ಕಾರ್ಮಿಕ, ಕೃಷಿ ಕಾರ್ಮಿಕ ಈಗ ಪ್ರಚಾರಕ!
ಕನ್ನಡಪ್ರಭ ವಾರ್ತೆ, ಹಾವೇರಿ, ಏ. 28
ಜಿಲ್ಲೆಯ ಕಾರ್ಮಿಕ ಹಾಗೂ ಕೃಷಿ ಕಾರ್ಮಿಕರಿಗೆ ಇದೀಗ ಸುಗ್ಗಿಯ ಕಾಲ! ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದೆ ತಡ ಕೂಲಿ-ನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕಾರ್ಮಿಕರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಶುಕ್ರದೆಸೆ ಆರಂಭವಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪರ ಮನೆ-ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದ್ದ ಕಾರ್ಮಿಕ ವರ್ಗ, ಅನಾಯಾಸವಾಗಿ ನಿತ್ಯ ನೂರಾರು ರು.ಗಳನ್ನು ಸಂಪಾದಿಸಿದ್ದರು.
ನಂತರದ ದಿನಗಳಲ್ಲಿ ನಿತ್ಯದ ಬದುಕಿನ ಗಂಜಿಯಾಗಿದ್ದ ವೃತ್ತಿ ಬಗ್ಗೆ ಅಸಡ್ಡೆ ಭಾವನೆ ತಾಳಲಾರಂಭಿಸಿದ್ದರು. ಇದೀಗ ಮತ್ತೆ ವಿಧಾನಸಭೆ ಚುನಾವಣೆಗಳು ಹೊಸ್ತಿಲಲ್ಲಿ ಇರುವುದರಿಂದ ಈ ಕಾರ್ಮಿಕ ವರ್ಗ ವೃತ್ತಿ ಬಗ್ಗೆ ಅನಾದರ ತೋರಲಾರಂಭಿಸಿದ್ದು, ಇವರನ್ನೇ ನಂಬಿಕೊಂಡಿರುವ ಮಾಲೀಕರ ತಲೆಬಿಸಿ ಮಾಡಿದೆ.
ಮಾಣಿಗಳ ಬರ: ಚಹಾ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಮಾಣಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅನೇಕರು ಇದೀಗ ರಾಜಕೀಯ ಪಕ್ಷಗಳ ಪ್ರಚಾರಕರಾಗಿ ಮಾರ್ಪಟ್ಟಿದ್ದಾರೆ. ಇದರಿಂದಾಗಿ ದೊಡ್ಡ-ದೊಡ್ಡ ಹೊಟೇಲ್ಗಳಿಗೆ ಬರುವ ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಗುಣಮಟ್ಟದ ಸೇವೆ ನೀಡಲು ಆಯಾ ಹೊಟೇಲ್ ಮಾಲೀಕರು ಪರಿತಪಿಸುವಂತಹ ಸ್ಥಿತಿ ಕಂಡು ಬರುತ್ತಿದೆ.
ಈ ಪರಿಸ್ಥಿತಿ ದೊಡ್ಡ ಹೊಟೇಲ್ಗಳಿಗೆ ಮಾತ್ರ ಸಿಮೀತವಾಗಿರದೇ ಸಣ್ಣ-ಪುಟ್ಟ ಹೊಟೇಲ್ಗಳು ಇದಕ್ಕೆ ಹೊರತಾಗಿಲ್ಲ. ಸಣ್ಣಪುಟ್ಟ ಹೊಟೇಲ್ಗಳ ಮಾಲೀಕರು, ತಾವೇ ಖುದ್ದಾಗಿ ಗ್ರಾಹಕರಿಗೆ ಸೇವೆ ನೀಡಲು ಮುಂದಾಗಿರುವ ಸಾಕಷ್ಟು ಉದಾಹಣೆಗಳು ಕಣ್ಣಿಗೆ ಕಾಣುತ್ತಿವೆ.
ಸಣ್ಣ ಉದ್ದಿಮೆದಾರರು ಮಾಣಿಗಳ ಸಮಸ್ಯೆಗೆ ತಮ್ಮದೇ ರೀತಿಯಲ್ಲಿ ಪರಿಹಾರ ಕಂಡುಕೊಂಡಿದ್ದಾರೇನೋ ನಿಜ. ಆದರೆ, ದೊಡ್ಡ ಹೊಟೇಲ್ಗಳ ಮಾಲೀಕರು ಇಂತಹ ಸಾಹಸಕ್ಕೆ ಕೈಹಾಕಲು ಸಾಧ್ಯವಿಲ್ಲ. ಅಂತವರಿಗೆ ಪ್ರತಿಷ್ಠೆ ಕಾಡಲಾರಂಭಿಸಿದೆ. ಇದೇ ಕಾರಣಕ್ಕಾಗಿ ಜಿಲ್ಲೆಯ ಕೆಲ ದೊಡ್ಡ ಹೊಟೇಲ್ಗಳು ಮಧ್ಯಾಹ್ನದ ಅವಧಿಗೆ ತಮ್ಮ ಸೇವೆಯನ್ನು ಮೀಸಲಿರಿಸಿವೆ.
ಕೃಷಿ ಕಾರ್ಮಿಕರೂ: 'ಕುರುಡು ಕಾಂಚಾಣ' ತಾಂಡವಾಟದಲ್ಲಿ ಕೃಷಿ ಕಾರ್ಮಿಕರೂ ಸಿಕ್ಕಿ ಹಾಕಿಕೊಂಡಿದ್ದಾರೆ. ನಿತ್ಯ ಹೊಲದಲ್ಲಿ ದುಡಿಯುವ ಪುರುಷ ಕಾರ್ಮಿಕರಿಗೆ ರು. 150ರಿಂದ ರು. 200 ಕೂಲಿ ನೀಡಲಾಗುತ್ತಿದ್ದರೆ, ಮಹಿಳಾ ಕಾರ್ಮಿಕರಿಗೆ ರು. 100-150 ನೀಡಲಾಗುತ್ತದೆ.
ದೈಹಿಕ ಶ್ರಮವಿಲ್ಲದೆ ಆಯಾ ರಾಜಕೀಯ ಪಕ್ಷಗಳು ನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ 2 ಬಾರಿ ತಿಂಡಿ ಹಾಗೂ ಮಧ್ಯಾಹ್ನ ಹಾಗೂ ರಾತ್ರಿ ಭೂರಿ ಭೋಜನ ನೀಡಿ ಕೈಗೆ ರು. 500 ನೋಟು ಇಡುತ್ತಿದ್ದು, ಕೃಷಿ ಕಾರ್ಮಿಕರಿಗೆ ಆಕಾಶ ಮೂರೇ ಗೇಣು ಎಂಬಂತಿದೆ.
ಇದರಿಂದಾಗಿ ಹೊಲಗದ್ದೆ ಕೆಲಸಕ್ಕೆ ಟಾಟಾ ಹೇಳಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಮನೆಯಿಂದ ಮನೆಗೆ ತೆರಳಿ ಪ್ರಚಾರ ಮಾಡಲಾರಂಭಿಸಿದ್ದಾರೆ. ಇದರಿಂದಾಗಿ ಹೊಲಗದ್ದೆಗಳ ಕೆಲಸ ಅರ್ಧಕ್ಕೆ ನಿಂತುಕೊಂಡಿದ್ದು, ಆಯಾ ಮಾಲೀಕರಿಗೆ ದಿಕ್ಕು ತೋಚದಂತಾಗಿದೆ.
ನೆತ್ತಿ ಬಿಸಿ: ವಿಪರೀತ ಸೆಕೆಯಿಂದಾಗಿ ನಗರ ಹಾಗೂ ಪಟ್ಟಣದ ಜನತೆ ಕೇವಲ ನೆತ್ತಿಬಿಸಿ ಮಾಡಿಕೊಂಡಿದ್ದರು. ಮಳೆರಾಯನ ಆಗಮನಕ್ಕಾಗಿ ಆಕಾಶದತ್ತ ಮುಖ ಮಾಡಿಕೊಂಡಿದ್ದ ರೈತ ಕಳೆದ ಎರಡು ದಿನಗಳಿಂದ ಆಗಸದಲ್ಲಿ ಕಾರ್ಮೋಡಗಳು ಕಂಡು ಬರಲಾರಂಭಿಸಿದ್ದರಿಂದ ಇಂದಿಲ್ಲ ನಾಳೆ ಮಳೆ ಬಿದ್ದರೆ ಕೃಷಿ ಚಟುವಟಿಕೆ ಮತ್ತೆ ಗರಿಗೆದರುವುದರಲ್ಲಿ ಎರಡು ಮಾತಿಲ್ಲ. ಕೃಷಿ ಕಾರ್ಯಕ್ಕಾಗಿ ರೈತರು ಹುಮ್ಮಸ್ಸಿನಿಂದ ಕಾಯುತ್ತಿದೆ.
ಎಲ್ಲರೂ ಮುಖಂಡರೆ: ವಿವಿಧ ರಾಜಕೀಯ ಪಕ್ಷಗಳ ಪರಿಸ್ಥಿತಿ ಮೇಲೆ ಒಮ್ಮೆ ಸೂಕ್ಷ್ಮ ನೋಟ ಬೀರಿದಾಗ ಕಾರ್ಯಕರ್ತರೆಲ್ಲರೂ ಮುಖಂಡರಂತೆ ವರ್ತಿಸುತ್ತಿರುವುದು ಕಂಡುಬರುತ್ತಿದೆ. ಶತಾಯ-ಗತಾಯ ಆಯಾ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡಿರುವ ಅಭ್ಯರ್ಥಿಗಳು ತಮ್ಮ ಪರ ಮನೆ-ಮನೆಗೆ ತೆರಳಿ ಪ್ರಚಾರ ನಡೆಸುವಂತೆ ಕಾರ್ಯಕರ್ತರಿಗೆ ಗಟ್ಟಿಯಾಗಿ ಹೇಳುವ ಸ್ಥಿತಿಯಲ್ಲೂ ಇಲ್ಲದಾಗಿದೆ.
ಯಾರೊಬ್ಬರನ್ನೂ ಸರಿಯಾಗಿ ಕಾರ್ಯನಿರ್ವಹಿಸುವಂತೆ ಹೇಳಿದರೆ ಚುನಾವಣೆ ಸಂದರ್ಭ ಆ ಕಾರ್ಯಕರ್ತ ತಮಗೆ ಎಲ್ಲಿ ಮುಳ್ಳಾಗಿ ಪರಿಣಮಿಸಲಿದ್ದಾನೆ ಎಂಬ ಆಂತಕ ಆಯಾ ಪಕ್ಷಗಳ ಅಭ್ಯರ್ಥಿಗಳನ್ನು ಕಾಡುವಂತಿದೆ.
ಇದಕ್ಕಾಗಿಯೇ, ಚುನಾವಣಾ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ತಮ್ಮ ಪರ ಪ್ರಚಾರ ಕೈಗೊಳ್ಳಲು ಕಾರ್ಮಿಕ ಹಾಗೂ ಕೃಷಿ ಕಾರ್ಮಿಕರನ್ನು ಅವಲಂಬಿಸುವಂತಾಗಿದೆ.
ಚುನಾವಣೆಗಳು ಸ್ವಲ್ಪ ಮಟ್ಟಿಗೆ ಕಾರ್ಮಿಕ ಹಾಗೂ ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿಯೇನೋ ಸುಧಾರಿಸಿವೆ ನಿಜ. ಆದರೆ, ಇದನ್ನೇ ಈ ವರ್ಗ ಮೈಗೂಡಿಸಿಕೊಂಡರೆ ಚುನಾವಣೆ ನಂತರ ಸೋಮಾರಿಗಳಾಗಿ ಅಲೆದಾಡಿದರೆ ನಮ್ಮ ಕುಟುಂಬದ ಕಥೆಯೇನು ಎಂಬ ಚಿಂತೆ ಬಡಜನರದ್ದು.
-ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

