ಹಾವೇರಿ

ರಸಗೊಬ್ಬರ ಬಳಕೆ ನಿಲ್ಲಿಸಿ, ಆರ್ಥಿಕ ಹೊರೆ ತಗ್ಗಿಸಿ

Published On :

ಬ್ಯಾಡಗಿ: ರಿಯಾಯಿತಿ ದರದಲ್ಲಿ ಗೊಬ್ಬರ ವಿತರಣೆಗೆ ಕೇಂದ್ರ ಸರ್ಕಾರ ರು.  1.17 ಲಕ್ಷ ಕೋಟಿ ವಿನಿಯೋಗಿಸುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಗೊಬ್ಬರ ಬಳಕೆ ಮಾಡುವ ಮೂಲಕ ಬೆನ್ನೆಲುಬಾಗಿರುವ ರೈತರು ದೇಶದ ಆರ್ಥಿಕ ಹೊರೆಯನ್ನು ತಗ್ಗಿಸುವಂತೆ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಪರೀಕ್ಷೆ ವಿಜ್ಞಾನಿ ಡಾ೤ ಮಲ್ಲಿಕಾರ್ಜುನ ಗದ್ದನಕೇರಿ ಕರೆ ನೀಡಿದರು.
ಕೃಷಿ ಇಲಾಖೆ ತಾಲೂಕಿನ ಬಡಮಲ್ಲಿ ಗ್ರಾಮದಲ್ಲಿ ಕೃಷಿ ತಂತ್ರಜ್ಞಾನ ನಿರ್ವಹಣೆ ಸಂಸ್ಥೆ (ಆತ್ಮ) ಯೋಜನೆಯಡಿ ರಂಜಕಯುಕ್ತ ಗೊಬ್ಬರಗಳ ಬಳಕೆ ಕುರಿತು ರೈತರಿಗಾಗಿ ಏರ್ಪಡಿಸಿದ್ದ ತರಬೇತಿ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೆಜಿಗೆ ರು.  40ರಂತೆ ಪ್ರತಿ ಗ್ರಾಮಕ್ಕೆ ಸರಾಸರಿ ರು.  20 ಲಕ್ಷ ಸಹಾಯಧನ ವಿತರಿಸುತ್ತಿರುವ ಸರ್ಕಾರ ಸಾಕಷ್ಟು ಆರ್ಥಿಕ ಹೊರೆ ಅನುಭವಿಸಿದೆ. ಹೀಗಾಗಿ, ಸರ್ಕಾರ ಒಂದು ವರ್ಷದಿಂದ ಸಹಾಯಧನ ಹಿಂಪಡೆದಿದೆ. ಅತಿಯಾದ ರಸಗೊಬ್ಬರ ಬಳಕೆ ಮಾಡುವ ಮೂಲಕ ಫಲವತ್ತಾದ ಕೃಷಿ ಭೂಮಿಯನ್ನು ಸತ್ವಹೀನ ಮಾಡುತ್ತಿರುವ ಕೃಷಿಕರು ಇಳುವರಿ ಕುಂಠಿತಗೊಂಡ ಪರಿಣಾಮ ಸಾಲದ ಶೂಲಕ್ಕೆ ಸಿಲಕುತ್ತಿದ್ದಾರೆ. ಹೀಗಾಗಿ, ಒಂದೇ ಅಂಶವಿರುವ ಗೊಬ್ಬರಕ್ಕೆ ಮುಗಿಬೀಳದೆ ಕೃಷಿ ಚಟುವಟಿಕೆ ಮೇಲಿನ ವೆಚ್ಚ ಕಡಿತಗೊಳಿಸಿ ಸ್ವಾವಲಂಬಿ ಬದುಕು ನಡೆಸುವಂತೆ ಕರೆ ನೀಡಿದರು.
ರಂಜಕಯುಕ್ತ ಗೊಬ್ಬರಗಳನ್ನು ಸಸಿಗಳಿಗೆ ನೀಡುವುದಕ್ಕಿಂತ ಮುಂಚಿತವಾಗಿ ಮಣ್ಣಿಗೆ ಸೇರಿಸಿದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು. ಡಿಎಪಿ ಬದಲಿಗೆ ಈ ಹಂತದಲ್ಲಿ ಸಿಂಗಲ್ ಸೂಪರ್ ಪಾಸ್ಪೇಟ್ ಬಳಸುವುದು ಸೂಕ್ತ. ಮುಖ್ಯವಾಗಿ ಶಿಲಾರಂಜಕ (ರಾಕ್ ಪಾಸ್ಪೇಟ್) ಆಮ್ಲ ಮಣ್ಣಿಗೆ ಪರಿಣಾಮಕಾರಿ ರಸಗೊಬ್ಬರವಾಗಿದ್ದು, ತಿಪ್ಪೆ ಗೊಬ್ಬರದಲ್ಲಿ ಅದನ್ನು ಬೆರೆಸಿ, ಬಳಸುವುದು ಸೂಕ್ತ. ಡಿಎಪಿ ಲಭ್ಯವಿಲ್ಲದ ಸಂದರ್ಭದಲ್ಲಿ ಅದೇ ಗೊಬ್ಬರಕ್ಕೆ ಜೋತು ಬೀಳದೆ ಸಂಯುಕ್ತ ಗೊಬ್ಬರಗಳಾದ 10:26:26, 19:19:19, 15:15:15, 20:20:20 ಬಿತ್ತನೆ ಸಮಯದಲ್ಲಿ ಬಳಸುವುದು ಸೂಕ್ತವೆಂದರು.
ಸಹಾಯಕ ಕೃಷಿ ನಿರ್ದೇಶಕ ಟಿ.ಎಚ್. ನಟರಾಜ ಮಾತನಾಡಿ, ಬೆಳೆಯಲ್ಲಿ ರಂಜಕದ ಕೊರತೆ ಕಂಡುಬಂದಾಗ ಶೇ. 2ರಷ್ಟು ಡಿಎಪಿ ಸಿಂಪರಣೆಯಿಂದ ಉತ್ತಮ ಬೆಳವಣಿಗೆ ಹಾಗೂ ಇಳುವರಿ ಪಡೆಯಲು ಸಾಧ್ಯ. ಆದರೆ, ಇತ್ತೀಚೆಗೆ ರೈತರು ಅನಗತ್ಯವಾಗಿ ಡಿಎಪಿ ಗೊಬ್ಬರಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ ಎಂದರು. ಭೂಚೇತನ ಯೋಜನೆಯಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುವ ಜಿಪ್ಸಂ, ಸತುವಿನ ಸಲ್ಫೇಟ್, ರಂಜಕ ಕರಗಿಸುವ ಬ್ಯಾಕ್ಟೀರಿಯಾ (ಪಿಎಸ್‌ಬಿ), ಬೇವಿನೆಣ್ಣೆ, ವ್ಯಾಮ್, ಬೋರಾಕ್ಸ್ ಇವುಗಳ ಸಮರ್ಪಕ ಬಳಕೆಯಿಂದ ರಾಸಾಯನಿಕ ಗೊಬ್ಬರಗಳ ಮೇಲಿನ ಒತ್ತಡ ಕಡಿಮೆ ಮಾಡುವ ಜತೆಗೆ ಅಧಿಕ ಇಳುವರಿ ಪಡೆದು ಸ್ವಾವಲಂಬಿಗಳಾಗಿ ಎಂದರು. ಸಹಾಯಕ ಕೃಷಿ ಅಧಿಕಾರಿ ಕೆ.ಬಿ. ಹಿರೇಹಾಳ ಸ್ವಾಗತಿಸಿದರು. ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕ ಅಜಗಣ್ಣನವರ ನಿರೂಪಿಸಿದರು. ಅನುವುಗಾರ ಅಶೋಕ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.