಾಹ ಮೆಚ್ಚಲೇಬೇಕು.
ಬಸು ಸಹೋದರ: ವರಮಹಾಲಕ್ಷ್ಮಿ ಹಬ್ಬಕ್ಕೆಂದು ಬಳ್ಳಾರಿಯ ರೆಡ್ಡಿ ಬದರ್ಸ್ ಮನೆಗೆ ಬರುತ್ತಿದ್ದ ಸುಷ್ಮಾ ಸ್ವರಾಜ್ ಈ ಬಾರಿ ಬಂದಿದ್ದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಚುನಾವಣಾ ಪ್ರಚಾರಕ್ಕೆ. ಬೊಮ್ಮಾಯಿ ಅವರನ್ನು ಕನ್ನಡದಲ್ಲಿ ನನ್ನ ತಮ್ಮ ಎಂದು ಸಂಬೋಧಿಸಿ ಬಿಜೆಪಿಯ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ಪ್ರತಿಪಕ್ಷ ನಾಯಕಿಯ ಕಡಕ್ ಭಾಷಣ ಕಾರ್ಯಕರ್ತರನ್ನು ಮಂತ್ರ ಮುಗ್ಧಗೊಳ್ಳುವಂತೆ ಮಾಡಿತು.
ಸುಷ್ಮಾ ಸ್ವರಾಜ್ ಎಂದ ಮೇಲೆ ಸಹಜವಾಗಿ ಪುರುಷರಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನೀತಿ ಸಂಹಿತೆಗೆ ಶಾಪ: ಪ್ರಸಕ್ತ ಚುನಾವಣೆಯಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದರಿಂದ ಹಸಿದ ಮಹಿಳೆಗೆ ಊಟವಿರಲಿ, ಬಾಯಾರಿದವರಿಗೂ ನೀರು ಕೊಡಲು ಸಂಘಟಿಕರಿಗೆ ಸಾಧ್ಯವಾಗಲಿಲ್ಲ. ಸ್ವಲ್ಪ ಮಟ್ಟಿಗೆ ಕುಡಿವ ನೀರು ಒದಗಿಸಿದರೂ ಕಾರ್ಯಕರ್ತರ ದಾಹ ತೀರಬಹುದಿತ್ತು. ಪುರುಷರು ಹೇಗೋ ತಮ್ಮ ದಾಹ ತೀರಿಸಿಕೊಂಡ ಬಂದರಾದರೂ ಮಹಿಳೆಯರಿಗೆ ಸಾಧ್ಯವಾಗಲಿಲ್ಲ. ಎಲ್ಲ ವ್ಯವಸ್ಥೆಗಳ ಕಲ್ಪಿಸುವ ಶಕ್ತಿ ಸಂಘಟಿಕರಿಗಿದ್ದರೂ ಸಹ ನೀತಿ ಸಂಹಿತೆ ಕಿರಿಕಿರಿಯಿಂದಾಗಿ ಊಟ ನೀರು ಕಲ್ಪಿಸಲಾಗಲಿಲ್ಲ. ಹೀಗಾಗಿ ಕೆಲ ಮಹಿಳಾ ಕಾರ್ಯಕರ್ತರು ನೀತಿ ಸಂಹಿತೆಗೆ ಹಿಡಿಶಾಪ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾನರ್ನಲ್ಲಿ ತಪ್ಪು ಹೆಸರು: ವೇದಿಕೆಯಲ್ಲಿ ಹಿಂದೆ ಹಾಕಿದ್ದ ಬೃಹತ್ ಬ್ಯಾನರ್ನಲ್ಲಿ ಹೆಸರು ತಪ್ಪಾಗಿದ್ದು ಎದ್ದು ಕಾಣುವಂತಿತ್ತು. ಸುಷ್ಮಾ ಎಂಬುದರ ಬದಲಾಗಿ ಸುಸ್ಮಾ ಎಂದು ಹಾಗೂ ಸ್ವರಾಜ್ ಬದಲಾಗಿ ಸ್ವರಾಜ ಎಂದು ನಮೂದಿಸಿದ್ದು ಸುಷ್ಮಾ ಸ್ವರಾಜ್ ನಡೆಸಿದ ಕನ್ನಡದ ತೊದಲು ಭಾಷಣ ನಾಚಿಸುವಂತಿತ್ತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಅವರ ಅಭಿಮಾನಿ ಮರಗಾಲು ಕಲಾವಿದ ಗುಡದಯ್ಯ ಶಿರಬಡಗಿ ನೆರೆದಿದ್ದ ಕಾರ್ಯಕರ್ತರನ್ನು ಮನರಂಜಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

