ಪಕ್ಷ-ಪ್ರದೇಶ ರಾಜಕಾರಣ ತಪ್ಪಿದರೆ ಜಲ ತಂಟೆ ಪರಿಹಾರ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಆ. 5
ಪಕ್ಷ-ಪ್ರದೇಶದ ರಾಜಕಾರಣವಿಲ್ಲದಿದ್ದರೆ ಸರ್ಕಾರಗಳು ಹಾಗೂ ಸಾರ್ವಜನಿಕರ ನಡುವೆ ಕಗ್ಗಂಟಾಗಿರುವ ಜಲವಿವಾದ ಬಗೆಹರಿಸಲು ಸಾಧ್ಯ. ನಾವು ಒಂದೇ ರಾಷ್ಟ್ರದ ಪ್ರಜೆಗಳು, ಒಂದೇ ಕುಟುಂಬದವರು ಎಂಬ ಅರಿವಿರಬೇಕು ಎಂದು ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರತಿಪಾದಿಸಿದರು.
ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಹಾನಗಲ್ಲ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ 'ಜಲ ಸಹಕಾರ-ಸಮಸ್ಯೆ-ಸವಾಲು' ಚರ್ಚಾ ಸ್ಪರ್ಧೆಯಲ್ಲಿ, ಮನಬಂದಂತೆ ಪ್ರಕೃತಿಯನ್ನು ಬಳಸಿಕೊಂಡರೆ ಮನುಷ್ಯನಿಗೆ ಉಳಿಗಾಲವಿಲ್ಲ. ಸ್ವಾರ್ಥಕ್ಕಾಗಿ, ಕ್ಷಣಿಕ ಸುಖಕ್ಕಾಗಿ, ಭವಿಷ್ಯದ ಚಿಂತನೆ ಇಲ್ಲದೆ ನಾಡಿನ ಹಿತ ಬಲಿ ಕೊಡಲು ಮನುಷ್ಯ ಸಿದ್ಧನಾಗುತ್ತಾನೆ. ಜೀವ ಲೋಕ ರಕ್ಷಿಸುವ ಬದಲು ಭಕ್ಷಿಸುವವರೇ ಹೆಚ್ಚಾಗಿದ್ದಾರೆ ಎಂದು ಶಿರಗೋಡ ಪ್ರೌಢಶಾಲೆಯ ವಿದ್ಯಾರ್ಥಿನಿ ಪೃಥ್ವಿ ಲಕ್ಕೊಳ್ಳಿ, ಯಳವಟ್ಟಿ ಪ್ರೌಢಶಾಲೆಯ ಪರಿಮಳಾ ನರೇಗಲ್ಲ ಹಾಗೂ ನರೇಗಲ್ಲ ಪ್ರೌಢಶಾಲೆಯ ಶಾಂಭವಿ ಬಾಗವಾನರ ಅಭಿಪ್ರಾಯ ಮಂಡಿಸಿದರು.
ನೀರಿಲ್ಲದೆ ಜೀವವಿಲ್ಲ, ನೀರಿಗೆ ಬೆಲೆ ಕಟ್ಟುವ ಕಾಲ ಬಂದಿದೆ. ನೀರಿಗಾಗಿ ಯುದ್ಧಗಳೇ ನಡೆಯುತ್ತಿವೆ. ತೈಲಕ್ಕಿಂತ ನೀರಿಗೆ ಮಹತ್ವ ಹೆಚ್ಚಾಗಿದೆ. ಭೋಗಕ್ಕೆ ಇತಿ ಮಿತಿಗಳು ಬೇಕು. ಇವೆಲ್ಲ ಕೇವಲ ನಮಗಾಗಿ ಅಲ್ಲ, ಎಲ್ಲರೂ ಬಳಸುವುದು ಎಂಬ ಅರಿವಿರಬೇಕು. ಅರಿತರೆ ಬದುಕು ಮರೆತರೆ ಮರಣ ಕಾದಿದೆ ಎಂಬ ಎಚ್ಚರಿಕೆ ನೀಡಿದವರು ತಿಳವಳ್ಳಿಯ ಸ್ವರೂಪ ನಾರಪ್ಪನವರ, ಹಾನಗಲ್ಲಿನ ಪ್ರೀತಿ ಕಾಟೆಕರ, ಕೂಸನೂರಿನ ವಿನಾಯಕ ಪೂಜಾರ, ಕೊಪ್ಪರಸಿಕೊಪ್ಪದ ಜಯಲಕ್ಷ್ಮೀ ಆರ್., ಅರಳೇಶ್ವರದ ಲಕ್ಷ್ಮೀ ಚಿಕ್ಕೇರಿ, ಹಿರೇಬಾಸೂರಿನ ಎಚ್.ಎಂ. ರಾಕೇಶ.
ನೀರಿನ ಸಂರಕ್ಷಣೆ ಬಗ್ಗೆ ಚಿಕ್ಕಾಂಸಿ ಹೊಸೂರಿನ ನಂಜುಂಡೇಶ್ವರ ಸೊರಬದ, ಹಿರೇಕಣಗಿಯ ನಯನಾ ಸಾವಂತ, ಶೇಷಗಿರಿಯ ವಿನಾಯಕ ಗಡದರ, ಬಮ್ಮನಹಳ್ಳಿಯ ನಿಖಿತಾ ಚಿಕ್ಕಮಠ ತಮ್ಮ ವಿಚಾರಲಹರಿ ಹರಿಬಿಟ್ಟರು. ರಾಜ್ಯಗಳ ನಡುವಿನ ನೀರಿನ ತಂಟೆ ಪರಿಹರಿಸಲು ನದಿಜೋಡಣೆ ಅನಿವಾರ್ಯ ಎಂದು ಮಹಾರಾಜಪೇಟೆಯ ಸಂಗಮೇಶ ಬಂಕಾಪುರಮಠ, ಹಾನಗಲ್ಲಿನ ಪ್ರಶಾಂತ ಬೆಳ್ಳುಂಡಿ, ರೇಖಾ ಹುಳ್ಳಿಕುಪ್ಪಿ, ಎಸ್.ಕೆ. ಲಿಂಗೇರಿ, ಅಕ್ಕಿಆಲೂರಿನ ಚಂದ್ರಕಲಾ ಬಯಲುಸೀಮೆ, ರಾಬಿಯಾ ಚಾವುಸ್, ಮಂತಗಿಯ ಕುಮದ್ವತಿ ಮೇಸ್ತ್ರಿ, ಕಂಚಿನೆಗಳೂರಿನ ದೇವರಾಜ ಇಂಗಳಿಕಿ ಪ್ರತಿಪಾದಿಸಿದರು.
ನಾಳೆಗಾಗಿ ಪರಿಸರ ಉಳಿಸಿ. ಅಗತ್ಯಕ್ಕೆ ತಕ್ಕಷ್ಟೇ ಬಳಸಿ. ಕಾವೇರಿ, ಕೃಷ್ಣೆಯಂತಹ ನದಿ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಿ ಎಂದು ವಿದ್ಯಾರ್ಥಿಗಳು ಕಳಕಳಿಯಿಂದ ಆಗ್ರಹಿಸಿದರು.
ಸಾಹಿತಿಗಳಾದ ಮಾರುತಿ ಶಿಡ್ಲಾಪುರ, ಉದಯ ನಾಸಿಕ, ಟಿ. ಪ್ರಭಾಕರ ನಿರ್ಣಾಯಕರಾಗಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಸಮನ್ವಯಾಧಿಕಾರಿ ರಂಗಸ್ವಾಮಿ ಕಾರ್ಯಕ್ರಮ ಆಯೋಜಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

