ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ: ಮನವಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಆ. 13
ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕು. ಕೇಂದ್ರದ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ತಾಲೂಕಿನ ಹುಲ್ಲತ್ತಿ ಗ್ರಾಮದ ವಂದೇ ಮಾತರಂ ಯುವಕ ಸ್ವಯಂ ಸೇವಾ ಸಮಿತಿಯ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಂದೇ ಮಾತರಂ ಸ್ವಯಂ ಸೇವಾ ಸಮಿತಿಯ ಮಾರ್ಗದರ್ಶಕ ಪರಮೇಶ ಕಟ್ಟಿಮನಿ ಮಾತನಾಡಿ, ವಿಶ್ವಕ್ಕೆ ಶಾಂತಿ ಸಂದೇಶ ಸಾರಿರುವ ಭಾರತ ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್ ಶರೀಫ್ ಅವರೊಂದಿಗೆ ನಡೆಸಿದ ಮಾತುಕತೆಯಂತೆ ಗಡಿಯಲ್ಲಿ ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ಪಾಕಿಸ್ತಾನ ಆಗಾಗ ಕದನ ವಿರಾಮ ಉಲ್ಲಂಘಿಸಿದೆ. ಐವರು ಭಾರತೀಯ ಸೈನಿಕರ ಹತ್ಯೆಗೂ ಕಾರಣವಾಗಿದೆ. ಪಾಕಿಸ್ತಾನದ ಈ ಉದ್ಧಟತನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಭಾರತ ಮಾತೆಯ ಸಿಂಧೂರ
ಕೇಂದ್ರದ ಯುಪಿಎ ಸರ್ಕಾರ ಮೌನವಾಗಿದ್ದು, ದೇಶಕ್ಕೆ ಅದರಿಂದ ರಕ್ಷಣೆ ಸಿಗುವುದು ಅಸಾಧ್ಯ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ರಾಷ್ಟ್ರಪತಿಗಳು ತಕ್ಷಣ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಜಗದೀಶ ಕೆರೂಡಿ ಮಾತನಾಡಿ, ಪಾಕಿಸ್ತಾನದ ಸೈನಿಕರು ಕದ್ದು ಮುಚ್ಚಿ ಭಾರತೀಯ ಯೋಧರನ್ನು ಹತ್ಯೆ ಮಾಡುತ್ತಿದೆ. ಇದು ಶಾಂತಿಪ್ರಿಯ ದೇಶಕ್ಕೆ ಮಾಡಿದ ಅಪಮಾನ. ಭಾರತವು ಕೂಡಲೇ ಪಾಕಿಸ್ತಾನದೊಂದಿಗೆ ಹೊಂದಿರುವ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಪಾಕ್ನಲ್ಲಿರುವ ಭಾರತೀಯ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಳ್ಳಬೇಕು. ಪಾಕಿಸ್ತಾನದಲ್ಲಿಯೇ ಅಡಗಿ ಕುಳಿತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಹಫೀಜ್ ಸೈಯದ್ ಹಾಗೂ ಆತನ ಬೆಂಬಲಿಗರನ್ನು ಗಲ್ಲಿಗೇರಿಸಬೇಕು ಎಂದು ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರು.
ಜಮ್ಮು-ಕಾಶ್ಮೀರ ಭಾರತ ಮಾತೆಯ ಸಿಂಧೂರವಿದ್ದಂತೆ. ಅದನ್ನು ಕಿತ್ತುಕೊಳ್ಳಲು ಪಾಕಿಸ್ತಾನ ಹಗಲುಗನಸು ಕಾಣುತ್ತಿದೆ. ಇಂಥ ಪ್ರಯತ್ನಕ್ಕೆ ಮುಂದಾದರೆ ಪಾಕಿಸ್ತಾನದ ಸೊಕ್ಕಡಗಿಸಲು ಭಾರತೀಯರು ಸಿದ್ಧರಿದ್ದಾರೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಎಚ್. ಶಿವಕುಮಾರ್ ಮನವಿ ಸ್ವೀಕರಿಸಿದರು. ರಾಜೇಶ ದೊಡ್ಮನಿ, ಮಂಜುನಾಥ ಕೂರಗುಂದ, ನಾಗರಾಜ ವಾಲಿಕಾರ, ಮಾಲತೇಶ ವಡ್ಡರ, ರಜನಿ ವಡ್ಡರ, ಮಾಲತೇಶ ಕಜ್ಜರಿ ಮುಂತಾದವರು ಇದ್ದರು.
--
20ರಂದು ವಿಜ್ಞಾನಗೋಷ್ಠಿ
ಹಾವೇರಿ: 'ಜಲ ಸಹಕಾರ: ಸಮಸ್ಯೆಗಳು, ಸವಾಲುಗಳು' ಕುರಿತು ಜಿಲ್ಲಾ ಮಟ್ಟದ ವಿಜ್ಞಾನ ಗೋಷ್ಠಿ ಆ. 20ರಂದು ಬೆಳಗ್ಗೆ 10 ಗಂಟೆಗೆ ನಗರದ ಹುಕ್ಕೇರಿಮಠದ ಶ್ರೀ ಶಿವಲಿಂಗೇಶ್ವರ ಡಿ.ಇಡಿ. ಕಾಲೇಜಿನಲ್ಲಿ ಜರುಗಲಿದೆ. ತಾಲೂಕು ಮಟ್ಟದ ವಿಜೇತ ವಿದ್ಯಾರ್ಥಿಗಳು ಅರ್ಹರು. ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು ಎಂದು ಪ್ರೌಢಶಾಲಾ ಮುಖ್ಯಾಧ್ಯಾಪಕರಿಗೆ ತಿಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಎಂ.ಡಿ. ಬಳ್ಳಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

