ಹಾವೇರಿ

ಕುಪ್ಪೆಲೂರು: ಮನೆ, ಗುಡಿ, ಕಚೇರಿ ಜಲಾವೃತ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಆ. 4
ಹದಿನೈದು ದಿನಗಳಿಂದ ತಾಲೂಕಿನಾದ್ಯಂತ ಜಿಟಿ-ಜಿಟಿಯಾಗಿ ಮಳೆಯಾಗುತ್ತಿದೆ. ತುಂಬಿ ಹರಿಯುತ್ತಿರುವ ಕುಮದ್ವತಿ ನದಿಯ ದಡದಲ್ಲಿರುವ ಕುಪ್ಪೆಲೂರು ಗ್ರಾಮದಲ್ಲಿ ಕೃಷಿ ಇಲಾಖೆ ಕಟ್ಟಡ ಮತ್ತು ಸ್ಥಳಿಯ ಗ್ರಾಪಂ ನೀಡಿರುವ ಜಾಗೆಯಲ್ಲಿ ನಿರ್ಮಿಸಿಕೊಂಡಿರುವ ಬಡವರ ಎರಡು ಮನೆಗಳು ಜಲಾವೃತಗೊಂಡಿವೆ.
ತಾಲೂಕು ಕೇಂದ್ರ ಸ್ಥಾನದಿಂದ 25 ಕಿ.ಮೀ. ಅಂತರದಲ್ಲಿರುವ ಕುಪ್ಪೆಲೂರು ಗ್ರಾಮ ಕುಮದ್ವತಿ ನದಿಯ ದಡದಲ್ಲಿದ್ದು, ಪಶ್ಚಿಮದಿಂದ ನೇರವಾಗಿ ಪೂರ್ವಕ್ಕೆ ಕುಮದ್ವತಿ ನದಿ ಹರಿದಿದೆ. ನದಿಯ ಬಲಭಾಗದಲ್ಲಿರುವ ಕುಪ್ಪೆಲೂರು ಗ್ರಾಮದ ಹೊರ ಭಾಗದಲ್ಲಿ ಗ್ರಾಪಂಗೆ ಸೇರಿದ ಜಾಗೆಯಲ್ಲಿ ಕಟ್ಟಿರುವ ಕೃಷಿ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ, ಅದರ ಪಕ್ಕದಲ್ಲಿ ನಿವೇಶನ ರಹಿತರಿಗೆ ನೀಡಿರುವ ಜಾಗೆಯಲ್ಲಿ ಬಡವರು ನಿರ್ಮಿಸಿಕೊಂಡ ಮನೆ ಹಾಗೂ ಜೋಪಡಿಗಳು ಕುಮುದ್ವತಿ ನದಿಯ ಹಿನ್ನೀರಿನಿಂದ ಜಲಾವೃತಗೊಂಡಿವೆ. ಜೋಪಡಿಯಲ್ಲಿ ವಾಸಿಸುತ್ತಿದ್ದ ನಜೀಮಾಬಿ ಶೇಖಬಡಿ ಮತ್ತು ಶಿವಪ್ಪ ದೊಡ್ಡಫಕ್ಕಿರಪ್ಪ ಕಡೇಮನಿ ಅವರ ಕುಟುಂಬಗಳು ಊರಿನಲ್ಲಿ ಬೇರೆಯವರ ಮನೆ ಕಟ್ಟೆ ಮೇಲೆ ರಕ್ಷಣೆ ಪಡೆದಿವೆ.
ದವಸ-ಧಾನ್ಯ ಹಾಳಾಗಿವೆ
ಕುಪ್ಪೆಲೂರು ಗ್ರಾಮದ ನಿವೇಶನ ರಹಿತರಿಗೆ ಗ್ರಾಪಂ ಹಾಗೂ ಮುಖಂಡರು ಮನೆ ಕಟ್ಟಿಕೊಳ್ಳಲು ಈ ಜಾಗೆ ನೀಡಿದ್ದರು. ಮನೆ ಕಟ್ಟಿಕೊಳ್ಳಲು ಸರ್ಕಾರದ ಯೋಜನೆಯಲ್ಲಿ ಹಣ ನೀಡುವುದಾಗಿ ಗ್ರಾಪಂ ಭರವಸೆ ಕೊಟ್ಟಿದೆ. 10 ದಿನಗಳಿಂದ ಬೇರೆಯವರ ಮನೆಯ ಹೊರಗಿನ ಕಟ್ಟೆಯ ಮೇಲೆ ಜೀವನ ಸಾಗಿಸುತ್ತಿದ್ದೇವೆ. ಆದರೆ, ಯಾರೂ ನಮ್ಮ ಯೋಗಕ್ಷೇವು ವಿಚಾರಿಸಿಲ್ಲ. ಹೊಳೆಯ ನೀರು ಮನೆಯೊಳಗೆ ನುಗ್ಗಿ ದವಸ ಧಾನ್ಯಗಳು, ಬಟ್ಟೆ-ಬರೆಗಳು ಹಾಳಾಗಿವೆ. ನಾವು ನಿರ್ಮಿಸಿಕೊಂಡಿದ್ದ ಚಪ್ಪರದ ಮನೆ ಜಲಾವೃತಗೊಂಡ ಮೇಲೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ನೋಟಿಸ್ ನೀಡಿದ್ದಾರೆ ಎಂದು ನಜೀಮಾಬಿ ಶೇಖಬಡಿ ಹಾಗೂ ಶಿವಪ್ಪ ದೊಡ್ಡಫಕ್ಕಿರಪ್ಪ ಕಡೆಮನಿ ನೋವಿನಿಂದ ನುಡಿದರು.
ದೇವಸ್ಥಾನ ಜಲಾವೃತ
ಹಲಗೇರಿ-ತುಮ್ಮಿನಕಟ್ಟಿ ರಸ್ತೆಯಲ್ಲಿ ನಿಟ್ಟೂರು ಕ್ರಾಸ್‌ನಿಂದ ಯಲಬಡಗಿ ಗ್ರಾಮಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿ ಕುಮದ್ವತಿ ನದಿಯ ಪಕ್ಕದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನ ಮತ್ತು ರಸ್ತೆ ಜಲಾವೃತಗೊಂಡಿದೆ. ಯಲಬಡಗಿ ಗ್ರಾಮಕ್ಕೆ ತೆರಳುವ ಜನರು 3 ಕಿ.ಮೀ. ಸುತ್ತುವರೆಯಬೇಕಾಗಿದೆ.
ಸೇತುವೆ ನಿರ್ಮಿಸಬೇಕು
ನಿಟ್ಟುರೂ ಕ್ರಾಸ್‌ನಿಂದ ಯಲಬಡಗಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಚೌಡೇಶ್ವರಿ ದೇವಸ್ಥಾನದ ಹತ್ತಿರ ಹರಿದಿರುವ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು. ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ನಮ್ಮ ಹೊಲ-ನಮ್ಮ ರಸ್ತೆ ಯೋಜನೆಯಲ್ಲಿ ನಿಟ್ಟೂರು ಕ್ರಾಸ್‌ನಿಂದ-ಯಲಬಡಗಿ ವರೆಗೆ ರಸ್ತೆ ನಿರ್ಮಿಸಬೇಕೆಂದು ಚೌಡೇಶ್ವರಿ ದೇವಸ್ಥಾನದ ಸೇವಕರಾದ ನಾಗಪ್ಪ ಆಡಿನವರ, ಕೆ.ಎಸ್. ಚಳಗೇರಿ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.