ಹಾವೇರಿ

ಸಾಲ ಮನ್ನಾ, ಬೆಳೆವಿಮೆ ಹಣ ಬಿಡುಗಡೆ ಮಾಡಿ

Published On :

ಬ್ಯಾಡಗಿ: ಸರ್ಕಾರ ಘೋಷಿಸಿದಂತೆ ರು. 25 ಸಾವಿರ ವರೆಗಿನ ಸಾಲ ಮನ್ನಾ ಹಾಗೂ ಬೆಳೆವಿಮೆ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಹಸಿರು ಸೇನೆ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಬೆಳೆಸಾಲ ಮನ್ನಾ ್ನಮಾಡಿ ನಾಲ್ಕೈದು ತಿಂಗಳು ಮುಗಿದಿವೆ. ರೈತರು ಮತ್ತೊಂದು ಬೆಳೆ ಬಿತ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಖಾಸಗಿಯವರ ಬಳಿ ಸಾಲ ಪಡೆದುಕೊಂಡಿದ್ದಾರೆ. ಹಿಂದೆ ಮನ್ನ್ನಾ ಮಾಡಿದ ಸಾಲದ ಹಣ ಜಮೆ ಆಗುವ ವರೆಗೂ ಹೊಸ ಸಾಲ ವಿತರಣೆ ನಡೆಯುತ್ತಿಲ್ಲ. ಹೀಗಾಗಿ, ಸಹಕಾರ ಸಂಘಗಳೂ ಇಕ್ಕಟ್ಟಿನಲ್ಲಿ ಸಿಲುಕಿವೆ. ರೈತರು ನಿತ್ಯ ಸಹಕಾರ ಸಂಘಗಳಿಗೆ ಅಲೆದಾಡುವಂತಾಗಿದೆ ಎಂದರು.
ರೈತರ ಸಾಲಕ್ಕಾಗಿ ದಿನಾಂಕ ನಿಗದಿ ಮಾಡುವ ಸರ್ಕಾರ ಸಾಲ ಮನ್ನ್ನಾದ ಹಣ ನೀಡಲು ವಿಳಂಬ ಧೋರಣೆ ತಾಳುತ್ತಿರುವುದು ಯಾವ ನ್ಯಾಯ? ಎರಡು ತಿಂಗಳಿನಿಂದ ಮೂರಾಲ್ಕು ಬಾರಿ ಮನವಿ ನೀಡಿದ್ದರೂ ಸ್ಪಂದಿಸುತ್ತಿಲ್ಲ. ಹೀಗಾದರೆ ರೈತರ ಗತಿಯೇನು? ಸರ್ಕಾರ ಸ್ಪಂದಿಸದಿದ್ದರೆ ಹೋರಾಟದ ಹಾದಿ ಅನಿವಾರ್ಯ ಎಂದು ಆಕ್ರೋಶವ್ಯಕ್ತಪಡಿಸಿದರು.
ಕಾಮಗಾರಿ ಬಗ್ಗೆ ನಿರ್ಲಕ್ಷ್ಯ
ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಶಶಿಧರಸ್ವಾಮಿ ಛತ್ರದಮಠ ಮಾತನಾಡಿ, ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸದೆ ಅಧಿಕಾರಿಗಳು ಸುಳ್ಳು ಭರವಸೆ ನೀಡುತ್ತಿದ್ದಾರೆ. ಹೀಗಾಗಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಈಗಾಗಲೇ ನಿರ್ಮಿಸಲಾದ ಕಾಲುವೆಗಳು ಕೆಲವೆಡೆ ದುಸ್ಥಿತಿಯಲ್ಲಿದ್ದು,  ಕಾಮಗಾರಿ ಕುರಿತು ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದರು.
ಪಹಣಿ ಪತ್ರ ಪಡೆಯಲು ತಾಲೂಕು ಕೇಂದ್ರದ ಬಳಿ ಮಳೆ ಹಾಗೂ ಬಿಸಿಲಿನಲ್ಲಿ ರೈತರು ಸಾಲು ನಿಲ್ಲಬೇಕಾಗಿದೆ. ಆದರೆ ರೈತರಿಗಾಗುವ ತೊಂದರೆಯನ್ನು ಕೇಳಲು ಅಧಿಕಾರಿಗಳು ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ತಾಲೂಕಾಡಳಿತ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಶಹರ ಘಟಕದ ಅಧ್ಯಕ್ಷ ಚಿಕ್ಕಪ್ಪ ಛತ್ರದ, ರೈತ ಮುಂಖಡರಾದ ಉಳಿವೆಪ್ಪ ಭೋವಿ, ಮೌನೇಶ ಬಡಿಗೇರ, ಮಂಜಣ್ಣ ಬಾರ್ಕಿ, ವಿರೂಪಾಕ್ಷಪ್ಪ ಹಿರೇಹಳ್ಳಿ, ವೀರಭದ್ರಗೌಡ ಹೊಮ್ಮರಡಿ, ಮಲ್ಲೇಶಪ್ಪ ಚಿಕ್ಕಳ್ಳಿ, ಪ್ರಭು ಎಲಿ, ಮಲಕಪ್ಪ ಹಾದರಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.